ದಲಿತನಿಗೆ ಹಂಚಿಕೆಯಾಗಿದ್ದ ಸೈಟ್ ನಲ್ಲಿ ಸಿಎಂ ಮನೆ ನಿರ್ಮಾಣ: ಕೇಂದ್ರ ಸಚಿವ ಎಚ್.ಡಿ.ಕೆ ಬಾಂಬ್
2024-09-14 03:39:24
ಬೆಂಗಳೂರು, ಸೆ.14: ನಾನು ತಪ್ಪು ಮಾಡಿಲ್ಲ, ಮುಂದೆಯೂ ಮಾಡಲ್ಲ, ನನಗೆ ನ್ಯಾಯ ಸಿಗುವ ವಿಶ್ವಾಸ ಇದೆ ಎಂದು ಮುಡಾ ಪ್ರಕರಣದ ಬಗ್ಗೆ ಸಿಎಂ ಸಿದ್ದರಾಮಯ್ಯ ನಿನ್ನೆ ರಾಮನಗರದಲ್ಲಿ ಆಡಿರುವ ಮಾತು. ಪ್ರಕರಣದ ವಿಚಾರಣೆ ಮುಗಿಸಿರುವ ಹೈಕೋರ್ಟ್ ತೀರ್ಪು ಕಾಯ್ದಿರಿಸಿದೆ. ಈ ಮಧ್ಯೆ ಮೂಡಾ ಆರೋಪದ ಬಳಿಕ ಸಿಎಂ ಸಿದ್ದರಾಮಯ್ಯ ವಿರುದ್ಧ ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಮತ್ತೊಂದು ಗಂಭೀರ ಆರೋಪ ಮಾಡಿದ್ದಾರೆ.
ನಗರದಲ್ಲಿ ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಡಿಸಿಎಂ ಆಗಿದ್ದಾಗ ಸಿದ್ದರಾಮಯ್ಯನವರು ಒಂದು ಮನೆ ಕಟ್ಟಿದ್ದರು. ಯಾರ ಜಾಗದಲ್ಲಿ ನೀವು ಮನೆ ಕಟ್ಟಿದ್ದೀರಾ, ಆ ದಾಖಲೆ ಬೇಕಾ? ದಲಿತ ಸಿಎ ಸೈಟ್ ಮುಡಾದಲ್ಲಿ ಅಲರ್ಟ್ ಆಗಿದ್ದ ಸೈಟ್ನಲ್ಲಿ ಅಕ್ರಮವಾಗಿ ಮನೆ ಕಟ್ಟಿದವರು ಯಾರು? ಎಂದು ಪ್ರಶ್ನಿಸಿದ್ದಾರೆ.
15 ಸೈಟ್ ತಗೊಂಡಿರುವುದಲ್ಲದೇ ಸೀರಿಸ್ ಆಫ್ ಇದೆ, ಮೈಸೂರಿನಲ್ಲಿ. ವಿಕಲಚೇತನ ದಲಿತ ವ್ಯಕ್ತಿ 24 ಸಾವಿರ ರೂ. ನೀಡಿ ಸೈಟ್ ಪಡೆಯುತ್ತಾರೆ. ಸಾಕಮ್ಮ ಎಂಬುವರ ಹೆಸರಿನಲ್ಲಿ ಸುಳ್ಳು ದಾಖಲೆಗಳನ್ನು ಸೃಷ್ಟಿ ಮಾಡಿ 10 ಸಾವಿರ ರೂ. ಸ್ಕ್ವಯರ್ ಫೀಟ್ ಜಾಗ ಅಕ್ರಮವಾಗಿ ಪಡೆಯುತ್ತಾರೆ. ಆಮೇಲೆ ಸೈಟ್ ತಗೊಂಡವನು ಯಾರೋ ಮನೆ ಕಟ್ಟಿದ್ದಾರೆಂದು ನೋಡುವುದಕ್ಕೆ ಬರ್ತಾರೆ. ಈ ಬಗ್ಗೆ ನನ್ನ ಬಳಿ ಈಗಲೂ ದಾಖಲೆ ಇದೆ ಎಂದು ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ.
ನನ್ನದು ತೆರೆದ ಪುಸ್ತಕ ಅಂತಾ ಸಿದ್ದರಾಮಯ್ಯ ಯಾವಾಗಲೂ ಹೇಳುತ್ತಾರೆ. ಅದನ್ನ ತೆಗೆಯಿರಿ ಯಾರಿಗೆ ನೀವು ಸೇಲ್ ಮಾಡಿದ್ದೀರಿ? ಇನ್ನೂ ಯಾರ ಕೈಯಲ್ಲಿದೆ ಸೈಟ್, ಹೆಸರಿಗೆ ಮಾರಾಟ ತೋರಿಸಿಕೊಂಡಿದ್ದಾರೆ. ಅದನ್ನು ತೆಗೆದರೆ ಮತ್ತೊಂದು ರಾಮಾಯಣ ಶುರುವಾಗುತ್ತೆ ಎಂದು ಸಿಎಂ ಸಿದ್ದರಾಮಯ್ಯ ವಿರುದ್ಧ ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.
ಇನ್ನು ಹಾಲಿನ ದರ ಏರಿಕೆ ಬಗ್ಗೆ ಸಿಎಂ ಸಿದ್ದರಾಮಯ್ಯ ಸುಳಿವು ನೀಡಿದ್ದಾರೆ. ಆದರೆ ಯಾರ ಬಳಿಯೋ ಕಿತ್ತುಕೊಂಡು ಯಾರಿಗೊ ದಾನ ಮಾಡಿದ ರೀತಿ ಇದೆ. ಗ್ರಾಹಕರ ಮೇಲೆ ಹೊರೆ ಹಾಕಿ ರೈತರಿಗೆ ಪ್ರೋತ್ಸಾಹ ಧನ ಕೊಡುತ್ತೇವೆ ಅಂತಾರೆ ಎಂದು ಎಚ್.ಡಿ.ಕೆ ಹಾಲಿನ ದರ ಏರಿಕೆ ವಿರುದ್ಧ ಕಿಡಿಕಾರಿದರು.
ಹಾಲು ಉತ್ಪಾದಕರ ಸಂಘದ ಜಿಲ್ಲೆಗಳಲ್ಲಿ ಒಂದುವರೆ ರೂಪಾಯಿ, ಎರಡು ರೂಪಾಯಿ ಯಾಕೆ ಕಡಿಮೆ ಮಾಡಿದ್ದೀರಾ? ಎಲ್ಲೆಲ್ಲಿ ಕಡಿಮೆ ಮಾಡಿದ್ದಿರಲ್ಲಾ ಅಲ್ಲಿ ಬೆಲೆ ಏರಿಕೆ ಮಾಡಿದ್ದಿರಲ್ಲಾ? ಆ ದುಡ್ಡನ್ನ ರೈತರಿಗೆ ಕೊಡುತ್ತೇವೆ ಅಂತ ಹೇಳ್ತಿದ್ದಿರಲ್ಲಾ? ಹಾಗಾದ್ರೆ ಯಾವ ಯಾವ ಜಿಲ್ಲೆಯಲ್ಲಿ ಎಷ್ಟೆಷ್ಟು ಹಾಲಿನ ಪ್ರೋತ್ಸಾಹ ದರ ಕಡಿಮೆ ಮಾಡಿದ್ದಿರಾ? ದಾಖಲೆ ಇಲ್ವಾ, ಪಟ್ಟಿ ಇಲ್ವಾ? ರೈತರಿಗೆ ಕೊಡುತ್ತೇವೆ ಅಂತ ಸುಳ್ಳು ಹೇಳಿ, ಒಂದು ಕಡೆ ರೈತರಿಗೂ ಇಲ್ಲಾ, ಗ್ರಾಹಕರಿಗೂ ಇಲ್ಲಾ. ದುಡ್ಡು ಮಾತ್ರ ಸರ್ಕಾರ ವಸೂಲಿ ಮಾಡುತ್ತಿದೆ. ಇದು ನಿಮ್ಮ ಹವ್ಯಾಸ ಎಂದು ವಾಗ್ದಾಳಿ ಮಾಡಿದ್ದಾರೆ.
comments
Log in to write reviews