ಚನ್ನಪಟ್ಟಣ ಟಿಕೆಟ್ ಯೋಗೇಶ್ವರ್ ಗೆ ನೀಡಲು ಹೈಕಮಾಂಡ್ ಗೆ ಮನವಿ: ಆರ್.ಅಶೋಕ್
2024-08-26 01:30:24
ಬೆಂಗಳೂರು, ಆ.26: ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರ ರಾಜೀನಾಮೆಯಿಂದ ತೆರವಾದ ರಾಮನಗರ ಜಿಲ್ಲೆಯ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರಕ್ಕೆ ಉಪಚುನಾವಣೆ ಮಳೆಗಾಲ ಮುಗಿದ ನಂತರ ನಡೆಯುವ ಸಾಧ್ಯತೆ ಇದೆ. ಈ ನಡುವೆ ಚನ್ನಪಟ್ಟಣ ಬೈಎಲೆಕ್ಷನ್ ಟಿಕೆಟ್ ಅನ್ನು ಈ ಬಾರಿ ಬಿಜೆಪಿಯಿಂದ ಸಿ.ಪಿ ಯೋಗೇಶ್ವರ್ ಅವರಿಗೆ ನೀಡುವಂತೆ ಹೈಕಮಾಂಡ್ ಬಳಿ ಮನವಿ ಮಾಡುತ್ತೇವೆ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಹೇಳಿದ್ದಾರೆ.
ಈ ಬಗ್ಗೆ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಾನು ಮತ್ತು ಕಳೆದ ಬಾರಿ ರಾಮನಗರ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಅಶ್ವತ್ಥ್ ನಾರಾಯಣ ಸೇರಿ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಅವರನ್ನು ಭೇಟಿ ಮಾಡಿದ್ದೇವೆ. ಹಾಗೆಯೇ ಕೇಂದ್ರ ಸಚಿವ ಮತ್ತು ಚನ್ನಪಟ್ಟಣ ಕ್ಷೇತ್ರದಿಂದ. 2 ಬಾರಿ ಜೆಡಿಎಸ್ ಶಾಸಕರಾಗಿದ್ದ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರ ಜೊತೆ ಕೂಡ ಚರ್ಚೆ ಮಾಡಿದ್ದೇವೆ. ಸಿ.ಪಿ ಯೋಗೇಶ್ವರ್ ಅವರಿಗೆ ಟಿಕೆಟ್ ನೀಡುವಂತೆ ಹೈಕಮಾಂಡ್ ಬಳಿ ಕೇಳುತ್ತೇವೆ. ಯಾವಾಗ ದೆಹಲಿಗೆ ಹೋಗುತ್ತೇವೆ ಎಂದು ಶೀಘ್ರದಲ್ಲೇ ತಿಳಿಸುತ್ತೇವೆ ಎಂದ ಹೇಳಿದರು.
ರಾಜ್ಯದ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಹೋರಾಟ ದೆಹಲಿ ಮಟ್ಟಕ್ಕೆ ತೆಗೆದುಕೊಂಡು ಹೋಗುವ ವಿಚಾರವಾಗಿ ಮಾತನಾಡಿದ ಅವರು, ಜೆಡಿಎಸ್ ನಾಯಕರ ಜೊತೆ ಚರ್ಚೆ ಮಾಡುತ್ತಿದ್ದೇವೆ. ಚರ್ಚೆ ಪ್ರಾಥಮಿಕ ಹಂತದಲ್ಲಿದೆ. ಗುರುವಾರ ಕೋರ್ಟ್ನಲ್ಲಿ ಕೇಸ್ ಕೂಡ ಬರಲಿದೆ. ಮುಂದೆ ಚರ್ಚೆ ಮಾಡುತ್ತೇವೆ ಎಂದು ಹೇಳಿದರು.
ಶಾಸಕರ ಖರೀದಿಗೆ ಬಿಜೆಪಿ ಪ್ರಯತ್ನಿಸುತ್ತಿದೆ ಎಂಬ ಕಾಂಗ್ರೆಸ್ ನಾಯಕರ ಆರೋಪದ ವಿಚಾರವಾಗಿ ಮಾತನಾಡಿದ ವಿ.ಪಕ್ಷ ನಾಯಕ ಆರ್.ಅಶೋಕ್, ಸಿದ್ದರಾಮಯ್ಯ ಸರ್ಕಾರ ಹಗರಣದಲ್ಲಿ ಸಿಲುಕಿದೆ. ಹೀಗಾಗಿ ಜನರ ಮನಸ್ಸಿನ ವಿಷಯ ಡೈವರ್ಟ್ ಮಾಡುತ್ತಿದ್ದಾರೆ ಅಷ್ಟೇ. ಡಿ.ಕೆ ಶಿವಕುಮಾರ್ ದೆಹಲಿಗೆ ಹೋಗಿ ಬಿಜೆಪಿ ನಾಯಕರನ್ನು ಭೇಟಿ ಮಾಡುತ್ತಿದ್ದಾರೆ. ಸರ್ಕಾರ ಇರುತ್ತದೋ, ಬೀಳುತ್ತದೋ ಎಂಬ ಆತಂಕದಲ್ಲಿದ್ದಾರೆ. ನಾವ್ಯಾರು ಕೂಡ ರಾಜ್ಯ ಕಾಂಗ್ರೆಸ್ ಸರ್ಕಾರವನ್ನು ಬೀಳಿಸುವುದಿಲ್ಲ. ಯಾವ ಲೀಡರ್ ನಿಮ್ಮ ಬಳಿ ಬಂದು ಮಾತಾಡಿದ್ದಾರೆ ಹೆಸರು ಹೇಳಿ? ಎಂದು ತಿರುಗೇಟು ನೀಡಿದರು.
comments
Log in to write reviews