ಅಹಿಂದ ಒಕ್ಕೂಟದ ಪ್ರತಿಭಟನೆ ಹಿನ್ನೆಲೆ: ರಾಜ್ಯಪಾಲರ ಕೋಲಾರ ಪ್ರವಾಸ ರದ್ದು
2024-09-01 11:10:14
ಕೋಲಾರ, ಸೆ.1: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಮುಡಾ ಸೈಟ್ ಹಗರಣದಲ್ಲಿ ಪ್ರಾಸಿಕ್ಯೂಶನ್ ಗೆ ಅನುಮತಿ ನೀಡಿರುವ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರಿಗೆ ಕೋಲಾರದಲ್ಲಿ ಕಪ್ಪುಪಟ್ಟಿ ಪ್ರದರ್ಶನ ಮಾಡುವುದಾಗಿ ಅಹಿಂದ ಒಕ್ಕೂಟದ ನಾಯಕರು ಎಚ್ಚರಿಕೆ ನೀಡಿದ್ದರು
ಈ ಹಿನ್ನೆಲೆಯಲ್ಲಿ ಭದ್ರತಾ ಮುಂಜಾಗ್ರತಾ ಕ್ರಮವಾಗಿ ನಾಳೆಯ ರಾಜ್ಯಪಾಲರ ಕೋಲಾರ ಪ್ರವಾಸವನ್ನು ದಿಢೀರ್ ರದ್ದು ಮಾಡಲಾಗಿದೆ. ಈ ಬಗ್ಗೆ ರಾಜ್ಯಪಾಲರ ಕಚೇರಿಯಿಂದ ಅಧಿಕೃತ ಮಾಹಿತಿ ನೀಡಲಾಗಿದೆ. ನಾಳೆ ಕೋಲಾರದಲ್ಲಿ ನಡೆಯಲಿರುವ ಬೆಂಗಳೂರು ಉತ್ತರ ವಿವಿ ಘಟಿಕೋತ್ಸವ ಕಾರ್ಯಕ್ರಮದಲ್ಲಿ ರಾಜ್ಯಪಾಲರು ಭಾಗಿಯಾಗಬೇಕಿತ್ತು. ಆದರೆ ಕಾರಣಾಂತರಗಳಿಂದ ಪ್ರವಾಸ ರದ್ದು ಮಾಡಿದ್ದಾರೆ.
ಕೋಲಾರದ ಪತ್ರಕರ್ತರ ಭವನದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅಹಿಂದ ಒಕ್ಕೂಟದ ನಾಯಕರು, ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ದ ಯಾವುದೇ ರೀತಿಯ ಹಗರಣವಾಗಲಿ, ಕಪ್ಪುಚುಕ್ಕೆಯಾಗಲಿ ಇಲ್ಲ. ಆದರೆ ರಾಜ್ಯಪಾಲರು ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಉದ್ದೇಶಪೂರ್ವಕವಾಗಿ ಮುಡಾ ಹಗರಣದಲ್ಲಿ ಸಿಲುಕಿಸಿ ಪ್ರಾಸಿಕ್ಯೂಷನ್ಗೆ ಅನುಮತಿ ನೀಡಿರುವುದು ಖಂಡನೀಯ. ಆದ್ದರಿಂದ ನಾಳೆ ಕೋಲಾರದ ಹೊರವಲಯದ ನಂದಿನಿ ಪ್ಯಾಲೇಸ್ನಲ್ಲಿ ನಡೆಯಲಿರುವ ಬೆಂಗಳೂರು ವಿವಿಯ 4ನೇ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಲು ರಾಜ್ಯಪಾಲರು ಆಗಮಿಸುತ್ತಿದ್ದು, ಇದಕ್ಕೆ ನಾವು ವಿರೋಧ ವ್ಯಕ್ತಪಡಿಸುತ್ತಿರುವುದಾಗಿ ಕೋಲಾರ ಜಿಲ್ಲೆಯ ಅಹಿಂದ ಒಕ್ಕೂಟದ ನಾಯಕರು ಹೇಳಿದ್ದರು.
ಇನ್ನು ರಾಜ್ಯದಲ್ಲಿ ಹಲವು ಮಾಜಿ ಸಚಿವರ ಮೇಲೆ ಹಗರಣಗಳಿದ್ದು, ಇವು ರಾಜ್ಯಪಾಲರ ಬಳಿಯಿದ್ದರೂ ಇವುಗಳನ್ನು ಬಿಟ್ಟು ಕೇವಲ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಮುಡಾ ಹಗರಣದಲ್ಲಿ ಸಿಲುಕಿಸಿ ಪ್ರಾಸಿಕ್ಯೂಷನ್ ಅನುಮತಿ ನೀಡಿದ್ದಾರೆ. ಅಹಿಂದ ನಾಯಕ ಸಿದ್ದರಾಮಯ್ಯನವರ ಸರ್ಕಾರ ಉರುಳಿಸಲು ರಾಜ್ಯಪಾಲರು ಯತ್ನ ಮಾಡುತ್ತಿದ್ದು ಬಿಜೆಪಿಯ ಏಜೆಂಟರಂತೆ ವರ್ತನೆ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ಮಾಡಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಯಾವುದೇ ದೂರು ಇಲ್ಲದೆ ಇದ್ದರೂ ಅವರ ವಿರುದ್ದ ಪ್ರಾಸಿಕ್ಯೂಷನ್ಗೆ ಕೊಟ್ಟಿದ್ದಾರೆ. ಹೀಗಾಗಿ ರಾಜ್ಯಪಾಲರ ನಡೆಯನ್ನು ಖಂಡಿಸಿ ನಾಳೆ ಕೋಲಾರಕ್ಕೆ ಆಗಮಿಸುತ್ತಿರುವ ರಾಜ್ಯಪಾಲರಿಗೆ ಅಹಿಂದ ವರ್ಗದ ಕಾರ್ಯಕರ್ತರ ಕಪ್ಪು ಪಟ್ಟಿ ಪ್ರದರ್ಶನ ಮಾಡಲಿದ್ದಾರೆ. ಕಪ್ಪುಪಟ್ಟಿ ಪ್ರದರ್ಶನ ಕಾರ್ಯಕ್ರಮಕ್ಕೆ ಜಿಲ್ಲೆಯ ಅಹಿಂದ ನಾಯಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಮನವಿ ಮಾಡಿದ್ದಾರೆ.
ಆದರೆ ಭದ್ರತಾ ದೃಷ್ಟಿಯಿಂದ ನಾಳಿನ ರಾಜ್ಯಪಾಲರ ಕೋಲಾರ ಜಿಲ್ಲಾ ಪ್ರವಾಸ ರದ್ದಾಗಿದೆ.
ಈಗಾಗಲೇ ಕೇಂದ್ರ ಸರ್ಕಾರದ ಗೃಹ ಇಲಾಖೆಯು ರಾಜ್ಯಪಾಲರ ಭದ್ರತೆಗೆ ಕ್ರಮ ಕೈಗೊಂಡಿದೆ
comments
Log in to write reviews