"ವೇಸ್ಟ್ ಟು ಆರ್ಟ್" "ಕಸ"ಕ್ಕೆ "ಕಲೆ"ಯ ಸ್ಪರ್ಶ: ರಾಜ್ಯದ ಗಮನ ಸೆಳೆದ ಮೈಸೂರು ಜಿಲ್ಲೆಯ ಈ ಪುಟ್ಟಹಳ್ಳಿ
2024-10-04 10:27:30
ಮೈಸೂರು: ಇಲ್ಲಿ ಹಳೆ ಚಮಚ -ರಟ್ಟುಗಳಿಂದ ರಣಹದ್ದಿನ ಕಲಾಕೃತಿ , ಕಟ್ಟಡ ನಿರ್ಮಾಣ ಸಂದರ್ಭದಲ್ಲಿ ಎಲ್ಲೆಂದರಲ್ಲಿ ಎಸೆಯಲಾಗುವ ಮೊಳೆ, ಮತ್ತಿತರ ವಸ್ತುಗಳಿಂದ ಬುದ್ಧನ ಪ್ರತಿಕೃತಿ, ಬಿಯರ್- ವೈನ್ ಬಾಟಲ್ ಗಳಿಂದ ಮನೆಯ ಆಲಂಕಾರಿಕ ವಸ್ತುಗಳು, ಶ್ರೀ ಕೃಷ್ಣನ ಪ್ರತಿಕೃತಿ, ಸವೆದ ವಾಹನ ಚಕ್ರಗಳಿಂದ,ಸ್ಥಳೀಯವಾಗಿ ದೊರಕುವ ಕಲ್ಲುಗಳಿಂದ ನೇತಾಡುವ ಕನ್ನಡಿ, ಬಿಸಾಡಲು ಯೋಗ್ಯವಾದ ಬಟ್ಟೆಗಳಿಂದ ನೈಸರ್ಗಿಕ ಬಣ್ಣ ಬಳಸಿ ನಾನಾ ಬ್ಯಾನರ್ ಗಳು, ಹೀಗೆ, ಎಲ್ಲೆಂದರಲ್ಲಿ ಸಿಗುವ ತ್ಯಾಜ್ಯ ವಸ್ತುಗಳಿಗೆ ಇಲ್ಲಿ ಕಲೆಯ ಸ್ಪರ್ಶ ನೀಡಿ, ಅವುಗಳ ಮೂಲಕ ಸ್ವಚ್ಛ ಭಾರತದ ಸಂದೇಶ ಸಾರಲಾಗುತ್ತಿದೆ. ಇಲ್ಲಿನ ಗ್ರಾಮ ಪಂಚಾಯತ್ ಕಚೇರಿ ಈಗ ಒಂದು ಕಲಾ ಕೇಂದ್ರದಂತೆ ಕಂಗೊಳಿಸುತ್ತಿದೆ.
ಹೌದು! ಜಿಲ್ಲೆಯ ಟಿ ನರಸೀಪುರ ತಾಲೂಕಿನ ಪುಟ್ಟ ಹಳ್ಳಿ ಹೊಸಕೋಟೆಯ ಗ್ರಾಮ ಪಂಚಾಯತ್ ಕಚೇರಿಗೆ ಈಗ ನೀವೊಮ್ಮೆ ಭೇಟಿ ನೀಡಿದರೆ, ನೀವು ದಾರಿ ತಪ್ಪಿ ಯಾವುದೊ ಒಂದು ಕಲಾ ಪ್ರದರ್ಶನಕ್ಕೆ ಭೇಟಿ ನೀಡಿದ ಅನುಮಾನ ಪಟ್ಟರೆ ಆಶ್ಚರ್ಯವಿಲ್ಲ. ಏಕೆಂದರೆ ಈಗ ದೇಶದೆಲ್ಲೆಡೆ ಸಾಗುತ್ತಿರುವ ಸ್ವಚ್ಛತಾ ಹೈ ಸೇವಾ ಆಂದೋಲನದ ಭಾಗವಾಗಿ ಇಲ್ಲಿ ತ್ಯಾಜ್ಯ ವಸ್ತುಗಳಿಂದಲೇ ನಾನಾ ಬಗೆಯ ಕಲಾಕೃತಿಗಳನ್ನು ಸೃಷ್ಟಿಸಲಾಗಿದೆ.
ಈ ಸೃಜನಶೀಲತೆಯ ಹಿಂದಿರುವುದು ಗ್ರಾಮ ಪಂಚಾಯತ್ ನ ಅಭಿವೃದ್ಧಿ ಅಧಿಕಾರಿ ಪೂರ್ಣಿಮಾ ವಿ.ಎನ್. ಮೂಲತಃ ಎಂಎಸ್ಸಿ, ಬಿಎಡ್
ಪದವೀಧರೆಯಾದ ಅವರು ತಮ್ಮ ಪಂಚಾಯತ್ ವ್ಯಾಪ್ತಿಯಲ್ಲಿ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸಲು ಈ ಸೃಜನಶೀಲ ಪ್ರಯತ್ನ ನಡೆಸುತ್ತಿದ್ದಾರೆ. ಇವರ ನವೀನ ಕಲ್ಪನೆಯಾದ "ವೇಸ್ಟ್ ಟು ಆರ್ಟ್" ಇಲ್ಲಿ ಸಾಕಾರಗೊಂಡಿದೆ.
ತ್ಯಾಜ್ಯ ವಸ್ತುಗಳ ಮರುಬಳಕೆಯನ್ನು ಉತ್ತೇಜಿಸಲು ಈ ಪ್ರಯತ್ನವನ್ನು ಅವರು ನಡೆಸಿದ್ದಾರೆ. ತ್ಯಾಜ್ಯ ಮರುಬಳಕೆಯ ಭಾಗವಾಗಿ ಅವುಗಳನ್ನು ಬಳಸಿಕೊಂಡು ಅಲಂಕಾರಿಕ ವಸ್ತುಗಳ ತಯಾರಿ ಕಲ್ಪನೆಯನ್ನು ಅವರು ಇಲ್ಲಿ ಪರಿಚಯಿಸಿದ್ದಾರೆ. ಪರಿಸರ ಪ್ರಜ್ಞೆಯನ್ನು ಪ್ರೇರೇಪಿಸುವ ಮತ್ತು ತ್ಯಾಜ್ಯವನ್ನು ಕಡಿಮೆ ಮಾಡುವ ಪ್ರಾಮುಖ್ಯತೆಯನ್ನು ಎತ್ತಿ ತೋರಿಸುವ ವಿವಿಧ ಕಲಾಕೃತಿಗಳು ಇಲ್ಲಿ ಎಲ್ಲರ ಮನಸೆಳೆಯುತ್ತಿವೆ.
ಸೃಜನಾತ್ಮಕತೆ ಮತ್ತು ಸುಸ್ಥಿರತೆಯ ಸಂಪನ್ಮೂಲವಾಗಿ ಇಲ್ಲಿ ಕಸ-ರಸವಾಗಿ -ಕಲೆಯಾಗಿ ಹೊಸ ಹುಟ್ಟು ಪಡೆದಿದೆ.
comments
Log in to write reviews