ರತನ್‌ ಟಾಟಾ ಅವರ ಜೀವನದ ಸುಂದರ ಕ್ಷಣಗಳು

ರತನ್‌ ಟಾಟಾ ಅವರ ಜೀವನದ ಸುಂದರ ಕ್ಷಣಗಳು

2024-10-10 11:14:27

ಸಾಮಾನ್ಯವಾಗಿ ಯಾರನ್ನೇ ಆಗಲೀ ಹೇಗಿದ್ದೀರೀ? ಎಂದು ಕೇಳಿದ ತಕ್ಷಣವೇ, ಅಯ್ಯೋ ಅದನ್ಯಾಕೆ ಕೇಳ್ತೀರೀ? ನಮ್ಮ ಕಷ್ಟ ನಮಗೆ ಎಂದು ಸಾಲು ಸಾಲು ಕಷ್ಟಗಳ ಸುರಿಮಳೆಯನ್ನೇ ಹರಿಸುತ್ತಾರೆ. ಇನ್ನು ವಯಸ್ಸಾದವರ ಬಳಿ ಅದೇ ಪ್ರಶ್ನೆಯನ್ನು ಕೇಳಿದರೆ, ಅಯ್ಯೋ ನಮ್ಮ ಪಾಡು ಯಾರಿಗೂ ಬೇಡ. ಭೂಮಿಗೆ ಭಾರ, ಊಟಕ್ಕೆ ದಂಡವಾಗಿ ಇದ್ದೀವಿ. ಭಗವಂತ ಯಾರ್ಯಾರನ್ನೋ ಕರೆಸಿಕೊಳ್ತಾನೆ. ನಮ್ಮಂತಹವರನ್ನು ಇನ್ನೂ ಈ ಭೂಮಿ ಮೇಲೆ ಉಳಿಸಿದ್ದಾನೆ ಎಂಬ ನಿರ್ಲಿಪ್ತವಾದ ಮಾತುಗಳನ್ನೇ ಆಡುತ್ತಾರೆ. ಇನ್ನು ಸ್ವಲ್ಪ ಹೊತ್ತು ಅವರೊಂದಿಗೆ ಮಾತನಾಡಿಸಿದರೆ, ನಮ್ಮ ಹತ್ತಿರ ದುಡ್ಡು ಇದ್ದಿದ್ರೇ ಎಲ್ಲವೂ ಸುಗಮವಾಗಿರುತ್ತಿತ್ತು ಎಂದು ಹೇಳುವುದನ್ನು ಗಮನಿಸಬಹುದು. ಅದರೆ ದುಡ್ಡು ಕಾಸು, ಅಧಿಕಾರ ಅಂತಸ್ತು ಎಲ್ಲವೂ ಇದ್ದರೂ ಜೀವನದಲ್ಲಿ ಸುಂದರವಾದ ಕ್ಷಣಗಳೇ ಬೇರೆ ಇರುತ್ತದೆ ಎನ್ನುವುದಕ್ಕೆ ನಮ್ಮ ದೇಶ ಕಂಡ ಅತ್ಯಂತ ದೊಡ್ಡ ಕೈಗಾರಿಕೋದ್ಯಮಿ, ಸ್ವಾಭಿಮಾನಿ, ಆಪ್ಪಟ ದೇಶ ಭಕ್ತ, ಕೊಡುಗೈ ದಾನಿ ಮತ್ತು ನೆನ್ನೆಯಷ್ಟೇ ನಮ್ಮೆಲ್ಲರನ್ನೂ ಅಗಲಿದ ಭಾರತೀಯ ಬಿಲಿಯನೇರ್ ರತನ್‌ಜಿ ಟಾಟಾ ಅವರ ಈ ಸುಂದರವಾದ ಪ್ರಸಂಗವನ್ನು   ಇದೋ ನಿಮಗಾಗಿ.

ratan_tataಅದೊಮ್ಮೆ ರತನ್ ಟಾಟಾ ಅವರ ಸಂದರ್ಶನ ಮಾಡುತ್ತಿದ್ದ ನಿರೂಪಕರೊಬ್ಬರು, ಸಾರ್, ನೀವು ಭಾರತದಲ್ಲಿ ಇಷ್ಟು ದೊಡ್ಡ ಉದ್ಯಮಿಯಾಗಿದ್ದೀರಿ. ದೇಶ ವಿದೇಶಗಳನ್ನು ಸುತ್ತಿ, ಹತ್ತು ಹಲವಾರು ಸುಂದರವಾದ ಪ್ರದೇಶಗಳನ್ನು ನೋಡಿದ್ದೀರಿ, ಬಗೆ ಬಗೆಯ ಭಕ್ಷಭೋಜನಗಳನ್ನು ಸವಿದಿದ್ದೀರಿ. ಜೀವನದಲ್ಲಿ ಅತ್ಯಂತ ಸುಂದರ ಕ್ಷಣಗಳು ಯಾವುದು? ಎಂದು ಕೇಳಿದರೆ ನಿಮಗೆ ಏನು ನೆನಪಾಗುತ್ತದೆ? ಎಂಬ ಪ್ರಶ್ನೆಯನ್ನು ಕೇಳುತ್ತಾರೆ.

ಮಕ್ಕಳಿಗೆ ಈ ಪ್ರಶ್ನೆಯನ್ನು ಕೇಳಿದ್ದರೆ ಬಹುಶಃ ಅವರಿಗೆ ಇಷ್ಟ ಪಟ್ಟ ತಿಂಡಿಯೋ ಇಲ್ಲವೇ ಆಟಿಕೆಯೋ ಸಿಕ್ಕಾಗ ಖುಷಿಕೊಟ್ಟಿತು ಎನ್ನಬಹುದು. ಇನ್ನು ವಿದ್ಯಾರ್ಥಿಗಳಿಗೆ ಪರೀಕ್ಷೆಗಳಲ್ಲಿ ಉತ್ತಮವಾದ ಅಂಕಗಳನ್ನು ಗಳಿಸಿದ್ದು, ಹದಿ ಹರೆಯದ ಯುವಕ/ಯುವತಿಯರಿಗೆ ತಮ್ಮ ಪ್ರಿಯಕರ ಸಿಕ್ಕಿದ್ದೋ ಇಲ್ಲವೇ ಕೆಲಸ ಸಿಕ್ಕಿದ್ದೋ, ಇಲ್ಲವೇ ಮದುವೆ ಆಗಿ ಮಕ್ಕಳಾಗಿದ್ದು ಹೀಗೆ ಒಂದೊಂದು ಹೇಳುತ್ತಾರೆ ಆದರೆ, ಆ ಸಂದರ್ಶಕರ ಎದುರಿಗೆ ಕುಳಿತಿದ್ದವರು, ಈ ದೇಶದ ಅಪ್ರತಿಮ ಕೈಗಾರಿಕೋದ್ಯಮಿಗಳಾಗಿರುವ ರತನ್‌ಜಿ ಟಾಟಾ. ಅವರು ಒಮ್ಮೆ ಸುದೀರ್ಘವಾದ ಉಸಿರನ್ನು ಎಳೆದುಕೊಂಡು, ನಾನು ಜೀವನದಲ್ಲಿ ಸಂತೋಷದ ನಾಲ್ಕು ಹಂತಗಳನ್ನು ದಾಟಿದ್ದೇನೆ ಮತ್ತು ಅಂತಿಮವಾಗಿ ನಿಜವಾದ ಸಂತೋಷದ ಅರ್ಥವನ್ನು ನಾನು ಅರ್ಥಮಾಡಿಕೊಂಡಿದ್ದೇನೆ.

  • ಮೊದಲ ಹಂತವೆಂದರೆ ಸಂಪತ್ತು ಮತ್ತು ಸಂಪನ್ಮೂಲಗಳನ್ನು ಸಂಗ್ರಹಿಸುವುದು. ಆದರೆ ಈ ಹಂತದಲ್ಲಿ ನಾನು ಬಯಸಿದ ಸಂತೋಷ ಸಿಗಲಿಲ್ಲ.
  • ಎರಡನೇ ಹಂತದಲ್ಲಿ ಬೆಲೆಬಾಳುವ ವಸ್ತುಗಳನ್ನು ಸಂಗ್ರಹಿಸುವ ಚಟ ಹತ್ತಿತಾದರೂ, ಅದೂ ಸಹಾ ತಾತ್ಕಾಲಿಕವಾಗಿದ್ದು ಆ ಅಮೂಲ್ಯ ವಸ್ತುಗಳ ಹೊಳಪು ಹೆಚ್ಚು ಕಾಲ ಉಳಿಯುವುದಿಲ್ಲ ಎಂಬುದನ್ನು ನಾನು ಅರಿತುಕೊಂಡೆ.
  • ಮೂರನೇ ಹಂತದಲ್ಲಿ ಭಾರತ ಮತ್ತು ಆಫ್ರಿಕಾದಲ್ಲಿ 95% ಡೀಸೆಲ್ ಪೂರೈಕೆಯನ್ನು ಮಾಡುವ ದೊಡ್ಡ ಯೋಜನೆಯನ್ನು ಪಡೆದದ್ದಲ್ಲದೇ, ಭಾರತ ಮತ್ತು ಏಷ್ಯಾದ ಅತಿದೊಡ್ಡ ಉಕ್ಕಿನ ಕಾರ್ಖಾನೆಯ ಮಾಲೀಕನಾದರೂ, ನನಗೆ ಅಂದುಕೊಂಡಷ್ಟು ಸುಖ ಸಿಗಲಿಲ್ಲ.
  • ಆದರೇ ಆ ನಾಲ್ಕನೇ ಹಂತವನ್ನು ಮಾತ್ರಾ ನನ್ನ ಜೀವನದಲ್ಲಿ ಎಂದೂ ಮರೆಯದ ಅವಿಸ್ಮರಣೀಯವಾಗಿ ಉಳಿದಿದ್ದಲ್ಲದೇ, ನನ್ನ ಜೀವನದಲ್ಲಿ ಅತ್ಯಂತ ಸುಂದರ ಕ್ಷಣಗಳಲ್ಲಿ ಒಂದಾಗಿದೆ ಎಂದು ಹೇಳಿ ಮಾತನ್ನು ನಿಲ್ಲಿಸಿದಾಗ, ಸಂದರ್ಶಕರ ಮುಖದಲ್ಲಿ ಅರೇ, ಅಂತಹ ಸುಂದರ ಕ್ಷಣಗಳನ್ನು ಹೇಳದೇ ಸುಮ್ಮನಾದರಲ್ಲಾ, ಎಂಬ ಆಂತಕ ಎದ್ದು ಕಾಣುತ್ತಿದ್ದದ್ದನ್ನು ರತನ್ ಟಾಟಾ ಅವರು ಗಮನಿಸಿದೇ ಇರಲಿಲ್ಲ.

tata6ಮತ್ತೇ ಸುದೀರ್ಘವಾದ ಉಸಿರನ್ನು ತೆಗೆದುಕೊಂಡು ಅದೊಮ್ಮೆ ನನ್ನ ಸ್ನೇಹಿತರೊಬ್ಬರು ನನ್ನ ಬಳಿ ಬಂದು ಕೆಲವು ಅಂಗವಿಕಲ ಮಕ್ಕಳಿಗೆ ಗಾಲಿ ಕುರ್ಚಿಗಳನ್ನು ತಮ್ಮಿಂದ ಖರೀದಿಸಿಕೊಡಲು ಸಾದ್ಯವೇ? ಎಂದು ಕೇಳಿದಾಗ,

ಕೇವಲ ಗಾಲೀ ಕುರ್ಚಿಗಳು ಮಾತ್ರವೇ? ಅಥವಾ ಅದಕ್ಕಿಂತ ಹೆಚ್ಚಿನದ್ದೇನಾದರೂ ನೀರೀಕ್ಷಿಸುತ್ತಿದ್ದೀರೇ? ಎಂದು ವಿಚಾರಿಸಿದ್ದಲ್ಲದೇ? ಎಷ್ಟು ಗಾಲಿ ಕುರ್ಚಿಗಳು ಬೇಕು? ಮತ್ತು ಅದಕ್ಕೆ ಎಷ್ಟು ಖರ್ಚಾಗುತ್ತದೆ ? ಎಂದು ವಿಚಾರಿಸಿದರು.

ನಮಗೆ ಸುಮಾರು 200 ಗಾಲಿ ಕುರ್ಚಿಗಳ ಅವಶ್ಯಕತೆ ಇದ್ದು ಪ್ರತಿಯೊಂದು ಗಾಲಿ ಕುರ್ಚಿಗಳಿಗೂ 10-12 ಸಾವಿರ ಖರ್ಚಾಗಬಹುದು ಎಂದು ತಿಳಿಸಿದಾಗ, ಅಷ್ಟೇ ತಾನೇ ಎಂದು ಮರುಮಾತಿಲ್ಲದೇ ಸ್ನೇಹಿತರ ಕೋರಿಕೆಯ ಮೇಲೆ ರತನ್ ಜೀ ಗಾಲಿಕುರ್ಚಿಗಳನ್ನು ಖರೀದಿಸಿ ಸ್ನೇಹಿತರಿಗೆ ಒಪ್ಪಿಸಿದಾಗ, ಅವುಗಳನ್ನು ಆ ಮಕ್ಕಳಿಗೆ ಕೊಡಲು ಖುದ್ದಾಗಿ ರತನ್ ಟಾಟಾ ಅವರೇ ಬರಬೇಕೆಂದು ಅವರ ಸ್ನೇಹಿತರು ದಂಬಾಲು ಬಿದ್ದರು. ಹೇಳೀ ಕೇಳಿ ಸದಾ ಕಾಲವೂ ನೂರಾರು ಕೆಲಸಗಳ ಒತ್ತಡಗಳ ನಡುವೆಯೇ ಇರುವ ಟಾಟಾರವರು ಆರಂಭದಲ್ಲಿ ಬರಲು ಆಗುವುದಿಲ್ಲ. ಅದೂ ಅಲ್ಲದೇ ತಾನು ಬಲ ಗೈಯಲ್ಲಿ ಕೊಟ್ಟದ್ದು ಎಡಗೈ ಗೆ ಗೊತ್ತಾಗಬಾರದು ಎನ್ನುವಂತಹ ಮನುಷ್ಯ. ಹಾಗಾಗಿ ಅಂತಹ ವಿತರಣೆಗೆ ಬರುವುದಿಲ್ಲ ಎಂದು ಹಿಂದೇಟು ಹಾಕಿದರೂ, ಸ್ನೇಹಿತರ ಅತಿಯಾದ ಒತ್ತಾಯಕ್ಕೆ ಮಣಿದು, ಆ ವಿಕಲಚೇತನ ಮಕ್ಕಳಿಗೆ ಗಾಲಿಕುರ್ಚಿಗಳನ್ನು ಕೊಡುವ ಸಮಾರಂಭಕ್ಕೆ ಸ್ನೇಹಿತರೊಂದಿಗೆ ಹೋದರು.

tata5ಅವರು ಹೋಗುವ ಮುನ್ನವೇ ಇಡೀ ಸಭಾಂಗಣ ಆ ವಿಕಲಚೇತನ ಮಕ್ಕಳು ಮತ್ತು ಅವರ ಪೋಷಕರಿಂದ ಕಿಕ್ಕಿರಿದು ತುಂಬಿದ್ದನ್ನು ಕಂಡ ಟಾಟಾರವರಿಗೆ ಒಂದು ಕ್ಷಣ ಬೆಚ್ಚಿ ಬೀಳುವಂತಾಯಿತು. ಅರೇ ಸಮಾಜದಲ್ಲಿ ಇಷ್ಟೊಂದು ಅಶಕ್ತ ಮಕ್ಕಳು ಇದ್ದಾರೆಯೇ? ಎಂದು ಯೋಚಿಸುತ್ತಲೇ, ಸಮಾರಂಭದಲ್ಲಿ ಆ ಎಲ್ಲಾ ಮಕ್ಕಳನ್ನೂ ಕರೆದು ಅವರಿಗೆ ತಮ್ಮ ಕೈಯ್ಯಾರೆಯೇ ಗಾಲಿ ಕುರ್ಚಿಯನ್ನು ಕೊಡುವಾಗ, ಆ ಮಕ್ಕಳ ಮುಖದಲ್ಲಿ ಆಗುತ್ತಿದ್ದ ವಿಚಿತ್ರವಾದ ಸಂತೋಷದ ಹೊಳಪು ಟಾಟಾರವರ ಮನಸ್ಸಿನ ಮೇಲೆ ಆಗಾಧವಾದ ಪರಿಣಾಮ ಬೀರಿತು. ಅನೇಕ ಮಕ್ಕಳು ಆ ಗಾಲಿಕುರ್ಚಿಯಲ್ಲಿ ಕುಳಿತುಕೊಂಡು ಸರ ಸರನೇ ತಿರುಗಾಡುತ್ತಾ ಮೋಜು ಮಸ್ತಿ ಮಾಡುತ್ತಾ ಜೋರಾಗಿ ಕೇಕೇ ಹಾಕುತ್ತಿದ್ದಾಗ ಟಾಟಾ ಅವರ ಮನಸ್ಸಿಗೂ ಸಂತೋಷವಾಗಿ ಅವರಿಗೇ ಅರಿವಿಲ್ಲದಂತೆ, ಆ ಚಿಕ್ಕ ಮಕ್ಕಳೊಂದಿಗೆ ಚಿಕ್ಕವರಾಗಿ, ಯಾವುದೇ ಹಮ್ಮು ಬಿಮ್ಮು ಇಲ್ಲದೇ ಬಹಳ ಸ್ವಚ್ಚಂದವಾಗಿ ಕೆಲವು ಗಂಟೆಗಳನ್ನು ಕಳೆದದ್ದೇ ಅವರಿಗೆ ಗೊತ್ತಾಗಲಿಲ್ಲ.

ನಂತರ ಎಲ್ಲರೂ ಒಟ್ಟಿಗೆ ಊಟ ಮಾಡಲು ಕುಳಿತುಕೊಂಡಾಗ, ಅವರ ಸ್ನೇಹಿತ, ಇವತ್ತಿನ ಸಮಾರಂಭದ ಅನುಭವ ಹೇಗಿತ್ತು? ಎಂದು ಕೇಳಿದ ತಕ್ಷಣವೇ, ಟಾಟಾ ಅವರ ಬಾಯಿಯಿಂದ ಹೊರಟ ಶಬ್ಧವೇ, ಇದು ನನ್ನ ಜೀವನದ ಅತ್ಯಂತ ಸುಂದರವಾದ ಕ್ಷಣಗಳು. ಇಂತಹ ಸಂದರವಾದ ಕ್ಷಣಗಳನ್ನು ಹಿಂದೆಂದೂ ಕಂಡಿರಲಿಲ್ಲ ಮತ್ತು ಮುಂದೆ ಈ ರೀತಿಯಾಗಿ ಸಂಭ್ರಮಿಸುತ್ತೇನೆ ಎಂದು ಭಾವಿಸುವುದಿಲ್ಲ. ಇಂತಹ ಸುಂದರವಾದ ರಸಕ್ಷಣಗಳನ್ನು ಅನುಭವಿಸಲು ಅವಕಾಶ ಮಾಡಿಕೊಟ್ಟಂತಹ ತಮ್ಮ ಸ್ನೇಹಿತರಿಗೆ ಹೃದಯಪೂರ್ವಕ ಅಭಿನಂದನೆಗಳನ್ನು ತಿಳಿಸಿದ್ದಲ್ಲದೇ, ಮುಂದೆಯೂ ಸಹಾ ಇಂತಹ ಅವಶ್ಯಕತೆಗಳಿಗೆ ಖಂಡಿತವಾಗಿಯೂ ನೆರವನ್ನು ನೀಡುವುದಾಗಿ ವಾಗ್ದಾನ ಮಾಡಿದರು.

tata4ಕಾರ್ಯಕ್ರಮ ಎಲ್ಲವೂ ಮುಗಿದು, ಇನ್ನೇನು ಎಲ್ಲರೂ ತಮ್ಮ ತಮ್ಮ ಮನೆಗಳಿಗೆ ಹೊರಡ ಬೇಕು ಎನ್ನುವಷ್ಟರಲ್ಲಿ, ಗಾಲಿ ಕುರ್ಚಿಯ ಮೇಲೆ ಕುಳಿತಿದ್ದ ಮಗುವೊಂದು ಟಾಟಾರವರ ಬಳಿ ಬಂದು ಅವರ ಕಾಲನ್ನು ಹಿಡಿಯಿತು. ಇಂತಹ ಅನೀರೀಕ್ಷಿತ ಸಂದರ್ಭವನ್ನು ನಿರೀಕ್ಷಿಸದೇ ಇದ್ದ ಟಾಟಾರವರು, ನಿಧಾನವಾಗಿ ತಮ್ಮ ಕಾಲುಗಳನ್ನು ಆ ಮಗುವಿನ ಕೈಗಳಿಂದ ಬಿಡಿಸಿಕೊಳ್ಳಲು ಪ್ರಯತ್ನಿಸಿದಾಗ, ಆ ಮಗು ಅಡಿಯಿಂದ ಮುಡಿಯ ವರೆಗೆ ಮತ್ತೊಮ್ಮೆ ಟಾಟಾರವರನ್ನು ದಿಟ್ಟಿಸಿ ನೋಡಿ ಮತ್ತೆ ಗಟ್ಟಿಯಾಗಿ ಟಾಟಾ ಅವರ ಕಾಲುಗಳನ್ನು ಹಿಡಿದುಕೊಂಡಾಗ, ಟಾಟಾರವರು ಮೆಲ್ಲಗೆ ಬಾಗಿ ಆ ಮಗುವಿಗೆ, ಏಕೆ? ಮತ್ತೆ ಇನ್ನೇನಾದರೂ ಬೇಕೇ? ಎಂದು ವಿಚಾರಿಸಿದಾಗ

ಆ ಮಗು ನನಗೆ ನೀಡಿದ ಉತ್ತರವು ಟಾಟಾರವರನ್ನು ಒಂದು ಕ್ಷಣ ಧಿಗ್ಭ್ರಮೆ ಗೊಳಿಸಿದ್ದಲ್ಲದೇ, ಅವರ ಜೀವನದ ದೃಷ್ಟಿಕೋನವನ್ನು ಸಂಪೂರ್ಣವಾಗಿ ಬದಲಾಯಿಸಿತು ಎಂದರು ತಪ್ಪಾಗದು.

ನಾನು ನಿನ್ನ ಮುಖವನ್ನು ಸಾಧ್ಯವಾದಷ್ಟೂ ನೆನಪಿಟ್ಟುಕೊಳ್ಳಲು ಬಯಸುತ್ತೇನೆ. ಹಾಗಾಗಿ ನಿಮ್ಮನ್ನು ನಾನು ಅಡಿಯಿಂದ ಮುಡಿಯವರೆಗೆ ದಿಟ್ಟಿಸಿ ನೋಡುತ್ತಿದ್ದೇನೆ, ಪುನಃ ನಾವಿಬ್ಬರೂ ಸ್ವರ್ಗದಲ್ಲಿ ಭೇಟಿಯಾದಾಗ, ಖಂಡಿತವಾಗಿಯೂ ನಾನು ನಿಮನ್ನು ಗುರುತಿಸುತ್ತೇನೆ ಮತ್ತು ಬಂದು ಮಾತನಾಡಿಸುತ್ತೇನೆ. ನಿಮ್ಮೀ ಸಹಾಯಕ್ಕಾಗಿ ಮತ್ತೊಮ್ಮೆ ಧನ್ಯವಾದಗಳು ಎಂದು ಆ ಮಗವು ಅತ್ಯಂತ ಆಪ್ಯಾಯಮಾನವಾಗಿ ಹೇಳಿತ್ತು.

ಅಷ್ಟು ಚಿಕ್ಕ ವಯಸ್ಸಿನ ಮಗುವಿನಿಂದ ಅಷ್ಟು ದೊಡ್ಡ ಮಾತುಗಳನ್ನು ನಿರೀಕ್ಷಿಸದೇ ಇದ್ದ ಟಾಟಾರವರಿಗೆ ಒಂದು ಕ್ಷಣ ಏನು ಹೇಳಬೇಕು ಎಂದೇ ತೋಚದೇ, ಆ ಕ್ಷಣದಲ್ಲಿ ತಾವು ಏನೂ ಮಾತನಾಡಿದರೂ ಅದು ಆ ಮಗುವಿನ ಮಾತುಗಳ ತೂಕಕ್ಕೆ ಬರುವುದಿಲ್ಲವಾದ್ದರಿಂದ ಸುಮ್ಮನೇ ಮೌನಕ್ಕೆ ಶರಣಾದರು.

ರತನ್ ನಾವಲ್ ಟಾಟ ಅವರು 1937ರ ಡಿಸೆಂಬರ್ 28ರಂದು ಬಾಯಲ್ಲಿ ಚಿನ್ನದ ಚಮಚವನ್ನು ಇಟ್ಟುಕೊಂಡೇ ಜನಿಸಿದರಾದರೂ, ಆ ಶ್ರೀಮಂತಿಕೆ ಮತ್ತು ಅದರ ಗತ್ತನ್ನು ಎಂದಿಗೂ ಎಲ್ಲಿಯೂ ಸಹಾ ಪ್ರದರ್ಶಿಸದೇ, ಸಾಮಾನ್ಯರಲ್ಲಿ ಅತಿ ಸಾಮಾನ್ಯರಾಗಿ, ಅವಶ್ಯಕತೆ ಇದ್ದವರಿಗೆ ಸದ್ದಿಲ್ಲದೇ ಸಹಾಯ ಮಾಡುತ್ತಾ ತಮ್ಮ ಇಡೀ ಜೀವನವನ್ನು ದೇಶ ಸೇವೆಗಾಗಿ ಮುಡಿಪಾಗಿಡ್ಡ ಮಹಾನ್ ವ್ಯಕ್ತಿ. ರತನ್ ಟಾಟಾ ಸಮಾಜದ ಒಳಿತಿಗಾಗಿ ಮಾಡದೇ ಇರುವ ಕೆಲಸಗಳೇ ಇಲ್ಲ, ತಮ್ಮಲ್ಲಿ ಬೇಡಿ ಬರುತ್ತಿದ್ದ ವ್ಯಕ್ತಿಗಳಿಗೆ ಬರಿಗೈಯಲ್ಲಿ ಕಳುಹಿಸಿದ ಉದಾರಣೆಯೇ ಇಲ್ಲಾ. ಅಷ್ಟೇ ಅಲ್ಲದೇ ಅವರು ಕಟ್ಟಿದ ಪ್ರತಿಯೊಂದು ಉದ್ಯಮದಲ್ಲೂ ಸಮಾಜ ಸೇವೆಗೆ ಬೇಕಾಗಿದ್ದ ವಿಚಾರಗಳು ಖಂಡಿತವಾಗಿ ಇರುತ್ತಿದ್ದವು. 2008ರ ನವೆಂಬರ್ 26ರಂದು ಪಾಕ್ ಪ್ರಚೋದಿತ ಲಷ್ಕರ್-ಎ-ತೈಬಾದ ಭಯೋತ್ಪಾದಕರು ಸಮುದ್ರದ ಮೂಲಕ ಬಂದು ಮುಂಬೈ ನಗರದ ಮೇಲೇ ಏಕಾಏಕಿ ಧಾಳಿ ನಡೆಸಿ ಸುಮಾರು ನಾಲ್ಕು ದಿನಗಳ ಕಾಲ ತಾಜ್ ಹೋಟೆಲ್ಲಿನ ಮೇಲೆ ಸತತವಾಗಿ ನಡೆಸಿದ ಧಾಳಿಯಲ್ಲಿ ಗಾಯಗೊಂಡ ಮತ್ತು ಮೃತ ಪಟ್ಟ ಎಲ್ಲರಿಗೂ ಟಾಟಾರವರು ಪರಿಹಾರ ನೀಡಿದ್ದಲ್ಲದೇ ಅದೇ ಹೋಟೆಲ್ಲನ್ನೇ ನಂಬಿ ವ್ಯಾಪಾರ ನಡೆಸುತ್ತಿದ್ದ ಅಕ್ಕ ಪಕ್ಕದದ ಗೂಡಂಗಡಿಗಳ ವ್ಯಾಪಾರಸ್ಥರಿಗೂ ಅರ್ಥಿಕ ನೆರವನ್ನು ನೀಡಿದ್ದಂತಹ ಮಹಾನ್ ವ್ಯಕ್ತಿ.

ಕೇವಲ ಒಂದು ರೂಪಾಯಿ ದಾನ ಮಾಡಿ ಒಂದು ಕೋಟಿ ಕೊಟ್ಟಂತೆ ತೋರಿಸಿಕೊಳ್ಳುವ ಮಂದಿಯೇ ಇರುವಂತಹ ಈ ಸಂಧರ್ಭದಲ್ಲಿ ಕೋಟಿ ಕೋಟಿ ರೂಪಾಯಿ ದಾನ ಮಾಡಿಯೂ ಸದ್ದಿಲ್ಲದೇ ಇರುತ್ತಿದ್ದ ರತನ್ ಟಾಟಾರವವರು ನಿಜಕ್ಕೂ ನಮ್ಮ ಯುವಜನಾಂಗಕ್ಕೆ ಮಾದರಿಯೇ ಆಗಿದ್ದರು. ಜಾತಸ್ಯ ಮರಣಂ ಧೃವ ಅರ್ಥಾತ್ ಹುಟ್ಟಿದವರು ಸಾಯಲೇ ಬೇಕು ಎನ್ನುವಂತೆ ವಯೋಸಹಜ ಖಾಯಿಲೆಗಳಿಂದಾಗಿ ತಮ್ಮ 86ನೇ ವಯಸ್ಸಿನಲ್ಲಿ 2024 ಅಕ್ಟೋಬರ್ 9ರ ಬುಧವಾರ ಮುಂಬೈಯ್ ನ ಖಾಸಗೀ ಆಸ್ಪತ್ರೆಯಲ್ಲಿ ನಮ್ಮೆಲ್ಲರನ್ನೂ ಅಗಲಿರುವುದು ನಿಜಕ್ಕೂ ತುಂಬಲಾರದ ನಷ್ಟ ಎಂದರೆ ತಪ್ಪಾಗದು. ಆಚಂದ್ರಾರ್ಕವಾಗಿ ರತನ್ ಟಾಟಾ ಅವರ ಹೆಸರು ಭಾರತೀಯರ ಹೃನ್ಮನಗಳಲ್ಲಿ ಶಾಶ್ವತವಾಗಿರಲಿದೆ

ಇದಕ್ಕೇ ಹೇಳೋದು ಜೀವನದಲ್ಲಿ ದುಡ್ಡಿನಿಂದಲೇ ಸಂತೋಷವನ್ನು ಪಡೆಯಲು ಸಾಧ್ಯವಿಲ್ಲ. ದುಡ್ಡಿನ ಹೊರಾತಾಗಿಯೂ, ಆಗತ್ಯ ಇರುವವರಿಗೆ ತಮ್ಮ ಕೈಲಾದ ಮಟ್ಟಿಗೆ ಸಹಾಯ ಮಾಡಿದಾಗ ಸಿಗುವ ಸಂತೋಷ ಮತ್ತೆಲ್ಲೂ ಸಿಗದು. ಹಾಗಾಗಿ ನಮ್ಮ ದುಡಿಮೆಯಲ್ಲಿ ಒಂದು ಪಾಲನ್ನು   ರತನ್ ಟಾಟಾ ಅವರಂತೆಯೇ ಸಮಾಜದ ಒಳಿತಾಗಿ ವಿನಿಯೋಗಿಸಿ ಸಂಭ್ರಮ ಪಡೋಣ ಅಲ್ವೇ? 

ಏನಂತೀರೀ?
ಸೃಷ್ಟಿಕರ್ತ, ಉಮಾಸುತ

author single

L Ramprasad

Managing Director

comments

No Reviews