ಭದ್ರಾ ಮೇಲ್ದಂಡೆ ಯೋಜನೆಗೆ 5300 ಕೋಟಿ ರೂ. ಕೊಡಿಸುವೆ: ಕೇಂದ್ರ ಸಚಿವ ಸೋಮಣ್ಣ ಭರವಸೆ
2024-10-03 06:45:55
ಚಿತ್ರದುರ್ಗ: ಬರದ ನಾಡು ಚಿತ್ರದುರ್ಗ ಜಿಲ್ಲೆಯ ದಶಕಗಳ ಕನಸಾದ ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರ ಸರ್ಕಾರ ರಾಷ್ಟ್ರೀಯ ಯೋಜನೆ ಎಂದು ಘೋಷಿಸಿ 5300 ಕೋಟಿ ರೂಪಾಯಿ ಅನುದಾನ ಕೊಡಲಾಗುತ್ತದೆ ಎಂದು ಆಶ್ವಾಸನೆ ನೀಡಿತ್ತು. ಆದರೆ ಸತತ 2 ವರ್ಷಗಳ ಬಜೆಟ್ ನಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭದ್ರಾ ಮೇಲ್ದಂಡೆ ಯೋಜನೆಗೆ ನೀಡಬೇಕಾದ 5300 ಕೋಟಿ ರೂಪಾಯಿ ಅನುದಾನವನ್ನು ನೀಡದೆ ಕರ್ನಾಟಕದ ಕಾಂಗ್ರೆಸ್ ಸರ್ಕಾರದ ವಿರುದ್ಧ ಮೌನ ಸಮರ ಸಾರಿದ್ದರು. ಆದರೆ ಇಂದು ಭದ್ರಾ ಮೇಲ್ದಂಡೆ ಯೋಜನೆಗೆ ಕೊನೆಗೂ ಹಸಿರುನಿಶಾನೆ ತೋರಲು ಕೇಂದ್ರ ಸರ್ಕಾರ ಸಮ್ಮತಿಸಿದೆ.
ಏಕೆಂದರೆ ಇಂದು ಚಿತ್ರದುರ್ಗಕ್ಕೆ ಆಗಮಿಸಿದ್ದ ಕೇಂದ್ರ ಜಲಶಕ್ತಿ ಸಹಾಯಕ ಸಚಿವ ವಿ.ಸೋಮಣ್ಣ ಖಂಡಿತವಾಗಿಯೂ ನಾನು ಭದ್ರಾ ಮೇಲ್ದಂಡೆ ಯೋಜನೆಗೆ 5300 ಕೋಟಿ ರೂಪಾಯಿ ಅನುದಾನ ಕೊಡಿಸುತ್ತೇನೆಂದು ಭರವಸೆ ನೀಡಿದ್ದಾರೆ.
ಚಿತ್ರದುರ್ಗದಲ್ಲಿ ಇಂದು ಕೇಂದ್ರ ಸಚಿವ ವಿ.ಸೋಮಣ್ಣ ಹೇಳಿದ್ದಿಷ್ಟು:
"ಭದ್ರಾ ಮೇಲ್ದಂಡೆ ಯೋಜನೆಗೆ ಅನುದಾನ ಕೊಡಬೇಕೆಂದು ದೆಹಲಿಗೆ ರಾಜ್ಯದ ಜಲಸಂಪನ್ಮೂಲ ಸಚಿವ ಡಿ.ಕೆ ಶಿವಕುಮಾರ್ ಮತ್ತು ಸಂಸದ ಗೋವಿಂದ ಕಾರಜೋಳ ಅವರು ಎರಡು ಮೂರು ಬಾರಿ ಬಂದು ನನ್ನ ಭೇಟಿ ಮಾಡಿದ್ದಾರೆ. ನಾನು ಕೂಡ ಈಗಾಗಲೇ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮೇಡಂ ಜೊತೆಗೆ ಮಾತನಾಡಿದ್ದೇನೆ. ಖಂಡಿತ ಬರಡುಭೂಮಿ ಜಿಲ್ಲೆಯಾದ ಚಿತ್ರದುರ್ಗಕ್ಕೆ ನೀರು ಕೊಡುವ ಭದ್ರಾ ಮೇಲ್ದಂಡೆ ಯೋಜನೆಗೆ ನಾವು ಏನು ಆಶ್ವಾಸನೆ ಕೊಟ್ಟಿದ್ದೆವೊ ಅದರಂತೆ ಮುಂದಿನ ಎರಡ್ಮೂರು ತಿಂಗಳಲ್ಲಿ 5300 ಕೋಟಿ ರೂಪಾಯಿ ಅನುದಾನ ಕೊಡಿಸುತ್ತೇವೆ, ಆದರೆ ಭದ್ರಾ ಮೇಲ್ದಂಡೆ ಯೋಜನೆ ರಾಷ್ಟ್ರೀಯ ಯೋಜನೆ ಎಂದು ನಾನು ಸುತಾರಾಂ ಒಪ್ಪಲು ತಯಾರಿಲ್ಲ. ಇಷ್ಟಾದರೂ ಚಿತ್ರದುರ್ಗ, ತುಮಕೂರು ಜಿಲ್ಲೆಗಳ ಜನರಿಗೆ ಭದ್ರಾ ನದಿಯ ನೀರು ಒದಗಿಸಲು ನಾವು ಕಟಿಬದ್ಧರಾಗಿ ಕೆಲಸ ಮಾಡುತ್ತೇವೆ ಎಂದು ಕೇಂದ್ರ ಜಲಶಕ್ತಿ ಸಹಾಯಕ ಸಚಿವ ವಿ.ಸೋಮಣ್ಣ ಸ್ಪಷ್ಟವಾಗಿ ಹೇಳಿದರು.
ಈ ಸಂದರ್ಭದಲ್ಲಿ ಚಿತ್ರದುರ್ಗ ಬಿಜೆಪಿ ಸಂಸದ ಗೋವಿಂದ ಕಾರಜೋಳ ಮತ್ತು ಹೊಳಲ್ಕೆರೆ ಕ್ಷೇತ್ರದ ಶಾಸಕ ಎಂ.ಚಂದ್ರಪ್ಪ ಹಾಜರಿದ್ದರು.
comments
Log in to write reviews