ಮುಡಾ ಕೇಸ್ ಪ್ರಾಸಿಕ್ಯೂಶನ್ ವಿರುದ್ಧದ ಅರ್ಜಿ ವಿಚಾರಣೆ ಸೆ.12 ಕ್ಕೆ ಮುಂದೂಡಿಕೆ

ಮುಡಾ ಕೇಸ್ ಪ್ರಾಸಿಕ್ಯೂಶನ್ ವಿರುದ್ಧದ ಅರ್ಜಿ ವಿಚಾರಣೆ ಸೆ.12 ಕ್ಕೆ ಮುಂದೂಡಿಕೆ

2024-09-09 05:22:19

ಬೆಂಗಳೂರು, ಸೆ.9: ಮೈಸೂರಿನ ಮುಡಾ ಸೈಟ್ ಹಗರಣದ ಬಗ್ಗೆ ಸಿಎಂ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಶನ್ ಗೆ ಅನುಮತಿ ನೀಡಿದ ಕ್ರಮವನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ನಡೆಸಿದ ಹೈಕೋರ್ಟ್ ಸೆಪ್ಟೆಂಬರ್ 12 ರಂದು ಮಧ್ಯಾಹ್ನ 12 ಗಂಟೆಗೆ ವಿಚಾರಣೆಯನ್ನು ಮುಂದೂಡಿದೆ.

ಇಂದು ಸೋಮವಾರ ಮಧ್ಯಾಹ್ನ 2:30 ಕ್ಕೆ ಸರಿಯಾಗಿ ನ್ಯಾಯಾಧೀಶ ನಾಗಪ್ರಸನ್ನ ನೇತೃತ್ವದ ಹೈಕೋರ್ಟ್ ನ ಏಕಸದಸ್ಯ ಪೀಠದಲ್ಲಿ ವಿಚಾರಣೆ ಮುಂದುವರೆಯಿತು. 
ಸಿಎಂ ಸಿದ್ದರಾಮಯ್ಯ ಪರ ಅಡ್ವೋಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ವಾದ ಮಂಡಿಸಿದರು. 'ಇದು 23 ವರ್ಷಗಳ ಹಿಂದಿನ‌ ಕೇಸ್. ರಾಜ್ಯಪಾಲರು ಯಾವುದೇ ತನಿಖಾ ವರದಿ ಪಡೆಯದೆ ಸಿಎಂ ಸಿದ್ದರಾಮಯ್ಯ ವಿರುದ್ಧ ಮುಡಾ ಕೇಸ್ ನಲ್ಲಿ ಪ್ರಾಸಿಕ್ಯೂಶನ್ ಗೆ ಅನುಮತಿ ನೀಡಿದ್ದಾರೆ. ಸೆಕ್ಷನ್ 17(1) ಕಾಯ್ದೆ ಪ್ರಕಾರ ಖಾಸಗಿ ದೂರಿನ ಮೇರೆಗೆ ರಾಜ್ಯಪಾಲರು  ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಶನ್ ಗೆ ಅನುಮತಿ ನೀಡಿದ್ದಾರೆ. ಆದರೆ ಹಿಂದೆ ರಾಜ್ಯಪಾಲರಾಗಿದ್ದ ಹಂಸರಾಜ್ ಭಾರದ್ವಾಜ್ ಅವರು ಆಗ ಮುಖ್ಯಮಂತ್ರಿಯಾಗಿದ್ದ ಬಿ.ಎಸ್.ಯಡಿಯೂರಪ್ಪ ವಿರುದ್ಧ ಲೋಕಾಯುಕ್ತ ತನಿಖಾ ವರದಿ ಸಲ್ಲಿಕೆಯಾದ ಬಳಿಕ ಪ್ರಾಸಿಕ್ಯೂಶನ್ ಗೆ ಅನುಮತಿ ನೀಡಿದ್ದರು. ಈ ಮುಡಾ ಕೇಸ್ ನಲ್ಲಿ ಯಾವುದೇ ತನಿಖಾ ಸಂಸ್ಥೆಯು ವರದಿ ನೀಡಿಲ್ಲ. ಆದರೆ ರಾಜ್ಯಪಾಲರು ದುರುದ್ದೇಶಪೂರ್ವಕವಾಗಿ ಆತುರದ ನಿರ್ಣಯ ತೆಗೆದುಕೊಂಡು ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಶನ್ ಗೆ ಅನುಮತಿ ನೀಡಿದ್ದಾರೆ ಎಂದು ವಾದಿಸಿದರು.
ಜೊತೆಗೆ ಖಾಸಗಿ ದೂರು ನೀಡಿದ ನಂತರ 6 ವಾರಗಳ ಕಾಲಾವಕಾಶ ನೀಡಿ ನಂತರ ಪ್ರಾಸಿಕ್ಯೂಶನ್ ಗೆ ಅನುಮತಿ ನೀಡಬೇಕು. ಈ ಮುಡಾ ಕೇಸ್ ನಲ್ಲಿ ಇದನ್ನು ರಾಜ್ಯಪಾಲರು ಪಾಲಿಸಿಲ್ಲ ಎಂದು ವಾದಿಸಿದರು.

ಇದೇ ವೇಳೆ ವೀಡಿಯೋ ಕಾನ್ಫರೆನ್ಸ್ ಮೂಲಕ ನೇರವಾಗಿ ವಿಚಾರಣೆಯಲ್ಲಿ ಸಿಎಂ ಸಿದ್ದರಾಮಯ್ಯ ಪರ ವಾದ ಮಂಡಿಸಿದ ಸುಪ್ರೀಂಕೋರ್ಟ್ ನ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ಅವರು ಸಿದ್ದರಾಮಯ್ಯ ಅವರು ಮುಡಾ ಸೈಟ್ ಪಡೆಯುವಾಗ ಅವರು ಮುಖ್ಯಮಂತ್ರಿಯಾಗಿ ಅಧಿಕಾರದಲ್ಲಿ ಇರಲಿಲ್ಲ ಎಂದು ರಾಜ್ಯಪಾಲರ ಪ್ರಾಸಿಕ್ಯೂಶನ್ ಕ್ರಮ ಕಾನೂನು ಬಾಹಿರ ಎಂದು ವಾದ ಮಂಡಿಸಿದರು.

ಆದರೆ ಇದಕ್ಕೆ ಪ್ರತಿ ವಾದ ಮಂಡಿಸಿದ ಖಾಸಗಿ ದೂರುದಾರ ಸ್ನೇಹಮಯಿ ಕೃಷ್ಣ ಪರ ವಕೀಲೆ ಲಕ್ಷ್ಮೀ ಐಯ್ಯಂಗಾರ್ ಅವರು, 'ಸಿದ್ದರಾಮಯ್ಯ ಅವರು 1996 ರಿಂದ 1999 ರವರೆಗೆ ಉಪಮುಖ್ಯಮಂತ್ರಿಯಾಗಿದ್ದರು. ನಂತರ 2004 ರಿಂದ 2006 ರವರೆಗೆ ಮತ್ತೆ ಸಿದ್ದರಾಮಯ್ಯ ಉಪಮುಖ್ಯಮಂತ್ರಿಯಾಗಿದ್ದರು. ಬಳಿಕ 2008 ರಿಂದ 2013 ರವರೆಗೆ ಸಿದ್ದರಾಮಯ್ಯ ಶಾಸಕರಾಗಿ ವಿಧಾನಸಭೆಯ ಪ್ರತಿಪಕ್ಷ ನಾಯಕರಾಗಿದ್ದರು‌. 2013 ರಲ್ಲಿ ಮೊದಲ ಬಾರಿಗೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ 2018 ರವರೆಗೂ ಅಧಿಕಾರ ನಡೆಸಿದರು. 2018 ರಲ್ಲಿಯೂ ಮತ್ತೆ ಶಾಸಕರಾಗಿ ಸಿದ್ದರಾಮಯ್ಯ ಅವರ ಪುತ್ರ ಡಾ.ಯತೀಂದ್ರ ಅವರು ಸ್ಥಳೀಯ ಶಾಸಕರಾಗಿದ್ದರು. ಹೀಗೆ ಸಿದ್ದರಾಮಯ್ಯ ಅವರು ಒಬ್ಬ ಜನಪ್ರತಿನಿಧಿಯಾಗಿ ಅಧಿಕಾರ ದುರುಪಯೋಗಪಡಿಸಿಕೊಂಡು ಮುಡಾಕ್ಕೆ ಸೇರಿದ 14 ಸೈಟ್ ಗಳನ್ನು ಅಕ್ರಮವಾಗಿ ಪಡೆದು ಮಾರಾಟ ಮಾಡಿದ್ದಾರೆ ಎಂದು ಪ್ರತಿ ವಾದ ಮಂಡಿಸಿದರು.
ಕೊನೆಗೆ ಜಡ್ಜ್ ನಾಗಪ್ರಸನ್ನ ಅವರು ವಿಚಾರಣೆಯನ್ನು ಮುಂದಿನ ಸೆಪ್ಟೆಂಬರ್ 12 ಗುರುವಾರ ಮಧ್ಯಾಹ್ನ 12 ಗಂಟೆಗೆ ಮುಂದೂಡಿದರು.

author single

L Ramprasad

Managing Director

comments

No Reviews