ಮುಡಾ ಉರುಳು ಹೆಚ್ಚಾದ ಬೆನ್ನಲ್ಲೇ ಸಿಎಂ ಬದಲಾವಣೆ ಬಗ್ಗೆ ರಹಸ್ಯ ಚರ್ಚೆ!
2024-10-02 09:40:28
ಬೆಂಗಳೂರು, ಅ.2: ಸಿಎಂ ಸಿದ್ದರಾಮಯ್ಯಗೆ ದಿನೇ ದಿನೇ ಮುಡಾ ಹಗರಣ ಉರುಳು ಮತ್ತಷ್ಟು ಬಿಗಿಯಾಗುತ್ತಿದ್ದಂತೆಯೇ ರಾಜ್ಯ ಕಾಂಗ್ರೆಸ್ನಲ್ಲಿ ಸಭೆಗಳ ಮೇಲೆ ಸಭೆಗಳು ನಡೆಯುತ್ತಿವೆ. ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ಒತ್ತಡ ಹೆಚ್ಚಾಗುತ್ತಿರುವ ಮಧ್ಯೆ ಸಿಎಂ ಹುದ್ದೆಯ ಆಕಾಂಕ್ಷಿಗಳಾದ ಡಿ.ಕೆ ಶಿವಕುಮಾರ್ ಮತ್ತು ಡಾ. ಜಿ. ಪರಮೇಶ್ವರ್ ಅವರು ಗೌಪ್ಯ ಸಭೆ ನಡೆಸಿದ್ದರು. ಇದಾದ ಬೆನ್ನಲ್ಲೇ ಇದೀಗ ದಲಿತ ಸಚಿವರು ಸಭೆ ಮಾಡಿದ್ದು, ರಾಜ್ಯ ಕಾಂಗ್ರೆಸ್ನಲ್ಲಿ ಸಂಚಲನ ಮೂಡಿಸಿದೆ.
ಸಿಎಂ ಸಿದ್ದರಾಮಯ್ಯ ತಾನು ಮನಸ್ಸಾಕ್ಷಿಯಂತೆ ಕೆಲಸ ಮಾಡುತ್ತಿದ್ದು ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ ಎಂದಿದ್ದಾರೆ. ಆದರೆ ಕಾಂಗ್ರೆಸ್ ನಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ಮಾತ್ರ ಹತ್ತು ಹಲವು ಅನುಮಾನಗಳನ್ನು ಮೂಡಿಸುತ್ತಿವೆ. ಸಿಎಂ ಸಿದ್ದರಾಮಯ್ಯ ವಿರುದ್ದ ಇ.ಡಿ ಪ್ರಕರಣ ದಾಖಲಾಗುತ್ತಿದ್ದಂತೆ ಸಚಿವರ ಸಭೆಗಳು ಶುರುವಾಗಿದೆ. ನಿನ್ನೆ ಸಂಜೆ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಸಚಿವ ಪರಮೇಶ್ವರ್, ಎಚ್.ಸಿ ಮಹದೇವಪ್ಪ ಹಾಗೂ ಸಚಿವ ಸತೀಶ್ ಜಾರಕಿಹೊಳಿ ಅವರು ಒಟ್ಟಾಗಿ ಸಚಿವ ಎಚ್.ಸಿ ಮಹದೇವಪ್ಪ ಅವರ ಸರ್ಕಾರಿ ನಿವಾಸದಲ್ಲಿ ಸಭೆ ಸೇರಿ ಚರ್ಚೆ ನಡೆಸಿದ್ದಾರೆ. ಮುಂದಿನ ರಾಜಕೀಯ ಹಾದಿ ಬಗ್ಗೆ ಸಮಾಲೋಚನೆ ನಡೆಸಿರುವ ಈ ಮೂರು ಸಚಿವರ ಮೀಟಿಂಗ್ ಭಾರೀ ಕುತೂಹಲ ಮೂಡಿಸಿದೆ.
ಸಿಎಂ ಸಿದ್ದರಾಮಯ್ಯ ವಿರುದ್ಧ ಇಡಿಯಲ್ಲೂ ಪ್ರಕರಣ ದಾಖಲಾದ ಬಳಿಕ ಸಚಿವರಲ್ಲಿ ಆತಂಕ ಶುರುವಾದಂತಿದೆ. ಮುಂದೆ ಕೆಲವೇ ದಿನಗಳಲ್ಲಿ ರಾಜಕೀಯ ಸ್ಥಿತ್ಯಂತರದ ಆತಂಕ ತೆರೆಮರೆಯಲ್ಲಿ ಶುರುವಾಗಿದೆ. ಸಿಎಂ ಸಿದ್ದರಾಮಯ್ಯನವರ ಸ್ಥಾನಕ್ಕೂ ಕುತ್ತು ಬರುವ ಸಾಧ್ಯತೆಯ ಬಗ್ಗೆ ಚರ್ಚೆ ನಡೆದಿದ್ದು, ಯಾರೂ ಬಹಿರಂಗವಾಗಿ ಹೇಳಿಕೊಳ್ಳಲು ಸಿದ್ದರಿಲ್ಲ. ಈ ನಿಟ್ಟಿನಲ್ಲಿ ತಂತ್ರಗಾರಿಕೆ ಮಾಡುವ ಸಂಬಂಧ ಸಭೆ ಸೇರಿದ್ದ ಮೂವರು ಸಚಿವರು ಮಾತುಕತೆ ಹೂರಣ ಏನು? ಎಂಬುದು ಚರ್ಚೆಗೆ ಗ್ರಾಸವಾಗಿದೆ. ಮೊನ್ನೆಯಷ್ಟೇ ಪ್ರತ್ಯೇಕವಾಗಿ ಮಾತುಕತೆ ನಡೆಸಿದ್ದ ಡಾ. ಜಿ ಪರಮೇಶ್ವರ್ ಮತ್ತು ಡಿ.ಕೆ ಶಿವಕುಮಾರ್ ಎತ್ತಿನಹೊಳೆ ನೆಪ ಹೇಳಿದ್ದರು. ಸಚಿವರಾದ ಪರಂ-ಡಿಕೆಶಿ ಭೇಟಿ ಬಳಿಕ ಇದೀಗ ಸತೀಶ್ ಜಾರಕಿಹೊಳಿ, ಪರಮೇಶ್ವರ್ ಹಾಗೂ ಎಚ್.ಸಿ ಮಹದೇವಪ್ಪ ಚರ್ಚೆ ನಡೆದಿದೆ. ಸರ್ಕಾರಕ್ಕೆ ಡ್ಯಾಮೇಜ್ ಆಗುವ ಸ್ಥಿತಿ ಬಂದರೆ ಹೇಗೆ ತಂತ್ರಗಾರಿಕೆ ಮಾಡಬೇಕು ಎಂಬ ಬಗ್ಗೆ ಸಮಾಲೋಚನೆ ನಡೆಸಲಾಗಿದೆ ಎಂಬುದು ಮೂಲಗಳ ಮಾಹಿತಿ.
ದಲಿತ ಸಚಿವರು ಪ್ರತ್ಯೇಕ ಮಾತುಕತೆ ಬಳಿಕ ಸಿಎಂ ಸಿದ್ದರಾಮಯ್ಯ ಬಳಿ ತೆರಳಿದ್ದಾರೆ. ಶಕ್ತಿ ಭವನ ಕಚೇರಿಯಲ್ಲಿ ಡಿಸಿಎಂ ಡಿ.ಕೆ ಶಿವಕುಮಾರ್, ಕಾನೂನು ಸಚಿವ ಎಚ್.ಕೆ ಪಾಟೀಲ್, ಬಸವರಾಜ ರಾಯರೆಡ್ಡಿ, ಕೆ. ಎಚ್ ಮುನಿಯಪ್ಪ, ಎಚ್.ಸಿ ಮಹದೇವಪ್ಪ, ಸತೀಶ್ ಜಾರಕಿಹೊಳಿ, ಪರಮೇಶ್ವರ್ ಮಾತುಕತೆ ಮುಂದುವರಿದಿದೆ.
ಇ.ಡಿ ಕೇಸ್ ದಾಖಲಾದ ಬಳಿಕ ಸಿಎಂ ಕೂಡ ಅಷ್ಟು ರಿಲ್ಯಾಕ್ಸ್ ಆಗಿಲ್ಲ.
ಕಾಂಗ್ರೆಸ್ ನಲ್ಲಿ ಇಷ್ಟೆಲ್ಲ ಬೆಳವಣಿಗೆಗಳು ಒಂದೊಂದಾಗಿ ಶುರುವಾಗಿದ್ದರೆ ಅತ್ತ ಬಿಜೆಪಿ ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡುವುದು ನಿಶ್ಚಿತ ಎನ್ನುತ್ತಿದೆ. ಮುಂದಿನ ಕೆಲ ದಿನಗಳಲ್ಲಿ ತೀವ್ರ ಗತಿಯ ಬದಲಾವಣೆಗಳು ಆಗುವ ಸಾಧ್ಯತೆ ಎಂದು ಅನುಮಾನ ವ್ಯಕ್ತಪಡಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಟ್ಟೇ ಕೊಡುತ್ತಾರೆ ಎಂದಿದ್ದಾರೆ.
ರಾಜ್ಯ ಕಾಂಗ್ರೆಸ್ ನಲ್ಲಿ ಸದ್ಯಕ್ಕೆ ಎಲ್ಲವೂ ಬೂದಿ ಮುಚ್ಚಿದ ಕೆಂಡದಂತಿದೆ. ವ್ಯತಿರಿಕ್ತ ಪರಿಸ್ಥಿತಿಯಲ್ಲಿ ಮುಖ್ಯಮಂತ್ರಿ ಸ್ಥಾನದ ಮೇಲೆ ಕಣ್ಣು ನೆಟ್ಟಿರುವ ಪರಮೇಶ್ವರ್, ಸತೀಶ್ ಜಾರಕಿಹೊಳಿ ಹಾಗೂ ಹೆಚ್.ಸಿ ಮಹದೇವಪ್ಪ ರಣಾಂಗಣಕ್ಕೆ ಧುಮುಕಲು ಸಜ್ಜಾದಂತಿದೆ.
comments
Log in to write reviews