ಟಾಕ್ಸಿಕ್ ಚಿತ್ರದ ಸೆಟ್ ವಿವಾದ: ಸ್ಪಷ್ಟನೆ ನೀಡಿದ ಎಚ್.ಎಂ.ಟಿ
2024-11-02 12:48:21
ಬೆಂಗಳೂರು, ನ.1: ಕೆಜಿಎಫ್ 2 ಸಿನಿಮಾದ ಭರ್ಜರಿ ಯಶಸ್ಸಿನ ಬಳಿಕ ಸಾಕಷ್ಟು ಸಮಯ ತೆಗೆದುಕೊಂಡಿರುವ ನಟ ಯಶ್, 'ಟಾಕ್ಸಿಕ್' ಹೆಸರಿನ ಸಿನಿಮಾ ಮಾಡುತ್ತಿದ್ದಾರೆ. ಹಾಲಿವುಡ್‌ನಿಂದ ತಂತ್ರಜ್ಞರನ್ನು ಕರೆಸಿರುವ ನಟ ಯಶ್, ಸಾಕಷ್ಟು ದೊಡ್ಡ ಮಟ್ಟದಲ್ಲಿ ಸಿನಿಮಾ ನಿರ್ಮಾಣಕ್ಕೆ ಮುಂದಾಗಿದ್ದರು. ಸತತ ಎರಡು ವರ್ಷ ಸಿನಿಮಾಗೆ ತಯಾರಿ ಮಾಡಿಕೊಂಡಿದ್ದ ಯಶ್, ದೊಡ್ಡ ತಾರಾಗಣವನ್ನು ಒಟ್ಟು ಸೇರಿಸಿ ಚಿತ್ರೀಕರಣ ಆರಂಭಿಸಿದ್ದರು. ಬೆಂಗಳೂರಿನಲ್ಲಿ ಟಾಕ್ಸಿಕ್‌ಗಾಗಿ ದೊಡ್ಡ ಸೆಟ್ ಹಾಕಿದ್ದರು, ಇದೇ ಈಗ ವಿವಾದಕ್ಕೆ ಕಾರಣವಾಗಿದ್ದು, ಯಶ್‌ಗೆ ಸಂಕಷ್ಟ ತಂದಿದೆ.
ಬೆಂಗಳೂರಿನ ಹೊರವಲಯದಲ್ಲಿ ಎಚ್‌ಎಂಟಿಗೆ ಸೇರಿದ ಜಾಗದಲ್ಲಿ ಸಿನಿಮಾ ಸೆಟ್ ಹಾಕಲು ಮರ ಕಡಿಯಲಾಗಿದೆ ಎನ್ನುವ ಆರೋಪ ಇದೀಗ ಟಾಕ್ಸಿಕ್ ಚಿತ್ರತಂಡದ ಮೇಲೆ ಬಂದಿದೆ. ಅರಣ್ಯ ಸಚಿವ ಈಶ್ವರ್ ಖಂಡ್ರೆ ಸ್ವತಃ ಟಾಕ್ಸಿಕ್ ಸೆಟ್ ಹಾಕಿದ್ದ ಸ್ಥಳಕ್ಕೆ ಭೇಟಿ ನೀಡಿದ್ದರು. ಮರ ಕಡಿದಿರುವ ಬಗ್ಗೆ ತನಿಖೆ ನಡೆಲಸಾಗುವುದು, ಒಂದು ವೇಳೆ ಸೆಟ್ ಹಾಕಲು ಮರ ಕಡಿದಿದ್ದರೆ, ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದರು.
ಜಾಗ ನಮ್ಮದಲ್ಲ ಎಂದ ಹೆಚ್‌ಎಂಟಿ!
ಟಾಕ್ಸಿಕ್ ಸಿನಿಮಾ ಸೆಟ್ ವಿಚಾರ ವಿವಾದದ ಸ್ವರೂಪ ಪಡೆಯುತ್ತಿದ್ದಂತೆ ಎಚ್‌ಎಂಟಿ ಸಂಸ್ಥೆ ಈ ಬಗ್ಗೆ ಸ್ಪಷ್ಟನೆ ನೀಡಿದೆ. ಎಚ್‌ಎಂಟಿ ಗ್ರೂಪ್ ಆಫ್ ಕಂಪನೀಸ್‌ನ ಅಧಿಕೃತ ಎಕ್ಸ್ ಖಾತೆಯಿಂದ ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ಈಗ ಸೆಟ್ ಹಾಕಿರುವ ಜಾಗ ತಮಗೆ ಸೇರಿದ್ದಲ್ಲ ಎಂದು ಸ್ಪಷ್ಟನೆ ನೀಡಿದೆ.
ಯಶ್ ನಟನೆಯ ಟಾಕ್ಸಿಕ್ ಸಿನಿಮಾ ಸೆಟ್ ಹಾಕಲು ಮರ ಕಡಿದಿದ್ದಾರೆ ಎಂದು ಹೇಳಲಾಗುತ್ತಿರುವ ಸ್ಥಳವು ಕೆನರಾ ಬ್ಯಾಂಕ್‌ನ ಒಡೆತನಕ್ಕೆ ಸೇರಿದ್ದು, ಅವರೇ ನಿರ್ವಹಣೆ ಮಾಡುತ್ತಿದ್ದಾರೆ. ಕೆನರಾ ಬ್ಯಾಂಕ್‌ನ ಜಾಗದಲ್ಲಿ ಸಿನಿಮಾ ಸೆಟ್ ಹಾಕಿರುವುದಕ್ಕೂ ನಮಗೂ ಯಾವುದೇ ಸಂಬಂಧವಿಲ್ಲ, ಈಗ ಮರ ಕಡಿದಿದ್ದಾರೆ ಎನ್ನಲಾಗುತ್ತಿರುವ ಜಾಗ ಎಚ್‌ಎಂಟಿ ಅಧೀನಕ್ಕೆ ಒಳಪಡುವುದಿಲ್ಲ ಎಂದು ಈ ಮೂಲಕ ಸ್ಪಷ್ಟಪಡಿಸುತ್ತಿದ್ದೇವೆ ಎಂದು ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿದೆ.
ಯಶ್ ಟಾಕ್ಸಿಕ್ ಸಿನಿಮಾಗೆ ಭಾರಿ ಸಿದ್ಧತೆ ಮಾಡಿಕೊಂಡಿದ್ದರು. ಸಿನಿಮಾ ಬಗ್ಗೆ ಕುತೂಹಲ ಉಳಿಸಿಕೊಳ್ಳಲು ಅವರು ಯಾವುದೇ ವಿವರಗಳನ್ನು ಕೂಡ ಬಿಟ್ಟುಕೊಟ್ಟಿರಲಿಲ್ಲ. ಸಿನಿಮಾದಲ್ಲಿ ದೊಡ್ಡ ತಾರಾಬಳಗವೇ ಇದ್ದರೂ ಇನ್ನೂ ಯಾವುದನ್ನೂ ಕೂಡ ರಿವೀಲ್ ಮಾಡಿಲ್ಲ. 1960-70ರ ಕಾಲದಂತೆ ಸೆಟ್ ಹಾಕಲಾಗಿದೆ ಎಂದು ಹೇಳಲಾಗಿತ್ತಾದರೂ, ಈ ಬಗ್ಗೆ ಒಂದೇ ಒಂದು ಫೋಟೊ ಕೂಡ ಆಚೆ ಬರದಂತೆ ಚಿತ್ರತಂಡ ನೋಡಿಕೊಂಡಿತ್ತು. ಆದರೆ ಸಚಿವರು ಭೇಟಿ ನೀಡಿದ ಬೆನ್ನಲ್ಲೇ ಸಿನಿಮಾ ಸೆಟ್‌ನ ವಿಡಿಯೋ ಕೂಡ ಈಗ ಬಹಿರಂಗವಾಗಿದೆ. ಯಶ್ ಮತ್ತು ಚಿತ್ರತಂಡ ಇಷ್ಟು ದಿನ ಹಾಕಿದ್ದ ಶ್ರಮ ಈಗ ಮಣ್ಣುಪಾಲಾಗಿದೆ.
comments
Log in to write reviews