ರಾಜ್ಯಸರ್ಕಾರದ ಮತ್ತೊಂದು ಹಗರಣ ಬೆಳಕಿಗೆ: ಸಚಿವ ರಾಜಣ್ಣ ಸಭೆಯಲ್ಲಿ ವಂಚನೆ ಬಯಲಿಗೆ
2024-10-19 12:03:38
ಬೆಂಗಳೂರು, ಅ.18: ವಾಲ್ಮೀಕಿ ಹಗರಣ ಮತ್ತು ಮುಡಾ ಹಗರಣ ರಾಜ್ಯದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವನ್ನೇ ಅಲುಗಾಡುವಂತೆ ಮಾಡಿದೆ.
ಈ ಎರಡೂ ಹಗರಣಗಳಲ್ಲಿ ಇಡಿ ಪ್ರವೇಶ ಮಾಡಿದ್ದು, ತನಿಖೆ ಚುರುಕುಗೊಳಿಸಿದೆ. ಅಲ್ಲದೇ ವಾಲ್ಮೀಕಿ ಹಗರಣದಲ್ಲಿ ಸಚಿವರಾಗಿದ್ದ ಬಿ.ನಾಗೇಂದ್ರ ಅವರು ಜೈಲಿಗೆ ಹೋಗಿಬಂದಿದ್ದು ಆಯ್ತು. ಜೊತೆಗೆ ಇದೀಗ ಕರ್ನಾಟಕ ರಾಜ್ಯ ಕೋ-ಆಪರೇಟಿವ್ ಸೊಸೈಟಿಯಲ್ಲಿ ಅಕ್ರಮ ಹಣ ವರ್ಗಾವಣೆ ಆರೋಪ ಕೇಳಿಬಂದಿದೆ. ಸೊಸೈಟಿಯಲ್ಲಿ ಬರೋಬ್ಬರಿ 19.34 ಕೋಟಿ ರೂ, ಹಣ ಅಕ್ರಮ ವರ್ಗಾವಣೆಯಾಗಿದೆ ಎಂದು ತಿಳಿದುಬಂದಿದ್ದು, ಈ ಸಂಬಂಧ ಸೊಸೈಟಿಯ ಪ್ರಭಾರಿ ಸಿಇಒ ಸೇರಿ 6 ಒಟ್ಟು ಜನರ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಸಹಕಾರ ಸಚಿವ ಕೆ.ಎನ್ ರಾಜಣ್ಣ ಸಭೆ ನಡೆಸಿದಾಗ ಈ ಅಕ್ರಮ ಬೆಳಕಿಗೆ ಬಂದಿದೆ. 2017ರಿಂದ 2023ರ ವರೆಗೆ ಸೊಸೈಟಿಯಲ್ಲಿ FD ರೂಪದಲ್ಲಿದ್ದ 19.34 ಕೋಟಿ ರೂ. ಹಣವನ್ನು ಅಕ್ರಮವಾಗಿ ವರ್ಗಾವಣೆ ಮಾಡಿಕೊಳ್ಳಲಾಗಿದೆ. ಸೊಸೈಟಿಯ ಪ್ರಭಾರ ಸಿಇಒ ಆಶಾಲತಾ ಪತಿ ಸೋಮಶೇಖರ್ ಸೇರಿ ಖಾಸಗಿಯವರ ಖಾತೆಗೆ ವರ್ಗಾವಣೆ ಮಾಡಿದ್ದಾರೆ. ಬಳಿಕ 101 FD ಖಾತೆಗಳ ನಕಲಿ ಠೇವಣಿ ಬಾಂಡ್ ಸೃಷ್ಟಿಸಿದ್ದಾರೆ. ಈ ಮೂಲಕ ಅಕ್ರಮ ಮುಚ್ಚಿಡಲು ನಕಲಿ ಖಾತೆ ಸೃಷ್ಟಿ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಅಧ್ಯಕ್ಷರ ಸಹಿಯನ್ನೂ ಕೂಡ ನಕಲಿ ಮಾಡಿರುವ ಆರೋಪ ಕೇಳಿಬಂದಿದೆ.
ಸಹಕಾರ ಸಚಿವ ಕೆ.ಎನ್ ರಾಜಣ್ಣ ಅಧ್ಯಕ್ಷತೆಯಲ್ಲಿ ಸಭೆ ನಡೆದಾಗ ವಂಚನೆ ಬೆಳಕಿಗೆ ಬಂದಿದ್ದು, ಆಶಾಲತಾ ಅವರು ಸೊಸೈಟಿ ಹಣವನ್ನು BDCC, ಅಪೆಕ್ಸ್ ಬ್ಯಾಂಕ್ ನಲ್ಲಿ ಠೇವಣಿ ಇಟ್ಟಿರುವುದಾಗಿ ಹೇಳಿದ್ದಾರೆ. ಆದರೆ ಪರಿಶೀಲನೆ ವೇಳೆ ಹಣ ವರ್ಗಾವಣೆ, ನಕಲಿ ಠೇವಣಿ ಬಾಂಡ್ ಗಳ ಸೃಷ್ಟಿ ಬೆಳಕಿಗೆ ಬಂದಿದೆ.
ಸದ್ಯ ಸೊಸೈಟಿಯ ಅಧ್ಯಕ್ಷ ರಾಜು ಎಂಬುವರು ಬೆಂಗಳೂರಿನ ನಂದಿನಿ ಲೇಔಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಈ ದೂರಿನ ಮೇರೆಗೆ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ. ಪ್ರಭಾರ ಸಿಇಒ ಆಶಾಲತಾ, ಆಕೆಯ ಪತಿ ಸೋಮಶೇಖರ್, BDCC, ಅಪೆಕ್ಸ್ ಬ್ಯಾಂಕ್ ಮ್ಯಾನೇಜರ್, ಆಡಿಟರ್ ಸೇರಿ 6 ಜನರ ವಿರುದ್ಧ ಎಫ್ಐಆರ್ ದಾಖಲಾಗಿದೆ.
comments
Log in to write reviews