ನಟ ದರ್ಶನ್ ಅವರ ಆಪರೇಷನ್ ಅಗತ್ಯದ ಬಗ್ಗೆ ಗೊಂದಲ...
2024-11-11 01:08:01
ಬೆಂಗಳೂರು, ನ.11: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ತಕರಣದಲ್ಲಿ ಎ-2 ಆರೋಪಿಯಾಗಿ ನ್ಯಾಯಾಂಗ ಬಂಧನದಲ್ಲಿದ್ದ ನಟ ದರ್ಶನ್ ಅವರು ಜಾಮೀನು ಪಡೆದು 2 ವಾರ ಕಳೆಯುತ್ತಾ ಬಂದಿದೆ. ಇದಾದ ಬಳಿಕ ದರ್ಶನ್ ಅವರು ಆಸ್ಪತ್ರೆ ಸೇರಿದ್ದಾರೆ. ದರ್ಶನ್‌ಗೆ ಆಪರೇಷನ್ ಅಗತ್ಯ ಇದೆ ಎಂದು ವಕೀಲರು ಬಲವಾಗಿ ವಾದಿಸಿದ್ದರು. ಆದರೆ, ಆಸ್ಪತ್ರೆ ಸೇರಿ 12 ದಿನಗಳಾದರೂ ದರ್ಶನ್ ಆಪರೇಷನ್ ಮಾಡಿಸಿಕೊಂಡಿಲ್ಲ. ಇದು ಸದ್ಯ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
ದರ್ಶನ್ ಅವರನ್ನು ಬಳ್ಳಾರಿಯ ಜೈಲಿನಲ್ಲಿ ಇಡಲಾಗಿತ್ತು. ಅಲ್ಲಿ ಅವರಿಗೆ ತೀವ್ರ ಬೆನ್ನುನೋವು ಕಾಡಿತ್ತು. ಅವರನ್ನು ಪರೀಕ್ಷೆಗೆ ಒಳಪಡಿಸಿದ್ದ ಬಳ್ಳಾರಿಯ ವಿಮ್ಸ್ ಆಸ್ಪತ್ರೆ ವೈದ್ಯರು, ದರ್ಶನ್‌ಗೆ ಆಪರೇಷನ್ ಅವಶ್ಯಕತೆ ಎಂದು ವರದಿ ನೀಡಿದ್ದರು. ಈ ವರದಿಯನ್ನೇ ಆಧರಿಸಿ ದರ್ಶನ್ ಪರ ವಕೀಲ ಸಿ.ವಿ ನಾಗೇಶ್ ವಾದ ಮಂಡಿಸಿದ್ದರು. ದರ್ಶನ್‌ಗೆ ಶಸ್ತ್ರಚಿಕಿತ್ಸೆಗೆ ಅವಕಾಶ ನೀಡಬೇಕು ಎಂದಿದ್ದರು. ಅಂತೆಯೇ ಹೈಕೋರ್ಟ್ ಮಧ್ಯಂತರ ಜಾಮೀನು ನೀಡಿತ್ತು. ಆದರೆ, ಇದುವರೆಗೂ ದರ್ಶನ್ ಆಪರೇಷನ್ ಮಾಡಿಸಿಕೊಂಡಿಲ್ಲ.
ಸದ್ಯ ಆಸ್ಪತ್ರೆಯಲ್ಲಿ ದರ್ಶನ್‌ಗೆ ಚಿಕಿತ್ಸೆ ಮುಂದುವರಿದಿದೆ. ದರ್ಶನ್ ಫಿಸಿಯೋ ಥೆರೆಪಿ ಮಾಡಿಸಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ. ಇದಲ್ಲದೆ, ಆಸ್ಪತ್ರೆಯಲ್ಲಿ ಸ್ಕ್ಯಾನ್ ಕೂಡ ಮಾಡಿಸಿದ್ದಾರೆ. ಈ ವಿಚಾರದ ಕುರಿತು ಸಾಮಾಜಿಕ ವಲಯದಲ್ಲಿ ಚರ್ಚೆ ಆಗುತ್ತಿದೆ.
ಹೈಕೋರ್ಟ್ ದರ್ಶನ್‌ಗೆ ನೀಡಿರುವುದು ಕೇವಲ 6 ವಾರಗಳ ಗಡುವು ಮಾತ್ರ. ಈಗಾಗಲೇ ಅದರಲ್ಲಿ 2 ವಾರ ಪೂರ್ಣಗೊಳ್ಳುತ್ತಾ ಬಂದಿದೆ. ಒಂದೊಮ್ಮೆ ಕೊನೆಯ ಹಂತದಲ್ಲಿ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡರೆ ವಿಶ್ರಾಂತಿಗಾಗಿ ದರ್ಶನ್ ಕೋರ್ಟ್ ಬಳಿ ಮತ್ತಷ್ಟು ಸಮಯಾವಕಾಶ ಕೇಳುವ ಸಾಧ್ಯತೆ ಇರುತ್ತದೆ.
ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ದರ್ಶನ್ ಅವರು ಜೂನ್ 11ರಂದು ಬಂಧಿತರಾದರು. ಸುಮಾರು 130 ದಿನಗಳ ಕಾಲ ಅವರು ಜೈಲಿನಲ್ಲೇ ಇದ್ದರು. ಅವರ ಜಾಮೀನು ಅರ್ಜಿ ಕೆಳಹಂತದ ಕೋರ್ಟ್ನಲ್ಲಿ ರದ್ದಾಗಿತ್ತು. ಹೀಗಾಗಿ, ಹೈಕೋರ್ಟ್ ಮೊರೆ ಹೋಗಿದ್ದ ದರ್ಶನ್, ಅನಾರೋಗ್ಯದ ಕಾರಣ ನೀಡಿ ಮಧ್ಯಂತರ ಜಾಮೀನು ಪಡೆದಿದ್ದರು.
ಇತ್ತೀಚೆಗೆ ಮಾಜಿ ಸಂಸದೆ ಸುಮಲತಾ ಅಂಬರೀಶ್ ಅವರು ದರ್ಶನ್ ಬಗ್ಗೆ ಮಾತನಾಡಿದ್ದರು. ‘ದರ್ಶನ್‌ಗೆ ಬೆನ್ನುನೋವು ತುಂಬಾ ಇದೆ. ಆದರೆ ಸರ್ಜರಿ ಅವರಿಗೆ ಇಷ್ಟ ಇಲ್ಲ ಅಂತ ನಾನು ಕೇಳ್ಪಟ್ಟೆ. ಸರ್ಜರಿ ಮಾಡಿದರೆ ರಿಕವರಿ ಸಾಕಷ್ಟು ಸಮಯ ಬೇಕಾಗುತ್ತದೆ. ಅವರ ಬಳಿ ಯಾವುದೇ ಫೋನ್ ಇಲ್ಲ. ಹೀಗಾಗಿ ಅವರ ಪತ್ನಿ ಜೊತೆ ನಾವು ಸಂಪರ್ಕ ಮಾಡಬೇಕು ಅಷ್ಟೇ’ ಎಂದು ಸುಮಲತಾ ಅಂಬರೀಷ್ ಅವರು ಹೇಳಿದ್ದರು.
comments
Log in to write reviews