ರಾಜ್ಯದ ಅಭಿವೃದ್ಧಿ ಬಗ್ಗೆ ಪ್ರಧಾನಿ ಮೋದಿಗೆ ಕೇಂದ್ರ ಸಚಿವ ವಿ.ಸೋಮಣ್ಣ ಮನವಿ
2024-10-08 23:23:33
ನವದೆಹಲಿ, ಅ.8: ಕೇಂದ್ರ ರೈಲ್ವೇ ಮತ್ತು ಜಲಶಕ್ತಿ ರಾಜ್ಯ ಖಾತೆಯ ಸಚಿವ ವಿ. ಸೋಮಣ್ಣ ಅವರು ನವದೆಹಲಿಯಲ್ಲಿಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಕರ್ನಾಟಕ ರಾಜ್ಯದ ಸರ್ವಾಂಗೀಣ ಅಭಿವೃದ್ಧಿಯ ಬಗ್ಗೆ ಚರ್ಚಿಸಿದ್ದಾರೆ.
ಇದೇ ಸಂದರ್ಭದಲ್ಲಿ ತುಮಕೂರು ಜಿಲ್ಲೆಯ ಅಭಿವೃದ್ಧಿ ಕುರಿತು ವಿಶೇಷ ಪ್ರಸ್ತಾವನೆಯನ್ನು ಪ್ರಧಾನಿಗೆ ಸಲ್ಲಿಸಿದ ಕೇಂದ್ರ ಸಚಿವ ಸೋಮಣ್ಣ ಅವರು, ತುಮಕೂರು ಲೋಕಸಭಾ ಕ್ಷೇತ್ರದ ಸರ್ವೋತೋಮುಖ ಅಭಿವೃದ್ದಿಗೆ ವಿಶೇಷ ಅನುದಾನ ನೀಡುವಂತೆ ಮನವಿ ಸಲ್ಲಿಸಿದರು.
ತುಮಕೂರು ಜಿಲ್ಲೆಯ ರೈಲ್ವೇ ನಿಲ್ದಾಣದ ಅಭಿವೃದ್ಧಿಗೆ ಕೇಂದ್ರ ರೈಲ್ವೆ ಸಚಿವಾಲಯದಿಂದ 87 ಕೋಟಿ ರೂ. ಅನುದಾನ ಬಿಡುಗಡೆ ಮಾಡುವ ಮೂಲಕ ಇಲಾಖೆಯ ಎಲ್ಲಾ ಅಭಿವೃದ್ಧಿ ಕಾರ್ಯಗಳಿಗೆ ಅತ್ಯಂತ ಸಹಕಾರ ನೀಡಿದ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ ಅವರಿಗೆ ಅಭಿನಂದನೆ ಸಲ್ಲಿಸಿ, ತುಮಕೂರು–ರಾಯದುರ್ಗ ಮತ್ತು ತುಮಕೂರು-ಚಿತ್ರದುರ್ಗ-ದಾವಣಗೆರೆ ರೈಲ್ವೇ ಮಾರ್ಗವನ್ನು 2027ರ ಜೂನ್ ತಿಂಗಳಲ್ಲಿ ಲೋಕಾರ್ಪಣೆ ಮಾಡಲು ತುಮಕೂರಿಗೆ ಆಗಮಿಸುವಂತೆ ಮತ್ತು ತುಮಕೂರು ರೈಲ್ವೇ ನಿಲ್ದಾಣಕ್ಕೆ ದಿವಂಗತ ಡಾ. ಶ್ರೀ ಶಿವಕುಮಾರ ಸ್ವಾಮೀಜಿ ಅವರ ಹೆಸರನ್ನು ನಾಮಕರಣ ಮಾಡುವಂತೆ ಕೇಂದ್ರ ಸಚಿವ ಸೋಮಣ್ಣ ಮನವಿ ಸಲ್ಲಿಸಿದ್ದಾರೆ.
ಹತ್ತಾರು ವರ್ಷಗಳಿಂದ ನೆನೆಗುದಿಗೆ ಬಿದ್ದ ತುಮಕೂರು-ರಾಯದುರ್ಗ ರೈಲ್ವೇ ಮಾರ್ಗಕ್ಕೆ ಸಂಬ೦ಧಿಸಿದ೦ತೆ ಭೂಸ್ವಾಧಿನ ಪ್ರಕ್ರಿಯೆಯನ್ನು 3 ತಿಂಗಳಲ್ಲಿ ಶೇ.9೦ರಷ್ಟು ಪೂರ್ಣಗೊಳಿಸಿರುವ ಬಗ್ಗೆ ಮತ್ತು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪ್ರವಾಸ ಮಾಡಿ ರೈಲ್ವೇ ಇಲಾಖೆಗೆ ಸಂಬ೦ಧಪಟ್ಟ ಪ್ರಗತಿ ಪರಿಶೀಲನಾ ಸಭೆ ನಡೆಸಿರುವ ಕುರಿತು ಹಾಗೂ ರೈಲು ಮಾರ್ಗದ ಭೂಸ್ವಾಧೀನ ಪ್ರಕ್ರಿಯೆ ಪ್ರಗತಿಗೆ ಜಿಲ್ಲಾಡಳಿತ ಮತ್ತು ರೈಲ್ವೇ ಅಧಿಕಾರಿಗಳು ಉತ್ತಮ ಸಹಕಾರ ನೀಡುತ್ತಿರುವ ಬಗ್ಗೆ ಪ್ರಧಾನ ಮಂತ್ರಿಗಳಿಗೆ ಮಾಹಿತಿ ನೀಡಿದ್ದಾರೆ.
comments
Log in to write reviews