ರಿಟ್ ಅರ್ಜಿಯಲ್ಲಿ ಸಿದ್ದರಾಮಯ್ಯ ಕೋರ್ಟ್ ಕಣ್ತಪ್ಪಿಸಿದ್ದಾರೆ: ದೂರುದಾರ ಸ್ನೇಹಮಯಿ ಕೃಷ್ಣ ಗಂಭೀರ ಆರೋಪ
2024-08-22 01:35:22
ಮೈಸೂರು, ಆ.22: ಮುಡಾ ಹಗರಣದ ಸಂಬಂಧ ರಿಟ್ ಅರ್ಜಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನ್ಯಾಯಾಲಯದ ಕಣ್ತಪ್ಪಿಸಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತ ಸ್ನೇಹಮಹಿ ಕೃಷ್ಣ ಗಂಭೀರ ಆರೋಪ ಮಾಡಿದ್ದಾರೆ. ಇವರು ಸಿಎಂ ವಿರುದ್ಧ ಮುಡಾ ಹಗರಣ ವಿಚಾರವಾಗಿ ದೂರು ನೀಡಿರುವವರಲ್ಲಿ ಒಬ್ಬರಾಗಿದ್ದಾರೆ.
ಪತ್ನಿ ಪಾರ್ವತಿ ಮುಡಾಗೆ ಪತ್ರ ಬರೆದಿರುವುದು ಸಿದ್ದರಾಮಯ್ಯ ಅವರಿಗೆ ಮೊದಲೇ ಗೊತ್ತಿತ್ತು. ಸಿದ್ದರಾಮಯ್ಯ ಒಟ್ಟು 713 ಪುಟಗಳ ದಾಖಲೆ ಒಳಗೊಂಡ ರಿಟ್ ಅರ್ಜಿ ಹಾಕಿದ್ದಾರೆ. 531ನೇ ಪುಟವಾಗಿ ಪಾರ್ವತಿ ಬರೆದ ಅರ್ಜಿಯ ಮೊದಲ ಪುಟ ಇದೆ. ಆದರೆ 532ನೇ ಪುಟದಲ್ಲಿ ಪಾರ್ವತಿ ಅವರು ಬರೆದ ಪತ್ರದ ಎರಡನೇ ಪುಟ ಇಲ್ಲ ಎಂದು ಅವರು ದೂರಿದ್ದಾರೆ.
ಅದರಲ್ಲಿಯೂ ಎರಡನೇ ಪುಟಕ್ಕೆ ವೈಟ್ನರ್ ಹಾಕಿ ಸಾಲೊಂದನ್ನು ಅಳಿಸಲಾಗಿದೆ. 532ನೇ ಪುಟದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ನಡಾವಳಿ ಪತ್ರ ಇದೆ. ವೈಟ್ನರ್ ಹಾಕಿ ಅಳಿಸಿರುವ ಕಾರಣಕ್ಕಾಗಿ ಎರಡನೇ ಪುಟ ಬಿಟ್ಟು ಕೇವಲ ಒಂದು ಪುಟ ಮಾತ್ರ ಕೋರ್ಟ್‌ಗೆ ಕೊಟ್ಟಿದ್ದಾರೆ. ಆ ಮೂಲಕ ರಾಜ್ಯ ಜನರಿಗೆ ಹಾಗೂ ಕೋರ್ಟ್‌ಗೆ ಸತ್ಯ ಮುಚ್ಚಿಡುತ್ತಿದ್ದಾರೆ ಎಂದು ಸ್ನೇಹಮಯಿ ಕೃಷ್ಣ ಆರೋಪಿಸಿದ್ದಾರೆ.
ಇದೇ ವಿಚಾರದಲ್ಲಿ ರಾಜ್ಯಪಾಲರಿಗೆ ಬರೆದಿರುವ ಶೋಕಾಸ್ ನೋಟಿಸ್ನಲ್ಲೂ ಸಿಎಂ ಉಲ್ಲೇಖಿಸಿದ್ದಾರೆ. ಶೋಕಾಸ್ ನೋಟಿಸ್ ಉತ್ತರದ 30 ನೇ ಪುಟದಲ್ಲಿ ತಮ್ಮ ಪತ್ನಿ ಪತ್ರ ಬರೆದ ಮಾಹಿತಿ ಕೊಟ್ಟಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ನ್ಯಾಯಾಲಯಕ್ಕೆ ಸತ್ಯ ಮುಚ್ಚಿಟ್ಟಿರುವುದು ನ್ಯಾಯಾಂಗ ನಿಂದನೆಯಾಗುತ್ತದೆ. 29 ರಂದು ವಿಚಾರಣೆಯ ಸಂದರ್ಭದಲ್ಲಿ ಎಲ್ಲಾ ವಿಚಾರವನ್ನು ನ್ಯಾಯಾಲದ ಗಮನಕ್ಕೆ ತರುತ್ತೇವೆ. ಸಿಎಂ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲು ಮಾಡುವಂತೆ ಮನವಿ ಮಾಡುತ್ತೇವೆ ಎಂದು ಸ್ನೇಹಮಹಿ ಕೃಷ್ಣ ಹೇಳಿದ್ದಾರೆ.
ಮುಡಾ ಹಗರಣ ಬೆಳಕಿಗೆ ಬಂದ ಮೇಲೆ ಅಧಿಕಾರಿಗಳು ದಾಖಲೆಯನ್ನು ತಿರುಚಿದ್ದಾರೆಯೇ ಎಂಬ ಅನುಮಾನ ಬುಧವಾರವೇ ವ್ಯಕ್ತವಾಗಿತ್ತು. ಸಿದ್ದರಾಮಯ್ಯ ಪತ್ನಿ ತಮ್ಮ ಭೂಮಿಗೆ 50:50 ಅನುಪಾತದಲ್ಲಿ ಪರ್ಯಾಯ ನಿವೇಶನ ಕೊಡುವಂತೆ ಮನವಿ ಮಾಡಿ ಸಲ್ಲಿಸಿರುವ ಪತ್ರದಲ್ಲಿ, ಯಾವ ಸ್ಥಳದಲ್ಲಿ ಪರ್ಯಾಯ ನಿವೇಶನ ಕೊಡಬೇಕು ಎಂದು ಬರೆದ ಜಾಗಕ್ಕೆ ವೈಟ್ನರ್ ಹಾಕಿರುವುದು ಬೆಳಕಿಗೆ ಬಂದಿತ್ತು.
comments
Log in to write reviews