ಎಲ್ಲಾ ಚುನಾವಣೆಗಳಲ್ಲೂ ಬಿಜೆಪಿ-ಜೆಡಿಎಸ್ ಮೈತ್ರಿ ಮುಂದುವರಿಯುತ್ತದೆ: ನಿಖಿಲ್ ಕುಮಾರಸ್ವಾಮಿ

ಎಲ್ಲಾ ಚುನಾವಣೆಗಳಲ್ಲೂ ಬಿಜೆಪಿ-ಜೆಡಿಎಸ್ ಮೈತ್ರಿ ಮುಂದುವರಿಯುತ್ತದೆ: ನಿಖಿಲ್ ಕುಮಾರಸ್ವಾಮಿ

2024-08-30 10:13:47

ತುಮಕೂರು: ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಜೆಡಿಎಸ್ ಯುವನಾಯಕ ನಿಖಿಲ್ ಕುಮಾರಸ್ವಾಮಿ ರಾಜ್ಯದ ಜನತೆ ಜೆಡಿಎಸ್ ಮೈತ್ರಿಯನ್ನು ಒಪ್ಪಿದ್ದಾರೆ, ಲೋಕಸಭಾ ಚುನಾವಣೆಯಲ್ಲಿ ಈ ಮೈತ್ರಿಕೂಟಕ್ಕೆ ಅತಿಹೆಚ್ಚು ಸೀಟುಗಳನ್ನು ಗೆದ್ದುಕೊಡುವ ಮೂಲಕ ಪ್ರಧಾನಿ ನರೇಂದ್ರ ಮೋದಿಯವರ ಕೈ ಬಲಪಡಿಸಿದ್ದಾರೆ, ಮುಂಬರುವ ಎಲ್ಲ ಚುನಾವಣೆಗಳಲ್ಲೂ ಮೈತ್ರಿ ಮುಂದುವರಿಯಲಿದೆ ಎಂದು ಹೇಳಿದರು. 

ಚನ್ನಪಟ್ಟಣ ವಿಧಾನಸಭಾ  ಕ್ಷೇತ್ರದ ಉಪಚುನಾವಣೆಯಲ್ಲಿ ಮೈತ್ರಿಗೆ ಎದುರಾಗುತ್ತಿರುವ ಸಮಸ್ಯೆ ಎರಡೂ ಪಕ್ಷಗಳಿಗೆ ಸವಾಲಾಗಿದೆ. ಏಕೆಂದರೆ ಚನ್ನಪಟ್ಟಣ ಬೈಎಲೆಕ್ಷನ್ ಟಿಕೆಟ್ ಪಡೆಯಲು ಬಿಜೆಪಿ ಪರ ಮಾಜಿ ಸಚಿವ ಹಾಗೂ ಹಾಲಿ ಬಿಜೆಪಿ ಎಂಎಲ್ಸಿ ಸಿ.ಪಿ.ಯೋಗೇಶ್ವರ್ ತುದಿಗಾಲ ಮೇಲೆ ನಿಂತಿದ್ದಾರೆ. ಒಂದು ವೇಳೆ ತಮಗೆ ಬಿಜೆಪಿ ಟಿಕೆಟ್ ಸಿಗದಿದ್ದರೆ ಚನ್ನಪಟ್ಟಣ ಬೈಎಲೆಕ್ಷನ್ ನಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲು ಸಿದ್ಧ ಎಂದು ಹೇಳಿದ್ದಾರೆ. 
ಇನ್ನೊಂದೆಡೆ ಜೆಡಿಎಸ್ ಟಿಕೆಟ್ ಯಾರಿಗೆ ಬೇಕಾದರೂ ಸಿಗಬಹುದು ಎಂಬ ವಾತಾವರಣ ಇದೆ. ಜೆಡಿಎಸ್ ಟಿಕೆಟ್ ‌ಗೆ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದ ಡಾ.ಸಿ.ಎನ್.ಮಂಜುನಾಥ್ ಅವರ ಪತ್ನಿ ಅನಸೂಯಾ ಅವರ ಹೆಸರು ಜೋರಾಗಿ ಕೇಳಿಬಂದಿತ್ತು. ನಂತರ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಪುತ್ರಿಯೂ ಆದ ಅನಸೂಯಾ ಅವರು ರಾಜಕೀಯ ಪ್ರವೇಶಿಸಲು ಬಹಿರಂಗವಾಗಿ ಯಾವುದೇ ಹೇಳಿಕೆ ನೀಡದೆ ಮೌನ ವಹಿಸಿದ್ದಾರೆ. ಇದರಿಂದ ತಂದೆಯ ನಂತರ ಚನ್ನಪಟ್ಟಣ ಬೈಎಲೆಕ್ಷನ್ ನಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಾರೆ ಎಂದು ನಿಖಿಲ್ ಕುಮಾರಸ್ವಾಮಿ ಅವರ ಹೆಸರು ಪ್ರಬಲವಾಗಿ ಕೇಳಿಬಂದಿತ್ತು‌‌. ಆದರೆ ಖುದ್ದು ನಿಖಿಲ್ ಕುಮಾರಸ್ವಾಮಿ ಅವರೇ ನಾನು ರಾಜ್ಯಾದ್ಯಂತ ಸಂಚರಿಸಿ ಜೆಡಿಎಸ್ ಪಕ್ಷ ಸಂಘಟನೆ ಮಾಡಬೇಕು, ಆದ್ದರಿಂದ ಚನ್ನಪಟ್ಟಣ ಬೈಎಲೆಕ್ಷನ್ ನಲ್ಲಿ ನಾನು ಸ್ಪರ್ಧಿಸುವುದಿಲ್ಲ ಎಂದು ಘೋಷಿಸಿದ್ದರು. ಈ ಹಿನ್ನೆಲೆಯಲ್ಲಿ ಮತ್ತೆ ಎನ್.ಡಿ‌.ಎ ಪರವಾಗಿ ನಾನು ಸ್ಪರ್ಧಿಸಿ ಚನ್ನಪಟ್ಟಣ ಶಾಸಕನಾಗುತ್ತೇನೆ ಎಂದು ಕ್ಷೇತ್ರದಲ್ಲಿ ಒಟ್ಟು 5 ಬಾರಿ ಶಾಸಕರಾಗಿರುವ ಹಾಲಿ ಬಿಜೆಪಿ ಎಂಎಲ್ಸಿ ಸಿ.ಪಿ.ಯೋಗೇಶ್ವರ್ ಹೇಳಿದ್ದಾರೆ.

ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಸಿ.ಪಿ‌.ಯೋಗೇಶ್ವರ್ ಸ್ಪರ್ಧೆಯ ಅಂಕಿ-ಅಂಶ...

1999 ರಲ್ಲಿ ಮೊದಲ ಬಾರಿ ಪಕ್ಷೇತರ ಶಾಸಕ, 2004 ಮತ್ತು 2008 ರಲ್ಲಿ 2ನೇ-3ನೇ ಬಾರಿ ಕಾಂಗ್ರೆಸ್ ನಿಂದ ಸ್ಪರ್ಧಿಸಿ ಗೆಲುವು, 2009 ರಲ್ಲಿ ಕಾಂಗ್ರೆಸ್ ಗೆ ರಾಜೀನಾಮೆ ನೀಡಿ ಬಿಜೆಪಿಯಿಂದ ಸ್ಪರ್ಧಿಸಿ ಸೋಲು, ಆದರೆ 2011 ರ ಬೈಎಲೆಕ್ಷನ್ ನಲ್ಲಿ ಮತ್ತೆ ಬಿಜೆಪಿಯಿಂದ ಸ್ಪರ್ಧಿಸಿ 4ನೇ ಬಾರಿ ಶಾಸಕ, 2013 ರಲ್ಲಿ ಸಮಾಜವಾದಿ ಪಕ್ಷದಿಂದ ಸ್ಪರ್ಧಿಸಿ 5ನೇ ಬಾರಿ ಗೆಲುವು, 2018 ಮತ್ತು 2023 ರ ಚುನಾವಣೆಗಳಲ್ಲಿ ಸೋಲು.
 
ಈ ಅಂಕಿಅಂಶಗಳ ಪ್ರಕಾರ ಸಿ.ಪಿ.ಯೋಗೇಶ್ವರ್ ಅವರು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಬಳಿಕ ಚನ್ನಪಟ್ಟಣ ಬೈಎಲೆಕ್ಷನ್ ನಲ್ಲಿ ಗೆದ್ದು 6 ನೇ ಬಾರಿ ಶಾಸಕರಾಗಲು ಮುಂದಾಗಿದ್ದಾರೆ. ಇದಕ್ಕಾಗಿ ಕಾಂಗ್ರೆಸ್ ಪಕ್ಷದ ಟಿಕೆಟ್ ಕೊಡುತ್ತೇವೆ, ಬನ್ನಿ ಎಂದು ಪರೋಕ್ಷವಾಗಿ ಡಿಸಿಎಂ ಡಿ.ಕೆ.ಶಿವಕುಮಾರ್ ಯೋಗೇಶ್ವರ್ ಗೆ ಆಹ್ವಾನಿಸಿದ್ದಾರೆ. ಆದರೆ ಯೋಗೇಶ್ವರ್ ಮಾತ್ರ ನನಗೆ ಬಿಜೆಪಿ ಟಿಕೆಟ್ ಸಿಗದಿದ್ದರೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತೇನೆ, ಆದರೆ ಮತ್ತೆ ಕಾಂಗ್ರೆಸ್ ಪಕ್ಷಕ್ಕೆ ವಾಪಸ್ ಹೋಗುವುದಿಲ್ಲ ಎಂದು ನೇರವಾಗಿ ಹೇಳಿದ್ದಾರೆ.
ಮೇಲ್ನೋಟಕ್ಕೆ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲ್ಲುವುದು ಬಹಳ ಕಷ್ಟ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ಮನದಟ್ಟಾಗಿದೆ. ಆದ್ದರಿಂದ ಕ್ಷೇತ್ರದಲ್ಲಿ ಇದೀಗ ಯೋಗೇಶ್ವರ್ ಯಾವ ಪಕ್ಷದಿಂದ ಬೈಎಲೆಕ್ಷನ್ ನಲ್ಲಿ ಸ್ಪರ್ಧಿಸುತ್ತಾರೆ ಎಂಬ ಖಚಿತ ಸುದ್ದಿ ಇನ್ನೂ ಪಕ್ಕ ಅಗಿಲ್ಲ‌.
 

author single

L Ramprasad

Managing Director

comments

No Reviews