ಮಂಡ್ಯ ಅಪರ ಜಿಲ್ಲಾಧಿಕಾರಿ ಎಚ್ ಎಲ್ ನಾಗರಾಜ್ ಸೇರಿದಂತೆ 8 ಸರ್ಕಾರಿ ನೌಕರರ ಮೇಲೆ ಎಫ್ಐಆರ್ ದಾಖಲು!
2024-08-03 11:52:14
ಹಾಸನ: ಮರಣ ಹೊಂದಿದವರ ಹೆಸರಿನಲ್ಲಿ ಸುಳ್ಳು ದಾಖಲೆ ಸೃಷ್ಟಿಸಿ ಅಕ್ರಮ ಪಹಣಿ ದಾಖಲು ಮಾಡಿರುವ ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲಾ ಅಪರ ಜಿಲ್ಲಾಧಿಕಾರಿ, ತಹಸೀಲ್ದಾರ್ ಸೇರಿ 8 ಸರ್ಕಾರಿ ನೌಕರರ ಮೇಲೆ ಎಫ್ಐಆರ್ ದಾಖಲಾಗಿದೆ.
ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನ ಕಸಬಾ ಹೋಬಳಿಯ ಗುಳ್ಳಹಳ್ಳಿ ಗ್ರಾಮದ ಸರ್ವೆ ನಂಬರ್ 15 ರಲ್ಲಿ 1.3 ಸರ್ಕಾರಿ ಗೋಮಾಳ ಜಮೀನನ್ನು ಎಂ.ಆರ್.342017-18 ರಂತೆ ನಾಗಯ್ಯ ಬಿನ್ ತಿಮ್ಮಯ್ಯ ಎಂಬುವರಿಗೆ ಅಕ್ರಮವಾಗಿ ಪಹಣಿ ದಾಖಲು ಮಾಡಿರುವ ಬಗ್ಗೆ ಬೆಂಗಳೂರಿನ ಕರ್ನಾಟಕ ಭೂಕಬಳಿಕೆ ವಿಶೇಷ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಈ ಬಗ್ಗೆ ಉಲ್ಲೇಖಿತ ಪತ್ರದಲ್ಲಿ ಹಾಸನ ಜಿಲ್ಲಾಧಿಕಾರಿ ಕಚೇರಿಯಿಂದ ಸೂಚಿಸಲಾಗಿರುವಂತೆ ಸಂಬಂಧಪಟ್ಟ ಅಧಿಕಾರಿಗಳು ಮತ್ತು ನೌಕರರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಾಗಿದೆ.
ಪ್ರಕರಣದ ಹಿನ್ನೆಲೆ...
ಚನ್ನರಾಯಪಟ್ಟಣ ತಾಲ್ಲೂಕಿನ ಕಸಬಾ ಹೋಬಳಿಯ ಗುಳ್ಳಹಳ್ಳಿ ಗ್ರಾಮದ ಸರ್ವೆ ನಂಬರ್ 15 ರಲ್ಲಿ 21 ರಿಂದ 25 ಎಕರೆಯಷ್ಟು ಸರ್ಕಾರಿ ಗೋಮಾಳ ಜಮೀನು ಪೈಕಿ 1.3. ಎಕರೆ ವಿಸ್ತೀರ್ಣವನ್ನು ಈ ಹಿಂದೆ ಉಪವಿಭಾಗಾಧಿಕಾರಿ ಆದೇಶ ಸಂಖ್ಯೆ 2900, ದಿನಾಂಕ : 9-2-2018 ಎಂದು ದಾಖಲಿಸಿ ನಾಗಮ್ಮ ಬಿನ್ ಸಣ್ಣತಿಮ್ಮಯ್ಯ ಎಂಬುವರಿಗೆ ಪಹಣಿ ದಾಖಲಾಗಿರುತ್ತದೆ. ಸದರಿ ಕ್ರಮವು ಉಪವಿಭಾಗಾಧಿಕಾರಿ ಕಚೇರಿಯಿಂದ ಆನ್ ಲೈನ್ ರೆವಿನ್ಯೂ ಕೋರ್ಟ್ ತಂತ್ರಾಂಶದಲ್ಲಿ ಅರ್ಜಿದಾರರಿಂದ ಯಾವುದೇ ಅರ್ಜಿ ಸ್ವೀಕರಿಸದೇ, ಯಾವುದೇ ಭೌತಿಕ ಕಡತ ರಚನೆಯಾಗದೆ ಅನಧಿಕೃತ ವಹಿವಾಟು ತಯಾರಾಗಿ ತಾಲ್ಲೂಕು ಕಚೇರಿಯ ಭೂ ತಂತ್ರಾಂಶಕ್ಕೆ ಸ್ವೀಕೃತವಾಗಿದ್ದು, ಸಿಬ್ಬಂದಿಗಳ ಅನುಮೋದನೆಯೊಂದಿಗೆ ಖಾಸಗಿ ವ್ಯಕ್ತಿಗೆ ಪಹಣಿ ದಾಖಲಾಗಿರುತ್ತದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರ್.ಟಿ.ಐ ಕಾರ್ಯಕರ್ತ ಚನ್ನರಾಯಪಟ್ಟಣ ತಾಲ್ಲೂಕಿನ ಆಡಗೂರು ಶ್ರೀನಿವಾಸ್ ಎಂಬುವರು ಕರ್ನಾಟಕ ಭೂ ಕಬಳಿಕೆ ವಿಶೇಷ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದರು. ಈ ಪ್ರಕರಣವನ್ನು ವಿಚಾರಣೆ ನಡೆಸಿದ ಕೋರ್ಟ್ ಎ1 ಆರೋಪಿ ಡಾ.ಎಚ್.ಎಲ್.ನಾಗರಾಜು (ಹಿಂದಿನ ಉಪವಿಭಾಗಾಧಿಕಾರಿ, ಹಾಸನ, ಈಗಿನ ಮಂಡ್ಯ ಅಪರ ಜಿಲ್ಲಾಧಿಕಾರಿ ), ಎ2 ಸೋಮಶೇಖರ್ (ಹಿಂದಿನ ತಹಸೀಲ್ದಾರ್, ಚನ್ನರಾಯಪಟ್ಟಣ), ಎ3 ಸರಳಾ(ಪ್ರಥಮ ದರ್ಜೆ ಸಹಾಯಕಿ ಉಪವಿಭಾಗಾಧಿಕಾರಿ ಕಚೇರಿ, ಹಾಸನ, ಎ4 ಪೂರ್ಣಿಮಾ, ಶಿರಸ್ತೇದಾರರು, ಚನ್ನರಾಯಪಟ್ಟಣ ತಾಲ್ಲೂಕು ಕಚೇರಿ), ಎ5 ಕುಮಾರಸ್ವಾಮಿ ಜಿ.ಎಲ್-ಹಿಂದಿನ ಆಡಳಿತಾಧಿಕಾರಿ, ಚನ್ನರಾಯಪಟ್ಟಣ ತಾಲ್ಲೂಕು ಕಚೇರಿ, ಎ6 ಬಿ.ಎಚ್.ಮೋಹನ್ ಕುಮಾರ್(ಆರ್.ಐ, ಚನ್ನರಾಯಪಟ್ಟಣ ತಾಲ್ಲೂಕು ಕಚೇರಿ), ಎ7-ರಮೇಶ್ ಕೆ.ಪಿ.(ಭೂಮಿ ಆಪರೇಟರ್, ಚನ್ನರಾಯಪಟ್ಟಣ), ಎ8-ರೇಖಾ ಎಲ್.(ಭೂಮಿ ಆಪರೇಟರ್, ಚನ್ನರಾಯಪಟ್ಟಣ) ಈ ಎಲ್ಲರ ಮೇಲೆ ಕರ್ನಾಟಕ ಭೂಕಬಳಿಕೆ ವಿಶೇಷ ನ್ಯಾಯಾಲಯದ ಸೂಚನೆ ಮೇರೆಗೆ ಪ್ರಕರಣ ಸಂಖ್ಯೆ ಎಲ್.ಜೆ.ಸಿ(ಎಸ್) ನಂ.347/2023 ದಾಖಲಾಗಿದ್ದು ಘನ ನ್ಯಾಯಾಲಯದ ವಿಚಾರಣೆ ದಿನಾಂಕ:19-6-2024 ರಂದು ನ್ಯಾಯಾಲಯಾಧೀಕರಣವು ವಿಚಾರಣೆಯಲ್ಲಿ ಸೂಚಿಸಿರುವಂತೆ ಜಿಲ್ಲಾಧಿಕಾರಿ, ಹಾಸನ ಜಿಲ್ಲೆ ಇವರ ಸೂಚನೆ ಮೇರೆಗೆ ಉಪವಿಭಾಗಾಧಿಕಾರಿ, ಹಾಸನ ಇವರ ಪ್ರಕರಣ ದಾಖಲಿಸಿರುತ್ತಾರೆ.
comments
Log in to write reviews