ಮುಡಾ ಕೇಸ್: ಸಿಎಂ ಸಿದ್ದರಾಮಯ್ಯ ವಿರುದ್ಧ ಮತ್ತೊಂದು ಗಂಭೀರ ಅರೋಪ!
2024-08-21 08:51:01
ಮೈಸೂರು, ಆ. 21: ಸಿಎಂ ಸಿದ್ದರಾಮಯ್ಯ ಬಳಿ ಮುಡಾದ ಮೂಲ ದಾಖಲೆಗಳಿರುವ ಬಗ್ಗೆ ಆರ್ಟಿಐ ಕಾರ್ಯಕರ್ತ ಗಂಗರಾಜು ಗಂಭೀರ ಆರೋಪ ಮಾಡಿದ್ದಾರೆ.
ಈ ಬಗ್ಗೆ ಆರ್.ಟಿ.ಐ ಕಾರ್ಯಕರ್ತ ಗಂಗರಾಜು ಅವರು ರಾಜ್ಯಸರ್ಕಾರದ ಮುಖ್ಯ ಕಾರ್ಯದರ್ಶಿ, ಜಿಲ್ಲಾಧಿಕಾರಿ, ಮುಡಾ ಆಯುಕ್ತರು ಮತ್ತು ಅಧ್ಯಕ್ಷರು ಸೇರಿ ಹಲವರಿಗೆ ಪತ್ರ ಬರೆದಿದ್ದಾರೆ. ಆರ್ಟಿಐನಲ್ಲಿ ದಾಖಲೆ ಕೇಳಿದ್ದೆ. ಆದರೆ, ದಾಖಲೆಗಳನ್ನು ಮುಡಾ ಕಚೇರಿ ಕೊಟ್ಟಿಲ್ಲ. ಬದಲಿಗೆ ಆ ದಾಖಲೆಗಳನ್ನ ಸುದ್ದಿಗೋಷ್ಠಿಯಲ್ಲಿ ಸಿಎಂ ಬಿಡುಗಡೆ ಮಾಡಿದ್ದಾರೆ. ಹಾಗಾದರೆ ಸಿಎಂ ಸಿದ್ದರಾಮಯ್ಯರಿಗೆ ಆ ದಾಖಲೆಗಳು ಹೇಗೆ ಸಿಕ್ಕವು? ಎಂದು ಪ್ರಶ್ನಿಸಿದ್ದಾರೆ.
ಆ ದಾಖಲೆ ಸಿಎಂ ಸಿದ್ದರಾಮಯ್ಯ ಅವರ ಮನೆಯಲ್ಲೇ ಇರಬೇಕು. ಈ ಕುರಿತು ಸ್ಪಷ್ಟನೆ ನೀಡುವಂತೆ, ಜೊತೆಗೆ ಆದಷ್ಟು ಬೇಗ ಕೇಳಿರುವ ದಾಖಲೆ ನೀಡುವಂತೆ ಪತ್ರ ಬರೆದಿದ್ದಾರೆ. ದಾಖಲೆ ನೀಡದಿದ್ದರೆ ಈ ವಿಚಾರ ಕೋರ್ಟ್ ಗಮನಕ್ಕೆ ತಂದು ದೂರು ದಾಖಲಿಸುವುದಾಗಿ ಎಚ್ಚರಿಕೆ ಕೂಡ ನೀಡಿದ್ದಾರೆ.
ಹಗರಣದ ವಿರುದ್ಧ ಖಾಸಗಿ ದೂರು ದಾಖಲು ಮಾಡಲು ಹಲವಾರು ದಾಖಲೆಗಳನ್ನು ಇಲ್ಲಿವರೆಗೂ ತಮ್ಮ ಕಚೇರಿಯ ಅಧಿಕಾರಿಗಳಿಗೆ ನಾನು ಮಾಹಿತಿ ಹಕ್ಕು ಅಡಿಯಲ್ಲಿ ಅರ್ಜಿ ಸಲ್ಲಿಸಿ ಹಲವಾರು ತಿಂಗಳು ಕಳೆದಿದ್ದರೂ ಸಹ ಮಾಹಿತಿ ನೀಡದೆ ಅಧಿಕಾರಿಗಳು ಸತಾಯಿಸಿದ್ದಾರೆ. ಹಾಗಾಗಿ ಭ್ರಷ್ಟಾಚಾರದ ವಿರುದ್ಧ ಘನ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಲು ವಿಳಂಬವಾಗುತ್ತಿದೆ.
ಈ ಎಲ್ಲಾ ವಿಷಯವನ್ನು ಮುಂದೆ ಘನ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲು ಮಾಡುವ ಸಂದರ್ಭದಲ್ಲಿ ಘನ ನ್ಯಾಯಾಲಯದ ಗಮನಕ್ಕೆ ತರುತ್ತೇನೆ. ಈ ಮೇಲ್ಕಂಡ ವಿಷಯ ಸಂಬಂಧ ತಾವುಗಳು ತಕ್ಷಣವೇ ಪ್ರಾಧಿಕಾರದ ವತಿಯಿಂದ ಮೇಲ್ಕಂಡ ಎಲ್ಲರ ವಿರುದ್ಧ ಕ್ರಿಮಿನಲ್ ಪ್ರಕರಣವನ್ನು ದಾಖಲು ಮಾಡಬೇಕು, ಇಲ್ಲದಿದ್ದರೆ ಅನಿವಾರ್ಯವಾಗಿ ಘನ ನ್ಯಾಯಾಲಯದಲ್ಲಿ ಖಾಸಗಿ ದೂರನ್ನು ದಾಖಲು ಮಾಡುವುದಾಗಿ ಗಂಗರಾಜು ಎಚ್ಚರಿಕೆ ನೀಡಿದ್ದಾರೆ.
comments
Log in to write reviews