ಕೋವಿಡ್ ಹಗರಣದ ವರದಿ ಸಲ್ಲಿಕೆ ಮೊದಲೇ ಸುಧಾಕರ್ ಗೆ ನಡುಕ: ಸಿಎಂ ಗೇಲಿ
2024-09-03 05:50:38
ಮೈಸೂರು, ಸೆ.3: ರಾಜ್ಯದಲ್ಲಿ ನಡೆದಿತ್ತು ಎನ್ನಲಾದ ಬೃಹತ್ ಕೋವಿಡ್ ಹಗರಣದ ಬಗ್ಗೆ ವಿಚಾರಣೆ ನಡೆಸಿ ನ್ಯಾಯಮೂರ್ತಿ ಮೈಕಲ್ ಕುನ್ನಾ ಅವರು ನೀಡಿರುವ ವಿಚಾರಣಾ ಆಯೋಗದ ವರದಿಯನ್ನು ಇದೇ ಗುರುವಾರ ಸಂಜೆ ಸಚಿವ ಸಂಪುಟ ಸಭೆಯಲ್ಲಿ ಮಂಡಿಸುವುದಾಗಿ ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.
ಮೈಸೂರಿನಲ್ಲಿ ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ಕೋವಿಡ್ ಹಗರಣದ ಕುರಿತು ನ್ಯಾಯಮೂರ್ತಿ ಮೈಕಲ್ ಕುನ್ನಾ ಅವರು ನೀಡಿರುವ ವಿಚರಣಾ ಆಯೋಗದ ವರದಿಯನ್ನು ಗುರುವಾರ ಸಂಜೆ ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಮಂಡಿಸಲಾಗುವುದು, ಆದರೆ ಕೋವಿಡ್ ಹಗರಣದ ತನಿಖಾ ಆಯೋಗದ ವರದಿಯನ್ನು ನಾನೇ ಇನ್ನೂ ನೋಡಿಲ್ಲ, ಅದರಲ್ಲಿ ಏನು ಶಿಫಾರಸ್ಸು ಮಾಡಿದ್ದಾರೆ ಎಂಬುದನ್ನು ಸಂಪುಟ ಸಭೆಯಲ್ಲಿ ಮಂಡಿಸಿ ಚರ್ಚಿಸಲಾಗುವುದು ಎಂದು ತಿಳಿಸಿದರು.
ನಾನೇ ಇನ್ನೂ ನೋಡಿಲ್ಲ, ಆದರೆ ಇದಕ್ಕೂ ಮುನ್ನವೇ ಹಿಂದೆ ಬಿಜೆಪಿ ಸರ್ಕಾರದಲ್ಲಿ ಆರೋಗ್ಯ ಸಚಿವರಾಗಿದ್ದ ಡಾ.ಕೆ.ಸುಧಾಕರ್ ಅವರು ಚಡಪಡಿಸುತ್ತಿರುವುದೇಕೆ? ಸುಧಾಕರ್ ವರದಿ ನೋಡಿದ್ದಾರೆಯೇ? ತಪ್ಪು ಮಾಡಿರುವ ಕಾರಣ ಅವರು ಹೀಗೆ ಪ್ರತಿಕ್ರಿಯಿಸಿದ್ದಾರೆ. ಕುಂಬಳಕಾಯಿ ಕಳ್ಳ ಎಂದರೆ ನಾನೇ ಎಂದು ಏಕೆ ಅವರು ತಮ್ಮ ಹೆಗಲು ಮುಟ್ಟಿಕೊಳ್ಳಬೇಕು? ಎಂದು ಹಿಂದಿನ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಅವರನ್ನು ಸಿಎಂ ಗೇಲಿ ಮಾಡಿದರು.
'ಕೋವಿಡ್ ಹಗರಣದ ವಿಚಾರಣಾ ಆಯೋಗದ ವರದಿ ಸುಳ್ಳು ವರದಿ ಎಂದು ಅವರಿಗೆ ಹೇಗೆ ಗೊತ್ತಿರಲು ಸಾಧ್ಯ? ಸುಧಾಕರ್ ಮನಸ್ಥಿತಿ ಅರ್ಥವಾಗುತ್ತಿದೆ, ಬಹುಶಃ ತಪ್ಪು ಮಾಡಿರುವ ಪಾಪಪ್ರಜ್ಞೆ ಕಾಡುತ್ತಿರಬಹುದು, ವರದಿ ಬಹಿರಂಗವಾಗದ ಹೊರತು ನಾನು ಪ್ರತಿಕ್ರಿಯೆ ನೀಡುವುದಿಲ್ಲ. ಸಚಿವ ಸಂಪುಟ ಸಭೆಯಲ್ಲಿ ಕೋವಿಡ್ ಹಗರಣದ ವಿಚಾರಣಾ ವರದಿಯನ್ನು ಬಹಿರಂಗಪಡಿಸಿ ನಂತರ ಯಾವ ಕ್ರಮ ಕೈಗೊಳ್ಳಬೇಕು' ಎಂದು ತೀರ್ಮಾನಿಸಲಾಗುವುದು ಎಂದು ಸಿಎಂ ಸ್ಪಷ್ಟಪಡಿಸಿದರು.
comments
Log in to write reviews