ವೈದ್ಯ ವಿದ್ಯಾರ್ಥಿನಿಯ ಗ್ಯಾಂಗ್ ರೇಪ್, ಕೊಲೆ ಖಂಡಿಸಿ ಆಗಸ್ಟ್ 17 ಮತ್ತು 18 ರಂದು ದೇಶಾದ್ಯಂತ ವೈದ್ಯಕೀಯ ಸೇವೆ ಬಂದ್!

ವೈದ್ಯ ವಿದ್ಯಾರ್ಥಿನಿಯ ಗ್ಯಾಂಗ್ ರೇಪ್, ಕೊಲೆ ಖಂಡಿಸಿ ಆಗಸ್ಟ್ 17 ಮತ್ತು 18 ರಂದು ದೇಶಾದ್ಯಂತ ವೈದ್ಯಕೀಯ ಸೇವೆ ಬಂದ್!

2024-08-16 07:09:06

ನವದೆಹಲಿ, ಆಗಸ್ಟ್ 16: ವೈದ್ಯ ವಿದ್ಯಾರ್ಥಿನಿಯ ಗ್ಯಾಂಗ್ ರೇಪ್, ಕೊಲೆಯ ಘಟನೆ ನಡೆದಿರುವ ಕೊಲ್ಕತ್ತಾದ ಆರ್.ಜಿ. ಕಾರ್ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಗೂಂಡಾಗಳು ನುಗ್ಗಿ ದಾಂಧಲೆ ನಡೆಸಿದ್ದನ್ನು ಖಂಡಿಸಿ ದೇಶಾದ್ಯಂತ ವೈದ್ಯರು ಸಿಡಿದೆದ್ದಿದ್ದಾರೆ. ಘಟನೆ ಖಂಡಿಸಿ ಆಗಸ್ಟ್ 17 ಮತ್ತು 18ರಂದು ದೇಶಾದ್ಯಂತ ವೈದ್ಯರು 24 ಗಂಟೆ ತಮ್ಮ ಕೆಲಸ ಸ್ಥಗಿತಗೊಳಿಸಿ ಪ್ರತಿಭಟನೆ ಸೂಚಿಸಲಿದ್ದಾರೆ. 

ಆಗಸ್ಟ್ 17ರ ಶನಿವಾರ ಬೆಳಗ್ಗೆ 6ರಿಂದ ಮರುದಿನ ಆಗಸ್ಟ್ 18ರ ಭಾನುವಾರ ಬೆಳಗ್ಗೆ 6 ಗಂಟೆ ವರೆಗೆ 24 ಗಂಟೆ ಕಾಲ ವೈದ್ಯರು ಮುಷ್ಕರ ನಡೆಸಲಿದ್ದಾರೆ. ಆಸ್ಪತ್ರೆಯಲ್ಲಿ ಅಗತ್ಯ ಸೇವೆಗಳು ಇರಲಿವೆ. ಆದರೆ, ಓಪಿಡಿ ಇರುವುದಿಲ್ಲ. ವೈದ್ಯರ ಸೇವೆಯೂ ಲಭ್ಯವಾಗುವುದಿಲ್ಲ. ಸರ್ಜರಿ ನಡೆಯುವುದಿಲ್ಲ. ತುರ್ತು ಸೇವೆಗಳ ವಿಭಾಗ ಮಾತ್ರ ತೆರೆದಿರುತ್ತದೆ ಎಂದು ಭಾರತೀಯ ವೈದ್ಯರ ಸಂಘ ಪ್ರಕಟಣೆಯಲ್ಲಿ ತಿಳಿಸಿದೆ. ವೈದ್ಯರ ಹಿತಕ್ಕಾಗಿ ದೇಶದ ಜನತೆಯ ಬೆಂಬಲವನ್ನು ಕೋರುತ್ತದೆ ಎಂದು ವೈದ್ಯರ ಸಂಘಟನೆ ಕೇಳಿಕೊಂಡಿದೆ. 

ದೇಶಾದ್ಯಂತ ಪ್ರಮುಖ ನಗರಗಳಲ್ಲಿ ಶನಿವಾರ ವೈದ್ಯರು ತಮ್ಮ ಕ್ಲಿನಿಕ್ ಮುಚ್ಚಿ ಬೀದಿಗಿಳಿಯಲಿದ್ದಾರೆ. ವೈದ್ಯ ವಿದ್ಯಾರ್ಥಿನಿಗೆ ನ್ಯಾಯಕ್ಕಾಗಿ ಇತರೇ ಸಂಘಟನೆಗಳ ಬೆಂಬಲವನ್ನೂ ವೈದ್ಯರು ಕೇಳಿದ್ದಾರೆ. ಘಟನೆ ನಡೆದಿರುವ ಕೊಲ್ಕತ್ತಾದ ಆರ್.ಜಿ ಕಾರ್ ಆಸ್ಪತ್ರೆಯಲ್ಲಿ ಸ್ವಾತಂತ್ರ್ಯ ದಿವಸದ ಮುನ್ನಾ ದಿನ ರಾತ್ರಿ ದುಷ್ಕರ್ಮಿಗಳ ತಂಡ ಏಕಾಏಕಿ ನುಗ್ಗಿದ್ದು, ಘಟನೆ ನಡೆದಿರುವ ಸೆಮಿನಾರ್ ಹಾಲ್ ಮತ್ತು ತುರ್ತು ಚಿಕಿತ್ಸೆಯ ವಿಭಾಗವನ್ನು ಪುಡಿಗಟ್ಟಿದೆ. 40-50 ಮಂದಿಯಿದ್ದ ತಂಡದ ಸದಸ್ಯರು ಪೊಲೀಸರ ಸಮ್ಮುಖದಲ್ಲಿಯೇ ಆಸ್ಪತ್ರೆ ಮೇಲೆ ದಾಳಿ ನಡೆಸಿದ್ದಾರೆ. ಇದನ್ನು ಖಂಡಿಸಿ ಗುರುವಾರ ಪಶ್ಚಿಮ ಬಂಗಾಳದಲ್ಲಿ ವೈದ್ಯಕೀಯ ವಿದ್ಯಾರ್ಥಿಗಳು ರಾಜ್ಯಾದ್ಯಂತ ಕ್ಯಾಂಡಲ್ ಉರಿಸಿ ಪ್ರತಿಭಟನೆ ನಡೆಸಿದ್ದಾರೆ. 

author single

L Ramprasad

Managing Director

comments

No Reviews