ಶಾಸಕರ ಹೆಸರಿನಲ್ಲಿ ನಕಲಿ ಸಹಿ, ಲೆಟರ್ ಹೆಡ್ ಸೃಷ್ಟಿಸಿ ಕೆಲಸ ಕೊಡಿಸಿದ್ದ ಆರೋಪಿ ಅರೆಸ್ಟ್
2024-08-26 01:26:38
ಬೆಂಗಳೂರು, ಆ.26: ಶಾಸಕರ ಹೆಸರಿನಲ್ಲಿ ನಕಲಿ ಸಹಿ, ಲೆಟರ್ ಹೆಡ್ ಸೃಷ್ಟಿ ಮಾಡಿ ಕೆಲಸ ಕೊಡಿಸಿದ ಆರೋಪದ ಮೇಲೆ ಇಬ್ಬರನ್ನು ನಗರದ ವಿಧಾನಸೌಧ ಠಾಣಾ ಪೊಲೀಸರು ಬಂಧಿಸಿದ್ದಾರೆ.
ರಾಮನಗರದ ಸ್ವಾಮಿ (35), ಅಂಜನ್ ಕುಮಾರ್ (28) ಬಂಧಿತ ಆರೋಪಿಗಳು.
ಸ್ವಾಮಿ ಈ ಹಿಂದೆ ವಿಧಾನಸೌಧದಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡಿಕೊಂಡಿದ್ದನು. ಆದರೆ, ಸ್ವಾಮಿ ಕೆಲಸ ತೊರೆದು ರಾಜಕಾರಣಿಗಳ ಒಡನಾಟ ಬೆಳೆಸಿಕೊಂಡಿದ್ದನು. ಈತ ದಾವಣಗೆರೆ ದಕ್ಷಿಣ ಕ್ಷೇತ್ರದ ಶಾಸಕ ಶಾಮನೂರು ಶಿವಶಂಕರಪ್ಪ ಅವರ ಹೆಸರಿನಲ್ಲಿ ನಕಲಿ ಲೆಟರ್ ಹೆಡ್ ಸೃಷ್ಟಿಸಿ, ನಕಲಿ ಸಹಿ ಮಾಡಿದ್ದಾನೆ. ಬಳಿಕ ಸ್ವಾಮಿ, ವಿಧಾನಸಭಾ ಸಚಿವಾಲಯಕ್ಕೆ ಪತ್ರ ಬರೆದು ಪತ್ನಿ ವಿನುತಾ ಮತ್ತು ಅಂಜನ್ ಎಂಬುವರಿಗೆ ಶಾಸಕರ ಆಪ್ತ ಸಹಾಯಕ ಹುದ್ದೆ ಕೊಡಿಸಿದ್ದನು.
ಪತ್ನಿ ವಿನುತಾಗೆ ಶಾಸಕ ಶಾಮನೂರು ಶಿವಶಂಕರಪ್ಪ ಅವರ ಆಪ್ತ ಸಹಾಯಕಿಯಾಗಿ ನೇಮಿಸಲು ಶಿಫಾರಸ್ಸು ಮಾಡಿದ್ದನು. ಈ ನಕಲಿ ಲೆಟರ್ ಹೆಡ್ ನಂಬಿದ ವಿಧಾನಸಭಾ ಸಚಿವಾಲಯ ಸಿಬ್ಬಂದಿ 2023ರ ಮೇನಲ್ಲಿ ವಿನುತಾಗೆ ಕೆಲಸ ನೀಡಿದ್ದರು. ಬಳಿಕ, ವಿನುತಾ ಕೆಲಸಕ್ಕೆ ಬಾರದೆ ಪ್ರತಿ ತಿಂಗಳು 30 ಸಾವಿರ ಸಂಬಳವನ್ನು ಪಡೆದಿದ್ದಳು.
ಗರ್ಭಿಣಿಯಾದ ಬಳಿಕ ಕೆಲಸದಿಂದ ಬಿಡುಗಡೆಗೊಳಿಸುವಂತೆ ವಿನುತಾ ಪತ್ರ ಬರೆದಿದ್ದಳು. ಇದರ ಬಗ್ಗೆ ಅನುಮಾನಗೊಂಡು ಪರಿಶೀಲನೆ ಮಾಡಿದಾಗ ಅಸಲಿ ವಿಚಾರ ಬೆಳಕಿಗೆ ಬಂದಿದ್ದು, ಅಧಿಕಾರಿಗಳು ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರು.
ತನಿಖೆ ವೇಳೆ ಸಿ.ವಿ.ರಾಮನ್ ನಗರ ಕ್ಷೇತ್ರದ ಬಿಜೆಪಿ ಶಾಸಕ ಎಸ್.ರಘು ಹೆಸರಿನಲ್ಲೂ ವಂಚನೆ ಮಾಡಿರೋದು ಬೆಳಕಿಗೆ ಬಂದಿದೆ. ಶಾಸಕ ರಘು ಹೆಸರಿನಲ್ಲಿ ನಕಲಿ ಲೆಟರ್ ಸೃಷ್ಟಿಸಿ ಅಂಜನ್ ಕುಮಾರ್ ಎಂಬಾತನಿಗೆ ಕೆಲಸ ಕೊಡಿಸಿದ್ದನು. ಸದ್ಯ ಪೊಲೀಸರು ಸ್ವಾಮಿ ಮತ್ತು ಅಂಜನ್ ಕುಮಾರ್ನನ್ನು ಬಂಧಿಸಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಆರೋಪಿ ಸ್ವಾಮಿ ಪತ್ನಿ ವಿನುತಾಗೆ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ.
comments
Log in to write reviews