ಸಿದ್ದರಾಮಯ್ಯ ಪರ ಎಐಸಿಸಿ ಮುಂದೆ ವಾದ ಮಂಡಿಸಲು ಅತ್ಯಾಪ್ತ ಸಚಿವರ ಸಿದ್ಧತೆ

ಸಿದ್ದರಾಮಯ್ಯ ಪರ ಎಐಸಿಸಿ ಮುಂದೆ ವಾದ ಮಂಡಿಸಲು ಅತ್ಯಾಪ್ತ ಸಚಿವರ ಸಿದ್ಧತೆ

2024-08-21 02:09:58

ಬೆಂಗಳೂರು,ಆ.21: ಮುಡಾ ಹಗರಣದಲ್ಲಿ ಪ್ರಾಸಿಕ್ಯೂಷನ್​ಗೆ ರಾಜ್ಯಪಾಲರು ಅನುಮತಿ ನೀಡಿದರೂ ಹೈಕೋರ್ಟ್​​ನಿಂದ ತಾತ್ಕಾಲಿಕ ರಿಲೀಫ್ ಪಡೆದಿರುವ ಸಿಎಂ ಸಿದ್ದರಾಮಯ್ಯ ನಾಡಿದ್ದು ಶುಕ್ರವಾರ ದೆಹಲಿಗೆ ತೆರಳಿ ಕಾಂಗ್ರೆಸ್ ಹೈಕಮಾಂಡ್ ನಾಯಕರನ್ನು ಭೇಟಿಯಾಗಲಿದ್ದಾರೆ. 

ಈ ಮಧ್ಯೆ, ಸಿಎಂ ಸಿದ್ದರಾಮಯ್ಯ ಪರ ಎಐಸಿಸಿ ಬಳಿ ಪ್ರಬಲ ವಾದ ಮಂಡಿಸಲು ಅವರ ಆಪ್ತ ಸಚಿವರು ಸಿದ್ಧತೆ ಮಾಡಿಕೊಂಡಿದ್ದಾರೆ.

ಸಿದ್ದರಾಮಯ್ಯ ಆಪ್ತ ಸಚಿವರ ವಾದವೇನು?
ಕರ್ನಾಟಕದ ಕಾಂಗ್ರೆಸ್ ಪಕ್ಷದ ಭವಿಷ್ಯದ ಕಾರಣಕ್ಕೆ ಸಿದ್ದರಾಮಯ್ಯ ಅನಿವಾರ್ಯ. ಹೀಗಾಗಿ ಸಿಎಂ ಹೈಕಮಾಂಡ್ ಅವರ ಪರ ಸ್ಟ್ರಾಂಗ್ ಆಗಿ ನಿಲ್ಲಬೇಕು. ಇಲ್ಲವಾದಲ್ಲಿ ಕರ್ನಾಟಕದ ಬಳಿಕ ತೆಲಂಗಾಣದ ಸರ್ಕಾರಕ್ಕೂ ಸಂಕಷ್ಟ ತರುತ್ತಾರೆ ಎಂದು ಸಿದ್ದರಾಮಯ್ಯ ಆಪ್ತ ಸಚಿವರು ವಾದಿಸುತ್ತಿದ್ದಾರೆ.

ಒಂದು ವೇಳೆ ಸಿಎಂ ವಿರುದ್ಧ ಎಫ್ಐ‌ಆರ್ ದಾಖಲಾದರೂ, ತನಿಖೆ ಶುರು ಮಾಡಿದರೂ ಹೈಕಮಾಂಡ್ ಅವರ ಪರ ನಿಲ್ಲಬೇಕು. ಯಾವುದೇ ಕಾರಣಕ್ಕೂ ಸಿಎಂ ಬದಲಾವಣೆ ಮಾಡಬಾರದು ಎಂದು ಸಚಿವರು ವಾದಿಸುತ್ತಿರುವುದಾಗಿ ಮೂಲಗಳು ತಿಳಿಸಿವೆ.

ಸಿದ್ದರಾಮಯ್ಯ ಬೆನ್ನಿಗೆ ಸಚಿವರು ನಿಲ್ಲದಿದ್ದರೆ ಇಡೀ ವ್ಯವಸ್ಥೆಯೇ ಹಾಳಾಗಬಹುದು. ಸಿದ್ದರಾಮಯ್ಯನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಿದರೆ ಹಾಲಿ ಹಾಗೂ ಮುಂದಿನ ರಾಜಕೀಯ ಲೆಕ್ಕಾಚಾರಗಳೆಲ್ಲಾ ಏರುಪೇರಾಗಬಹುದು. ಹೀಗಾಗಿ, ಸಿದ್ದರಾಮಯ್ಯ ಭದ್ರವಾಗಿ ಸಿಎಂ ಸ್ಥಾನದಲ್ಲಿದ್ದರೆ ಕ್ಯಾಬಿನೆಟ್​​ಗೂ ಉಳಿಗಾಲ. ಸಿದ್ದರಾಮಯ್ಯರನ್ನು ಕೈಬಿಟ್ಟರೆ ಕಾಂಗ್ರೆಸ್​​ಗೆ ತೊಂದರೆ ಎಂದು ಹೈಕಮಾಂಡ್ ಮುಂದೆ ವಾದ ಮಂಡಿಸಲು ಸಿದ್ದರಾಮಯ್ಯ ಅತ್ಯಾಪ್ತ ಸಚಿವರು ಸಿದ್ದವಾಗಿದ್ದಾರೆ. ಅದರಲ್ಲೂ ಅಹಿಂದ ಸಚಿವರು ವಿಶೇಷವಾಗಿ ಸಿದ್ದರಾಮಯ್ಯ ಪರ ಬ್ಯಾಟಿಂಗ್ ಮಾಡಲಿದ್ದಾರೆ ಎನ್ನಲಾಗಿದೆ.

ಈ ಮಧ್ಯೆ, ಮುಡಾ ಹಗರಣದಲ್ಲಿ ರಾಜ್ಯಪಾಲರ ವಿರುದ್ಧ ವಾಚಾಮಗೋಚರ ಟೀಕೆ ಮಾಡಿರುವ ಕಾಂಗ್ರೆಸ್ ನಾಯಕರ ವಿರುದ್ಧ ಬಿಜೆಪಿ ‘ದಲಿತ’ ಅಸ್ತ್ರ ಬಳಸಿದೆ. ದಲಿತರು ಎಂಬ ಕಾರಣಕ್ಕೆ ರಾಜ್ಯಪಾಲ ಥಾವರ್​ ಚಂದ್ ಗೆಹ್ಲೋಟ್ ಅವರನ್ನು ಕಾಂಗ್ರೆಸ್ ನಾಯಕರು ಗುರಿಯಾಗಿಸುತ್ತಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.

ನಾಳೆ ರಾಜ್ಯದಾದ್ಯಂತ ಬಿಜೆಪಿ ಪ್ರತಿಭಟನೆ
ಸಿಎಂ ವಿರುದ್ಧ ಪ್ರಾಸಿಕ್ಯೂಷನ್​ಗೆ ರಾಜ್ಯಪಾಲರ ಅನುಮತಿ ವಿಚಾರವಾಗಿ ರಾಜ್ಯಪಾಲರ ವಿರುದ್ಧ ಕಾಂಗ್ರೆಸ್ ನಾಯಕರು ಹೀನಾಯವಾಗಿ ಟೀಕೆ‌ ಮಾಡಿರುವುದನ್ನು ದಲಿತ ಅಸ್ತ್ರವಾಗಿ ಬಳಸಿಕೊಂಡ ಬಿಜೆಪಿ ಗುರುವಾರ ರಾಜ್ಯಾದ್ಯಂತ ಪ್ರತಿಭಟನೆಗೆ ಕರೆ ಕೊಟ್ಟಿದೆ. ನಾಳೆ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಬಿಜೆಪಿ ನಾಯಕರಿಂದ ಪ್ರತಿಭಟನೆ ನಡೆಯಲಿದೆ.

author single

L Ramprasad

Managing Director

comments

No Reviews