ಮುಡಾ ಮೇಲಿನ ಸತತ 29 ತಾಸು ಇಡಿ ದಾಳಿ ಅಂತ್ಯ: ಮಹತ್ವದ ದಾಖಲೆ ವಶ
2024-10-20 10:40:48
ಮೈಸೂರು, ಅ.20: ಮುಡಾ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ 2 ದಿನಗಳ ಇ.ಡಿ ದಾಳಿ ಅಂತ್ಯಗೊಂಡಿದೆ. ಮೊದಲ ದಿನ 12 ತಾಸು, 2ನೇ ದಿನ 17 ತಾಸು ವಿಚಾರಣೆ ನಡೆಸಿದೆ. ಮೊದಲ ದಿನ ಬರೋಬ್ಬರಿ 12 ಗಂಟೆ ಮುಡಾದಲ್ಲಿ ಬೀಡುಬಿಟ್ಟು ತಪಾಸಣೆ ವಿಚಾರಣೆ ಪರಿಶೀಲನೆ ನಡೆಸಿದ್ದ ಇಡಿ ಅಧಿಕಾರಿಗಳು 2ನೇ ದಿನವೂ ಬರೋಬ್ಬರಿ 17 ಗಂಟೆಗಳ ಕಾಲ ಇಂಚಿಂಚೂ ಮಾಹಿತಿ ಕಲೆಹಾಕಿದ್ದಾರೆ. ಈ ಮೂಲಕ ಬರೋಬ್ಬರಿ 29 ಗಂಟೆಗಳ ಶೋಧ ನಡೆಸಿದ ಇಡಿ ಅಧಿಕಾರಿಗಳು ಕೆಲ ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದುಕೊಂಡಿದ್ದರೆ, ಇನ್ನು ಕೆಲ ದಾಖಲೆಗಳನ್ನು ಹಾರ್ಡ್ ಡಿಸ್ಕ್‌ನಲ್ಲಿ ಸಂಗ್ರಹಿಸಿಕೊಂಡು ಹೋಗಿದ್ದಾರೆ.
ಮುಡಾದಿಂದ ಸಾವಿರಾರು ಪುಟಗಳ ದಾಖಲೆಗಳನ್ನು ಇಡಿ ವಶಕ್ಕೆ ಪಡೆದಿದೆ. ಅಲ್ಲದೇ ಎಲ್ಲಾ ಹಂತದ ಅಧಿಕಾರಿಗಳ ಡ್ರಿಲ್ ನಡೆಸಿದೆ. ನಿನ್ನೆ (ಅ.19) ಬೆಳಗ್ಗೆ 10 ಗಂಟೆಯಿಂದ ಮಧ್ಯರಾತ್ರಿ 2:40 ಗಂಟೆವರೆಗೆ ವಿಚಾರಣೆ ನಡೆಸಲಾಗಿದೆ. ದಾಳಿ ವೇಳೆ ಮಹತ್ವದ ದಾಖಲೆಗಳನ್ನ ಅಧಿಕಾರಿಗಳು ಸಂಗ್ರಹಿಸಿದ್ದಾರೆ. ಸಿಎಂ ಸಿದ್ದರಾಮಯ್ಯ ಪತ್ನಿ ವಾಪಸ್ ನೀಡಿದ 14 ನಿವೇಶನ ಹಾಗೂ ಮುಡಾದಲ್ಲಿ 50:50 ಅನುಪಾತದಡಿಯಲ್ಲಿ ನಡೆದಿರುವ ಅಕ್ರಮದ ಬಗ್ಗೆ ಸಮಗ್ರ ದಾಖಲೆ ಸಂಗ್ರಹಿಸಿ 2 ಕೆಂಪು ಬಣ್ಣದ ಬಾಕ್ಸ್‌ಗಳಲ್ಲಿ ದಾಖಲೆಗಳನ್ನ ತೆಗೆದುಕೊಂಡು ಹೋಗಿದ್ದಾರೆ.
FSL ಅಧಿಕಾರಿಯನ್ನು ಕರೆತಂದಿದ್ದ ಇಡಿ
ಮೊದಲ ದಿನ ಬರೋಬ್ಬರಿ 12 ಗಂಟೆ ಮುಡಾದಲ್ಲಿ ಬೀಡುಬಿಟ್ಟು ತಪಾಸಣೆ ವಿಚಾರಣೆ ಪರಿಶೀಲನೆ ನಡೆಸಿದ್ದ ಇಡಿ ಅಧಿಕಾರಿಗಳು 2ನೇ ದಿನವೂ 17 ಗಂಟೆ ಮುಡಾದಲ್ಲೇ ಕಳೆದಿದ್ದಾರೆ. ನಿನ್ನೆ ಮುಡಾದ ವ್ಯವಹಾರದ ಸಂಪೂರ್ಣ ಮಾಹಿತಿ ಕಲೆ ಹಾಕಿದ್ದಾರೆ. ಕೇವಲ ಹಾರ್ಡ್ ಕಾಪಿ ಮಾತ್ರವಲ್ಲ, ಅದರ ಸಾಫ್ಟ್ ಕಾಪಿ ಸಹ ಪಡೆದುಕೊಂಡರು. ಇದಕ್ಕಾಗಿ 2 ಹಾರ್ಡ್ ಡಿಸ್ಕ್‌ಗಳನ್ನು ಇಡಿ ಅಧಿಕಾರಿಗಳು ತಂದಿದ್ದರು. ಇದರ ಜೊತೆಗೆ ಇಂದು ಇಡಿ ಅಧಿಕಾರಿಗಳು ತಮ್ಮ ಜೊತೆ ಒಬ್ಬ FSL ಅಧಿಕಾರಿಯನ್ನು ಸಹ ಕರೆತಂದಿದ್ದರು.
ಇದಕ್ಕೆ ಕಾರಣ ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿಯವರು ಮುಡಾಗೆ ನೀಡಿದ ಮನವಿ ಪತ್ರದಲ್ಲಿ ವೈಟ್ನರ್ ಹಾಕಿರುವ ವಿಚಾರ ಸಾಕಷ್ಟು ಸದ್ದು ಮಾಡಿತ್ತು. ಈ ವಿಚಾರ ಸಾಕಷ್ಟು ಸಂಚಲನ ಮೂಡಿಸಿತ್ತು. ಈ ಅಕ್ರಮವನ್ನ ಮುಚ್ಚಿ ಹಾಕಲು ದಾಖಲೆಯನ್ನು ತಿದ್ದಿ ವೈಟ್ನರ್ ಹಾಕಲಾಗಿದೆ ಅನ್ನೋ ಆರೋಪ ಕೇಳಿಬಂದಿತ್ತು. ಇದಾದ ನಂತರ ವೈಟ್ನರ್‌ಗೆ ಟಾರ್ಚ್ ಬಿಟ್ಟು ವಿಡಿಯೋ ಸಹ ಮಾಡಲಾಗಿತ್ತು. ಆ ವಿಡಿಯೋವನ್ನು ಸಿಎಂ ಸಿದ್ದರಾಮಯ್ಯ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಸ್ಪಷ್ಟನೆ ನೀಡಿದರು. ಮೂಲ ದಾಖಲೆಯನ್ನು ಸಹ ಇಡಿ ಅಧಿಕಾರಿಗಳು ಪರಿಶೀಲನೆ ಮಾಡಿದರು ಎನ್ನಲಾಗಿದೆ.
ಹಲವು ನಾಯಕರಿಗೆ ನಡುಕ!
ಇನ್ನು 2ನೇ ದಿನವೂ ಸಹ ಇಡಿ ಅಧಿಕಾರಿಗಳು ತಿಂಡಿ, ಊಟ ಕಾಫಿ, ಟೀ ಎಲ್ಲವನ್ನೂ ಮುಡಾ ಕಚೇರಿಗೆ ತರಿಸಿಕೊಂಡಿದ್ದರು. ಒಂದು ನಿಮಿಷವನ್ನೂ ವ್ಯರ್ಥ ಮಾಡದೆ ದಾಖಲೆಗಳನ್ನು ಸಂಗ್ರಹಿಸುವುದು ಮತ್ತು ಅಧಿಕಾರಿಗಳಿಂದ ಮಾಹಿತಿಯನ್ನು ಪಡೆಯುವ ಕೆಲಸ ಮಾಡಿದ್ದಾರೆ. ಅದರಲ್ಲೂ ಪ್ರಮುಖವಾಗಿ 2ನೇ ದಿನ ಮೈಸೂರು ನಗರ ಅಭಿವೃದ್ಧಿ ಪ್ರಾಧಿಕಾರದಲ್ಲಿ ಯಾರ ಯಾರ ಅಧಿಕಾರದ ಅವಧಿಯಲ್ಲಿ ಎಷ್ಟು ನಿವೇಶನಗಳನ್ನ ಹಂಚಲಾಗಿದೆ? 50:50 ಅನುಪಾತದಲ್ಲಿ ಯಾರಿಗೆ ಬದಲಿ ನಿವೇಶನಗಳನ್ನು ನೀಡಲಾಗಿದೆ? ಎಷ್ಟು ನಿವೇಶನಗಳನ್ನು ನೀಡಲಾಗಿದೆ?ಎಂಬ ಈ ಎಲ್ಲಾ ಸಂಪೂರ್ಣ ಮಾಹಿತಿಯನ್ನು ಕಲೆ ಹಾಕಿದ್ದಾರೆ.
ಸದ್ಯ 2ನೇ ದಿನದ ನಂತರ ಇಡಿ ಕಾರ್ಯಾಚರಣೆ ಮುಕ್ತಾಯವಾಗಿದೆ ಅನ್ನೋ ಮಾಹಿತಿ ಲಭ್ಯವಾಗಿದೆ. ಆದರೆ ಇದು ಆರಂಭ ಮಾತ್ರ. ಸದ್ಯ ಎಲ್ಲಾ ದಾಖಲೆಗಳನ್ನು ತೆಗೆದುಕೊಂಡು ಹೋಗಿರುವ ಇಡಿ ಅಧಿಕಾರಿಗಳು ಆ ದಾಖಲೆಗಳ ಆಧಾರದ ಮೇಲೆ ಸಂಬಂಧಪಟ್ಟವರಿಗೆ ನೋಟಿಸ್ ನೀಡಿ ಅವರಿಂದ ಮಾಹಿತಿ ಕಲೆ ಹಾಕುವ ಕೆಲಸ ಮಾಡುತ್ತಾರೆ ಎನ್ನಲಾಗಿದೆ.
ಒಟ್ಟಾರೆ ಮೂಡಾದಲ್ಲಿ ಇಡಿ ಅಧಿಕಾರಿಗಳ ಈ ಕಾರ್ಯಚರಣೆ ಸಿಎಂ ಸಿದ್ದರಾಮಯ್ಯ ಅವರ ಕುಟುಂಬ ಮಾತ್ರವಲ್ಲದೆ 50:50 ಅನುಪಾತದಲ್ಲಿ ಯಾರೆಲ್ಲಾ ಅಕ್ರಮ ನಿಯಮಬಾಹಿರವಾಗಿ ನಿವೇಶನಗಳನ್ನು ಪಡೆದಿದ್ದಾರೋ? ಅವರೆಲ್ಲರಿಗೂ ಸಂಕಷ್ಟ ಖಚಿತವಾಗಿದೆ.
comments
Log in to write reviews