ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿಯವರಿಂದಲೇ ಮೂಡಾ ಪಾದಯಾತ್ರೆಗೆ ಚಾಲನೆ!

ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿಯವರಿಂದಲೇ ಮೂಡಾ ಪಾದಯಾತ್ರೆಗೆ ಚಾಲನೆ!

2024-08-01 08:38:44

ದೆಹಲಿ/ಬೆಂಗಳೂರು, ಆಗಸ್ಟ್​​ 1: ವಾಲ್ಮೀಕಿ ಮತ್ತು ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಅವರ
ರಾಜೀನಾಮೆಗೆ ಪಟ್ಟುಹಿಡಿದಿರುವ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಆಗಸ್ಟ್ 3ನೇ ರಂದು ಬೆಂಗಳೂರಿನಿಂದ ಮೈಸೂರಿಗೆ ಪಾದಯಾತ್ರೆ ಕೈಗೊಳ್ಳಲು ಮುಂದಾಗಿವೆ.

ಆದರೆ ಈ ಪಾದಯಾತ್ರೆ ಪಾಲಿಟಿಕ್ಸ್​ನಲ್ಲಿ ಬಿಜೆಪಿ ಮತ್ತು ಜೆಡಿಎಸ್​ ಪಕ್ಷಗಳಲ್ಲಿ ಭಿನ್ನಮತ ಉಂಟಾಗಿತ್ತು. ಈ ಪಾದಯಾತ್ರೆಗೆ ಕೇಂದ್ರ ಸಚಿವ ಹೆಚ್​.ಡಿ ಕುಮಾರಸ್ವಾಮಿ ವಿರೋಧ ವ್ಯಕ್ತಪಡಿಸಿ ಒಪ್ಪಿಗೆ ಸೂಚಿಸಿರಲಿಲ್ಲ. ಆದರೆ ಇದೀಗ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರನ್ನು ಮನವೊಲಿಸಲಾಗಿದ್ದು, ಜೆಡಿಎಸ್-ಬಿಜೆಪಿಯಿಂದ ಪಾದಯಾತ್ರೆ ಫಿಕ್ಸ್​ ಆಗಿದೆ. ಈ ಬಗ್ಗೆ ದೆಹಲಿಯಲ್ಲಿ ಕರ್ನಾಟಕದ ಬಿಜೆಪಿ ಉಸ್ತುವಾರಿ ರಾಧಾಮೋಹನ್ ಸಿಂಗ್, ಬಿಜೆಪಿ ರಾಜ್ಯಾಧ್ಯಕ್ಷ
ಬಿ.ವೈ ವಿಜಯೇಂದ್ರ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರೊಂದಿಗೆ ನಡೆಸಿದ ಮಾತುಕತೆ ಯಶಸ್ವಿಯಾಗಿದೆ.

ಬಳಿಕ ಜಂಟಿ ಸುದ್ದಿಗೋಷ್ಠಿ ನಡೆಸಿದ ಕರ್ನಾಟಕದ ಬಿಜೆಪಿ ಉಸ್ತುವಾರಿ ರಾಧಾ ಮೋಹನ್ ದಾಸ್, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹಾಗೂ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಕರ್ನಾಟಕದ ಸಿಎಂ ಸಿದ್ದರಾಮಯ್ಯ ವಿರುದ್ಧ ಮೂಡಾ ಸೈಟ್ ಹಗರಣದ ಬಗ್ಗೆ ಆಗಸ್ಟ್ 3 ಶನಿವಾರದಿಂದ ಬೆಳಗ್ಗೆ 8:30 ರಿಂದ ಬೆಂಗಳೂರಿನಿಂದ ಮೈಸೂರಿನವರೆಗೆ ಬಿಜೆಪಿ-ಜೆಡಿಎಸ್ ಪಕ್ಷಗಳು ಜಂಟಿಯಾಗಿ ಪಾದಯಾತ್ರೆ ನಡೆಸುತ್ತವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೈಸೂರಿನ ವಿಜಯನಗರ ಬಡಾವಣೆಯಲ್ಲಿ 4 ಸಾವಿರ ಕೋಟಿ ರೂಪಾಯಿ ಮೊತ್ತದ  ಮೂಡಾ ಸೈಟ್ ಗಳ ಹಂಚಿಕೆಯಲ್ಲಿ ಅಕ್ರಮ ಎಸಗಿದ್ದಾರೆ. ಈ ಬಗ್ಗೆ ಸಾಮಾಜಿಕ ಹೋರಾಟಗಾರ ಹಾಗೂ ವಕೀಲ ಟಿ.ಜೆ.ಅಬ್ರಹಾಂ ಅವರು ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಶನ್ ನಡೆಸಲು ಅನುಮತಿ ಕೋರಿ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರಿಗೆ ದೂರು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಕ್ಷಣವೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಮೂಡಾ ಸೈಟ್ ಹಗರಣದ ಬಗ್ಗೆ ತನಿಖೆ ನಡೆಸಲು ಅವಕಾಶ ನೀಡಬೇಕು ಎಂದು ಆಗ್ರಹಿಸಿದರು.
ಆಗಸ್ಟ್ 3 ಶನಿವಾರ ಬೆಳಗ್ಗೆ 8:30 ಕ್ಕೆ ಸರಿಯಾಗಿ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರಿಂದಲೇ ಮೂಡಾ ಸೈಟ್ ಹಗರಣದ ವಿರುದ್ಧ ಪಾದಯಾತ್ರೆ ನಡೆಸಲು ಚಾಲನೆ ಸಿಗಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದ್ದಾರೆ.
 

author single

L Ramprasad

Managing Director

comments

No Reviews