ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರದಿಂದ 1754 ಕೋಟಿ ರೂ. ಖೋತಾ ಆಗುವ ಸಾಧ್ಯತೆ!
2024-11-07 11:03:27
ಮಧ್ಯ ಕರ್ನಾಟಕದ 4 ಜಿಲ್ಲೆಗಳಿಗೆ ನೀರೊದಗಿಸುವ ಭದ್ರಾ ಮೇಲ್ದಂಡೆ ಯೋಜನೆಗೆ ಘೋಷಣೆ ಮಾಡಿದ್ದ 5300 ಕೋಟಿ ರೂ.ಗಳಲ್ಲಿ 1754 ಕೋಟಿ ರೂ. ಖೋತಾ ಆಗುವ ಸಾಧ್ಯತೆ ನಿಚ್ಚಳವಾಗಿದೆ ಎಂದು ಜಿಲ್ಲಾ ನೀರಾವರಿ ಅನುಷ್ಠಾನ ಹೋರಾಟ ಸಮಿತಿ ಆತಂಕ ವ್ಯಕ್ತಪಡಿಸಿದೆ.
ನಗರದ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಸಮಿತಿಯ ಜೆ.ಯಾದವರೆಡ್ಡಿ ಹಾಗೂ ಸಂಚಾಲಕ, ಹಿರಿಯ ಪತ್ರಕರ್ತ ಚಿಕ್ಕಪ್ಪನಹಳ್ಳಿ ಷಣ್ಮುಖ ಎಳೆ ಎಳೆಯಾಗಿ ಮಾಹಿತಿ ಬಿಚ್ಚಿಟಿದ್ದಾರೆ.
2023-24ನೇ ಸಾಲಿನ ಕೇಂದ್ರ ಸರ್ಕಾರದ ಬಜೆಟ್‍ನಲ್ಲಿ ಚಿತ್ರದುರ್ಗ ಸೇರಿದಂತೆ 4 ಜಿಲ್ಲೆಗಳಿಗೆ ಅನುಕೂಲವಾಗುವ ಭದ್ರಾ ಮೇಲ್ದಂಡೆ ಯೋಜನೆಗೆ 5300 ಕೋಟಿ ರೂ. ಅನುದಾನ ಘೋಷಣೆ ಮಾಡಿತ್ತು.
ಈ ಅನುದಾನ ಬಿಡುಗಡೆಗೆ ಕಳೆದೆರಡು ವರ್ಷಗಳಿಂದ ಹಗ್ಗಜಗ್ಗಾಟ ನಡೆಯುತ್ತಿದೆ. ಈ ನಡುವೆ ಕಳೆದ ಸೆಪ್ಟಂಬರ್ 5 ರಂದು ಕೇಂದ್ರ ಜಲಶಕ್ತಿ ಸಚಿವಾಲಯದ ಕಾರ್ಯದರ್ಶಿ ದೇಬರ್ಶಿ ಮುಖರ್ಜಿ ರಾಜ್ಯ ಸರ್ಕಾರಕ್ಕೆ ಬರೆದ ಪತ್ರದಲ್ಲಿ ಅನುದಾನ ಬಿಡುಗಡೆಗೆ ಆಕ್ಷೇಪಣೆ ವ್ಯಕ್ತಪಡಿಸಿ ಕೆಲ ತಾಂತ್ರಿಕ ಮಾಹಿತಿ ಕೋರಿದ್ದರು.
ಅಕ್ಟೋಬರ್ 28 ರಂದು ರಾಜ್ಯ ಸರ್ಕಾರದ ಜಲಸಂಪನ್ಮೂಲ ಇಲಾಖೆ ಹೆಚ್ಚುವರಿ ಕಾರ್ಯದರ್ಶಿ ಹರ್ಷಗುಪ್ತ ಪ್ರತಿಕ್ರಿಯೆ ನೀಡಿದ್ದು, ಮಾರ್ಚ್ 2022 ರವರೆಗೆ ಮಾಡಿದ ವೆಚ್ಚ ಆಧರಿಸಿ 5300 ಕೋಟಿ ರೂ. ಕೇಂದ್ರದಿಂದ ಲಭ್ಯವಾಗಬೇಕಿತ್ತು.
ಅಂದರೆ 14,697 ಕೋಟಿ ರೂ. ಒಟ್ಟಾರೆ ಯೋಜನಾ ವೆಚ್ಚದಲ್ಲಿ 5528 ಕೋಟಿ ರೂ. ರಾಜ್ಯಸರ್ಕಾರ ವೆಚ್ಚ ಮಾಡಿದೆ. ಉಳಿದ 9168 ಕೋಟಿ ರೂ.ಗಳಲ್ಲಿ ಕೇಂದ್ರ ಸರ್ಕಾರದಿಂದ ಶೇ.60 ರಷ್ಟು ಅಂದರೆ 5501 ಕೋಟಿ ರೂ. ಅನುದಾನ ಕೊಡಬೇಕಾಗಿತ್ತು. ಇದನ್ನು 5300 ಕೋಟಿ ರೂ.ಗೆ ಸೀಮಿತ ಮಾಡಲಾಗಿತ್ತು.
ಕಳೆದ ಮಾರ್ಚ್ ಅಂತ್ಯಕ್ಕೆ ಭದ್ರಾ ಮೇಲ್ದಂಡೆ ಯೋಜನೆಗೆ 8785 ಕೋಟಿ ರೂ. ಖರ್ಚಾಗಿದ್ದು, 5910 ಕೋಟಿ ರೂ. ಬಾಕಿ ಉಳಿಯುತ್ತದೆ. ಈ ಮೊತ್ತಕ್ಕೆ ಶೇ.60 ರಷ್ಟು ಅನುದಾನ ಕೇಂದ್ರದಿಂದ ಎಂದು ಲೆಕ್ಕ ಹಾಕಿದರೆ ಅದು 3546 ಕೋಟಿ ರೂ.ಗಳಾಗುತ್ತದೆ.
ಕೇಂದ್ರಕ್ಕೆ ರಾಜ್ಯ ಸಲ್ಲಿಸಿರುವ ಮರು ಪ್ರಸ್ತಾವನೆಯಲ್ಲಿ 3546.22 ಕೋಟಿ ರೂ. ಅನುದಾನದ ನೆರವು ಕೋರಲಾಗಿದೆ. ಹಾಗಾಗಿ ಕೇಂದ್ರದ ಬಜೆಟ್‍ನಲ್ಲಿ ಘೋಷಣೆ ಮಾಡಿದ್ದ 5300 ಕೋಟಿ ರೂ.ಗಳಲ್ಲಿ 1754 ಕೋಟಿ ರೂ. ಕಡಿತವಾಗಲಿದೆ.
ಭದ್ರಾ ಮೇಲ್ದಂಡೆ ಯೋಜನೆ ವಿಚಾರವಾಗಿ ರಾಜ್ಯದ ಕೇಂದ್ರ ಸಚಿವರು ಹಾಗೂ ಸಂಸದರು ಪ್ರಧಾನಿ ಎದುರು ಮಾತೇ ಆಡುತ್ತಿಲ್ಲ. ಪ್ರಧಾನಿ ಭೇಟಿಗೂ ಕಾಲಾವಕಾಶ ದೊರೆಯುತ್ತಿಲ್ಲ. ಕೇಂದ್ರ ಜಲಶಕ್ತಿಯ ಇಲಾಖೆಯ ರಾಜ್ಯ ಖಾತೆ ಸಚಿವ ವಿ.ಸೋಮಣ್ಣ ಚಿತ್ರದುರ್ಗಕ್ಕೆ ಬಂದಾಗ ಕೆಲವೇ ದಿನಗಳಲ್ಲಿ ಮೊದಲನೇ ಕಂತು ಬಿಡುಗಡೆ ಮಾಡಿಸುವ ಭರವಸೆ ನೀಡಿದ್ದರು. ಅದರ ಗಡುವು ಮುಗಿಯುತ್ತಾ ಬಂದಿದೆ ಎಂದು
ಚಿತ್ರದುರ್ಗ ಜಿಲ್ಲಾ ನೀರಾವರಿ ಅನುಷ್ಠಾನ ಹೋರಾಟ ಸಮಿತಿ ಸದಸ್ಯ ಜೆ.ಯಾದವ ರೆಡ್ಡಿ ಕಿಡಿಕಾರಿದ್ದಾರೆ.
comments
Log in to write reviews