ತಿರುಪತಿ ಲಡ್ಡು ವಿವಾದ: ಸುಪ್ರೀಂಕೋರ್ಟಿನಿಂದ ಮತ್ತೆ ತನಿಖೆಗೆ ಆದೇಶ!

ತಿರುಪತಿ ಲಡ್ಡು ವಿವಾದ: ಸುಪ್ರೀಂಕೋರ್ಟಿನಿಂದ ಮತ್ತೆ ತನಿಖೆಗೆ ಆದೇಶ!

2024-10-04 05:36:05

ನವದೆಹಲಿ, ಅ.4: ದೇಶವನ್ನೇ ಬೆಚ್ಚಿಬೀಳಿಸಿದ್ದ ತಿರುಪತಿ ದೇವಸ್ಥಾನದ ಲಡ್ಡು ವಿವಾದದ ಬಗ್ಗೆ ಹೊಸದಾಗಿ ತನಿಖೆ ನಡೆಸುವಂತೆ ಸುಪ್ರೀಂಕೋರ್ಟ್ ಆದೇಶಿಸಿದೆ.

ಸಿಬಿಐ, ಆಂಧ್ರಪ್ರದೇಶ ರಾಜ್ಯ ಪೊಲೀಸ್ ಇಲಾಖೆ ಮತ್ತು ಎಫ್‌ಎಸ್‌ಎಸ್‌ಎಐ ಅಧಿಕಾರಿಗಳನ್ನು ಒಳಗೊಂಡಿರುವ ಹೊಸ 5 ಸದಸ್ಯರ ಸ್ವತಂತ್ರ ಎಸ್‌ಐಟಿಯನ್ನು ರಚಿಸಲು ಸುಪ್ರೀಂಕೋರ್ಟ್ ಸೂಚಿಸಿದೆ.

ನ್ಯಾಯಮೂರ್ತಿ ಬಿ.ಆರ್ ಗವಾಯಿ ಮತ್ತು ನ್ಯಾಯಮೂರ್ತಿ ಕೆ.ವಿ ವಿಶ್ವನಾಥನ್ ಅವರ ಪೀಠವು ಈ ಪ್ರಕರಣದ ವಿಚಾರಣೆ ನಡೆಸುತ್ತಿದೆ.

ಆಂಧ್ರಪ್ರದೇಶದ ತಿರುಮಲದಲ್ಲಿರುವ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಲಡ್ಡುಗಳನ್ನು ತಯಾರಿಸುವಲ್ಲಿ ಪ್ರಾಣಿಗಳ ಕೊಬ್ಬನ್ನು ಬಳಸಲಾಗಿದೆ ಎಂಬ ಆರೋಪದ ಕುರಿತು ನ್ಯಾಯಾಲಯದ ಮೇಲ್ವಿಚಾರಣೆಯ ತನಿಖೆಯನ್ನು ಕೋರಿ ಸಲ್ಲಿಸಲಾದ ಅರ್ಜಿಗಳನ್ನು ಸುಪ್ರೀಂಕೋರ್ಟ್ ವಿಚಾರಣೆ ನಡೆಸಿತು.

ಕೇಂದ್ರದ ಪರವಾಗಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಸುಪ್ರೀಂಕೋರ್ಟ್‌ಗೆ ಹೇಳಿಕೆ ನೀಡಿದ್ದು, ಎಸ್‌ಐಟಿಯ ಮೇಲೆ ಕೇಂದ್ರದ ಹಿರಿಯ ಅಧಿಕಾರಿ ನಿಗಾ ವಹಿಸಬೇಕು, ಇದರಿಂದ ಜನರಲ್ಲಿ ಆತ್ಮವಿಶ್ವಾಸ ಹೆಚ್ಚುತ್ತದೆ ಎಂದು ಹೇಳಿದರು.

ಈ ಕುರಿತು ಸುಪ್ರೀಂಕೋರ್ಟ್ ಸ್ವತಂತ್ರ ಎಸ್‌ಐಟಿ ರಚನೆಗೆ ಸೂಚಿಸಿದೆ. ಸಿಬಿಐ ಮತ್ತು ಆಂಧ್ರಪ್ರದೇಶದ ಸರ್ಕಾರದಿಂದ ತಲಾ ಇಬ್ಬರು ಸದಸ್ಯರಾಗಬಹುದು. ಇದಲ್ಲದೇ ಎಫ್‌ಎಸ್‌ಎಸ್‌ಎಐ ಸದಸ್ಯನನ್ನೂ ಈ ಸಮಿತಿಯಲ್ಲಿ ಇರಿಸಬೇಕು. FSSAI ಆಹಾರ ಪದಾರ್ಥಗಳ ತಪಾಸಣೆಯ ವಿಷಯದಲ್ಲಿ ಅತ್ಯಂತ ಪರಿಣಿತ ಉನ್ನತ ಸಂಸ್ಥೆಯಾಗಿದೆ.

ಇದು ಕೋಟ್ಯಂತರ ಜನರ ನಂಬಿಕೆಯ ಪ್ರಶ್ನೆ ಎಂದು ಸುಪ್ರೀಂಕೋರ್ಟ್ ಹೇಳಿದೆ. ಹೀಗಿರುವಾಗ ಇದೊಂದು ರಾಜಕೀಯ ನಾಟಕವಾಗಬಾರದು, ಸ್ವತಂತ್ರ ಸಂಸ್ಥೆ ಇದ್ದರೆ ಆತ್ಮವಿಶ್ವಾಸ ಮೂಡುತ್ತದೆ. ಸೆಪ್ಟೆಂಬರ್ 30 ರಂದು ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ, ಅಂಧ್ರಪ್ರದೇಶ ಸರ್ಕಾರ ನೇಮಿಸಿದ ಎಸ್‌ಐಟಿ ತನಿಖೆಯನ್ನು ಮುಂದುವರಿಸಬೇಕೇ? ಅಥವಾ ಸ್ವತಂತ್ರ ಸಂಸ್ಥೆಯಿಂದ ತನಿಖೆ ನಡೆಸಬೇಕೇ? ಎಂದು ನಿರ್ಧರಿಸಲು ಸಹಾಯ ಮಾಡುವಂತೆ ಸುಪ್ರೀಂಕೋರ್ಟ್ ಪೀಠವು ತುಷಾರ್ ಮೆಹ್ತಾ ಅವರನ್ನು ಕೇಳಿತ್ತು.

ಪ್ರಸಾದ ಲಡ್ಡು ತಯಾರಿಕೆಯಲ್ಲಿ ಕಲಬೆರಕೆ ತುಪ್ಪವನ್ನು ಬಳಸಲಾಗಿದೆಯೇ? ಅಥವಾ ಇಲ್ಲವೇ? ಎಂದು ಆಂಧ್ರಪ್ರದೇಶ ಸರ್ಕಾರಕ್ಕೆ ಹಲವು ಪ್ರಶ್ನೆಗಳನ್ನು ಸುಪ್ರೀಂಕೋರ್ಟ್ ಕೇಳಿದೆ. ಟಿಡಿಪಿ ಪರ ವಾದ ಮಂಡಿಸಿದ ಹಿರಿಯ ವಕೀಲ ಸಿದ್ಧಾರ್ಥ್ ಲೂತ್ರಾ, ಲಡ್ಡುಗಳ ರುಚಿ ಚೆನ್ನಾಗಿಲ್ಲ ಎಂದು ಜನರು ದೂರಿದ್ದಾರೆ, ಕಲುಷಿತ ತುಪ್ಪವನ್ನು ಪ್ರಸಾದಕ್ಕೆ ಬಳಸಲಾಗಿದೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ ಎಂದು ಹೇಳಿದ್ದಾರೆ.

author single

L Ramprasad

Managing Director

comments

No Reviews