ರಮೇಶ್ ಜಾರಕಿಹೊಳಿ ದಿಲ್ಲಿಗೆ ಬರಲು ಬಿ.ಎಲ್.ಸಂತೋಷ್ ಬುಲಾವ್

ರಮೇಶ್ ಜಾರಕಿಹೊಳಿ ದಿಲ್ಲಿಗೆ ಬರಲು ಬಿ.ಎಲ್.ಸಂತೋಷ್ ಬುಲಾವ್

2024-08-16 05:46:03

ಬೆಂಗಳೂರು, .16: ಮೈಸೂರು ಪಾದಯಾತ್ರೆಗೆ ಸೆಡ್ಡು ಹೊಡೆದು ರೆಬೆಲ್​ ಟೀಂ ಪ್ರತ್ಯೇಕ ಪಾದಯಾತ್ರೆ ಮಾಡುವುದಕ್ಕೆ ಸರ್ಕಸ್​ ಮಾಡುತ್ತಿದೆ. ಕಳೆದ ವಾರವಷ್ಟೇ ಬೆಳಗಾವಿಯಲ್ಲಿ ಬಿಜೆಪಿ ಸಮಾನ ಮನಸ್ಕರ ತಂಡೆ ಸಭೆ ಸೇರುವ ಮೂಲಕ ಶಕ್ತಿ ಪ್ರದರ್ಶನ ಮಾಡಿದ್ದರು. ಇದೀಗ ಮತ್ತೆ ಸಭೆ ಸೇರುವುದಕ್ಕೆ ಆಗಸ್ಟ್​ 21ರಂದು ಬೆಂಗಳೂರಿನಲ್ಲಿ ನಿರ್ಧರಿಸಿದ್ದರು. ಅನಿವಾರ್ಯ ಕಾರಣದಿಂದ ಸಭೆಯೂ ಮುಂದೂಡಿಕೆಯಾಗಿದ್ದು, ಇದೀಗ ಎಲ್ಲರ ಚಿತ್ತ ಇದೀಗ ಹೈಕಮಾಂಡ್​ನತ್ತ ನೆಟ್ಟಿದೆ.

ಪಾದಯಾತ್ರೆಯನ್ನು ಮುಂದಿಟ್ಟುಕೊಂಡು ರಾಜ್ಯ ಬಿಜೆಪಿ ನಾಯಕತ್ವದ ವಿರುದ್ಧ ಸಭೆಗಳಲ್ಲಿ ತೊಡಗಿರುವ ಬಿಜೆಪಿ ಮುಖಂಡರು, ಈಗ ಹೈಕಮಾಂಡ್ ಸೂಚನೆಗಾಗಿ ಕಾಯುತ್ತಿದ್ದಾರೆ. ಹೀಗಾಗಿ ಆಗಸ್ಟ್ 21ರಂದು ಬೆಂಗಳೂರಿನಲ್ಲಿ ನಡೆಸುವುದಕ್ಕೆ ಪ್ಲ್ಯಾನ್ ಮಾಡಿದ್ದ 3ನೇ ಸಭೆ ಮುಂದೂಡಿಕೆಯಾಗಿದೆ. ಈ ಮಧ್ಯೆ ಸಭೆಯ ನೇತೃತ್ವ ವಹಿಸಿರುವ ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ ಮುಂದಿನ ವಾರ ನವದೆಹಲಿಗೆ ತೆರಳುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಬಿ.ಎಲ್​ ಸಂತೋಷ್​​ ಬುಲಾವ್!
ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಸಂತೋಷ್​​ರಿಂದ ಬುಲಾವ್ ಮೇರೆಗೆ ಶಾಸಕ ರಮೇಶ್ ಜಾರಕಿಹೊಳಿ ಮುಂದಿನ ವಾರ ದೆಹಲಿಗೆ ತೆರಳಲಿದ್ದು, ಆಪ್ತರ ಪ್ರಕಾರ ಆಗಸ್ಟ್ 19 ರಂದೇ ಹೈಕಮಾಂಡ್​ ನಾಯಕರನ್ನ ಭೇಟಿ ಆಗಲಿದ್ದಾರೆ ಎಂದು ತಿಳಿದುಬಂದಿದೆ. ಇನ್ನು ಶಾಸಕರಾದ ರಮೇಶ್ ಜಾರಕಿಹೊಳಿ‌, ಬಸನಗೌಡ ಪಾಟೀಲ್ ಯತ್ನಾಳ್, ಮಾಜಿ ಸಂಸದ ಪ್ರತಾಪ್ ಸಿಂಹ ಸೇರಿ ಹಲವರು ಪ್ರಯಾಣ ಮಾಡೋ ಸಾಧ್ಯತೆ ಇದೆ ಎನ್ನಲಾಗಿದ್ದು, ಮಾತುಕತೆ ನಡೆಸಿ ಪ್ರತ್ಯೇಕ ಪಾದಯಾತ್ರೆ ವಿವಾದ ಪರಿಹರಿಸುವ ಸಾಧ್ಯತೆಯೂ ಇದೆ. ಇನ್ನು ಆಗಸ್ಟ್ 21ರಂದು ಬೆಂಗಳೂರಿನಲ್ಲಿ ನಡೆಯಬೇಕಿದ್ದ ಸಭೆ ತಾತ್ಕಾಲಿಕ ಮುಂದೂಡಿಕೆಯಾಗಿದೆ.

ಈ ಮಧ್ಯೆ ವಾಲ್ಮೀಕಿ ನಿಗಮದ ಹಗರಣಕ್ಕೆ ಸಂಬಂಧಿಸಿದಂತೆ ಪ್ರತ್ಯೇಕ ಪಾದಯಾತ್ರೆಯ ವಿಚಾರದಲ್ಲಿ ಮೂರು ರೀತಿಯ ಪ್ರಯತ್ನಗಳು ಬಿಜೆಪಿಯೊಳಗೆ ನಡೆಯುತ್ತಿದೆ. ನಮ್ಮ ನೇತೃತ್ವದಲ್ಲಿ ನಡೆಯಲಿ ಎಂದು ಶಾಸಕರಾದ ಯತ್ನಾಳ್ ಮತ್ತು ರಮೇಶ್ ಜಾರಕಿಹೊಳಿ ಪಟ್ಟು ಹಿಡಿದಿದ್ದಾರೆ. ಆದ್ರೆ ಪಾದಯಾತ್ರೆ ನಡೆದ್ರೆ ಪಕ್ಷದ ವತಿಯಿಂದಲೇ ನಡೆಯುವಂತಾಗಬೇಕೆಂದು ಹೈಕಮಾಂಡ್ ನಾಯಕರನ್ನ ಒಪ್ಪಿಸುವ ಪ್ರಯತ್ನದಲ್ಲಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಇದ್ದಾರೆ. ಇದರ ನಡುವೆಯೇ ಬಿಎಸ್​ವೈ ಮತ್ತು ವಿಜಯೇಂದ್ರ ಅವರನ್ನು ಬಹಿರಂಗವಾಗಿ ವಿರೋಧಿಸದೇ, ಆಂತರಿಕವಾಗಿಯೇ ಮತ್ತೊಂದು ಪಾದಯಾತ್ರೆ ನಡೆಯಲಿ ಎಂಬ ಪ್ರಯತ್ನದಲ್ಲಿ ಒಂದು ಬಣ ಸಕ್ರಿಯವಾಗಿದೆ.‌

ಮತ್ತೊಂದೆಡೆ ಆಗಸ್ಟ್ 21 ರ ಸಭೆ ನಿಗದಿಯೇ ಆಗಿಲ್ಲ ಎನ್ನುವ ಮೂಲಕ ಬಿಜೆಪಿ ಸಮಾನಮನಸ್ಕ ಮುಖಂಡರು ತಮ್ಮ ಕಾರ್ಯತಂತ್ರ ಪೂರ್ಣ ಬಹಿರಂಗವಾಗದಂತೆಯೂ ಎಚ್ಚರಿಕೆ ವಹಿಸುತ್ತಿದ್ದಾರೆ.

author single

L Ramprasad

Managing Director

comments

No Reviews