ಅಂತೂ ಕೊನೆಗೂ 72 ದಿನಗಳ ಬಳಿಕ ಜಾಮೀನಿಗೆ ಅರ್ಜಿ ಸಲ್ಲಿಸಿದ ಎ1 ಪವಿತ್ರಾಗೌಡ
2024-08-20 08:15:41
ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಆರೋಪದಲ್ಲಿ ಜೈಲು ಸೇರಿರುವ ನಟಿ ಪವಿತ್ರಾ ಗೌಡ ಅವರು ಜಾಮೀನು ಪಡೆಯಲು ಪ್ರಯತ್ನಿಸುತ್ತಿದ್ದಾರೆ. ಅವರ ಜೈಲು ವಾಸ ಆರಂಭವಾಗಿ ಈಗಾಗಲೇ 72 ದಿನಗಳು ಕಳೆದಿವೆ. ಈಗ ಅವರು ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದಾರೆ. ಪವಿತ್ರಾ ಗೌಡಗೆ ಅಶ್ಲೀಲ ಸಂದೇಶ ಕಳಿಸಿದ ಎಂಬ ಕಾರಣಕ್ಕೆ ಚಿತ್ರದುರ್ಗದ ರೇಣುಕಾ ಸ್ವಾಮಿ ಎಂಬಾತನನ್ನು ಬೆಂಗಳೂರಿಗೆ ಕರೆತಂದು ಚಿತ್ರಹಿಂಸೆ ನೀಡಿ ಸಾಯಿಸಲಾಗಿತ್ತು. ಈ ಕೇಸ್ನಲ್ಲಿ ಪವಿತ್ರಾ ಗೌಡ ಎ1 ಆಗಿದ್ದಾರೆ. ನಟ ದರ್ಶನ್ ಎ2 ಆಗಿದ್ದಾರೆ. ಈ ಪ್ರಕರಣದ ತನಿಖೆ ತೀವ್ರಗೊಂಡಿದ್ದು, ಜಾಮೀನು ಪಡೆಯುವ ಸಲುವಾಗಿ ಪವಿತ್ರಾ ಗೌಡ ಅರ್ಜಿ ಸಲ್ಲಿಕೆ ಮಾಡಿದ್ದಾರೆ.
ಜಾಮೀನು ನೀಡುವಂತೆ ಮನವಿ ಮಾಡಿ ಬೆಂಗಳೂರಿನ ಸಿಟಿ ಸಿವಿಲ್ ಮತ್ತು ಸೆಷನ್ಸ್ ಕೋರ್ಟ್ಗೆ ಪವಿತ್ರಾ ಗೌಡ ಅರ್ಜಿ ಸಲ್ಲಿಸಿದ್ದಾರೆ. ಇದರ ವಿಚಾರಣೆ ನಡೆಸಿದ ಬಳಿಕ ಪೊಲೀಸರಿಗೆ ಆಕ್ಷೇಪಣೆ ಸಲ್ಲಿಸಲು ಕೋರ್ಟ್ ನೋಟಿಸ್ ನೀಡಿದೆ. ಸಿಸಿಹೆಚ್ 57 ಕೋರ್ಟ್ ಆಗಸ್ಟ್ 22ಕ್ಕೆ ವಿಚಾರಣೆಯನ್ನು ಮುಂದೂಡಿದೆ. ಪವಿತ್ರಾ ಗೌಡ ಜೊತೆ ಮತ್ತೊಬ್ಬ ಆರೋಪಿ ಅನುಕುಮಾರ್ ಕೂಡ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದಾರೆ.
ಬೆಂಗಳೂರು ಪೊಲೀಸರು ಈ ಪ್ರಕರಣದಲ್ಲಿ ಹಲವು ಸಾಕ್ಷ್ಯಗಳನ್ನು ಸಂಗ್ರಹಿಸಿದ್ದಾರೆ. ಚಾರ್ಜ್ ಶೀಟ್ ಸಲ್ಲಿಸಲು ತಯಾರಿ ಮಾಡಿಕೊಂಡಿದ್ದಾರೆ. ಚಾರ್ಜ್ಶೀಟ್ ಸಲ್ಲಿಸುವ ವೇಳೆಗೆ ಸರಿಯಾಗಿ ಪವಿತ್ರಾ ಗೌಡ ಅವರು ಜಾಮೀನು ಪಡೆಯಲು ಪ್ರಯತ್ನಿಸುತ್ತಿದ್ದಾರೆ. ಸಿಸಿಎಚ್ 57ರ ನ್ಯಾಯಾಲಯದಲ್ಲಿ ವಕೀಲೆ ರೆನಿ ಸೆಬಾಸ್ಟಿನ್ ಅವರಿಂದ ಪವಿತ್ರಾ ಗೌಡ ಪರ ಜಾಮೀನಿಗೆ ಅರ್ಜಿ ಸಲ್ಲಿಕೆ ಆಗಿದೆ.
ಆಗಸ್ಟ್ 22ರಂದು ಪವಿತ್ರಾ ಗೌಡ ಅವರಿಗೆ ಜಾಮೀನು ಸಿಗುತ್ತೋ? ಅಥವಾ ಇಲ್ಲವೋ? ಎಂಬುದನ್ನು ತಿಳಿಯುವ ಕೌತುಕ ಮೂಡಿದೆ. ನಟ ದರ್ಶನ್ ಕೂಡ ಜೈಲಿನಲ್ಲಿ ಕಾಲ ಕಳೆಯುತ್ತಿದ್ದಾರೆ. ಹೈಪ್ರೊಫೈಲ್ ಕೇಸ್, ಆದ್ದರಿಂದ ಎಲ್ಲರ ಗಮನ ಈ ಪ್ರಕರಣದ ಮೇಲಿದೆ. ದರ್ಶನ್ ಕುಟುಂಬದವರು ಆಗಾಗ ಜೈಲಿಗೆ ಭೇಟಿ ನೀಡಿ ಕಾನೂನಿನ ಪ್ರಕ್ರಿಯೆ ಬಗ್ಗೆ ಚರ್ಚಿಸುತ್ತಿದ್ದಾರೆ. ಇಂದು (ಆಗಸ್ಟ್ 19) ಕೂಡ ದರ್ಶನ್ ಸಹೋದರ ದಿನಕರ್ ತೂಗುದೀಪ, ಪತ್ನಿ ವಿಜಯಲಕ್ಷ್ಮಿ, ಪುತ್ರ ವಿನೀಶ್ ಅವರು ಜೈಲಿಗೆ ಭೇಟಿ ನೀಡಿ ಮಾತನಾಡಿಕೊಂಡು ಬಂದಿದ್ದಾರೆ.
comments
Log in to write reviews