ಮುಡಾ ಹಗರಣ: ನಿವೃತ್ತ ನ್ಯಾ. ಪಿ.ಎನ್ ದೇಸಾಯಿ ನೇತೃತ್ವದ ಆಯೋಗದ ತನಿಖೆ ಆರಂಭ
2024-11-12 02:44:34
ಮೈಸೂರು, ನ.12: ಮುಡಾ ಹಗರಣದ ಬಗ್ಗೆ ಒಂದೆಡೆ ಲೋಕಾಯುಕ್ತ, ಮತ್ತೊಂದೆಡೆ ಇಡಿ ಕೂಡ ತನಿಖೆ ನಡೆಸುತ್ತಿದೆ. ಈ ಮಧ್ಯೆ ರಾಜ್ಯಸರ್ಕಾರ ಕೂಡಾ ಮುಡಾ ಹಗರಣದ ಬಗ್ಗೆ ನ್ಯಾಯಾಂಗ ತನಿಖೆಗೆ ನೀಡಿದೆ. ಎಲ್ಲಾ ದಿಕ್ಕಿನಿಂದಲೂ ಎಲ್ಲಾ ಆಯಾಮದಲ್ಲೂ ತನಿಖೆ ಚುರುಕುಗೊಂಡಿದೆ. ಈಗಾಗಲೇ ಲೋಕಾಯುಕ್ತ ಪೊಲೀಸರು, ಸಿಎಂ ಸಿದ್ದರಾಮಯ್ಯ ಸೇರಿ ಎಲ್ಲ ಆರೋಪಿಗಳ ವಿಚಾರಣೆ ನಡೆಸಿದ್ದಾರೆ. ಇಡಿ ಅಧಿಕಾರಿಗಳು ಕೂಡ ಹಲವು ಕಡೆ ದಾಳಿ ನಡೆಸಿ, ಮಹತ್ವದ ದಾಖಲೆ ಕಲೆಹಾಕಿದ್ದಾರೆ. ನಿವೃತ್ತ ನ್ಯಾಯಮೂರ್ತಿ ಪಿ.ಎನ್ ದೇಸಾಯಿ ನೇತೃತ್ವದ ಆಯೋಗ ಕೂಡಾ ತನಿಖೆ ನಡೆಸುತ್ತಿದ್ದು, ಇಂದು ಮುಡಾ ಕಚೇರಿಗೆ ಆಗಮಿಸಿದೆ.
ಪ್ರಕರಣದ ತನಿಖೆ ವಹಿಸಿಕೊಂಡ ಬಳಿಕ ಇದೇ ಮೊದಲ ಬಾರಿಗೆ ನಿವೃತ್ತ ನ್ಯಾಯಮೂರ್ತಿ ಪಿ.ಎನ್ ದೇಸಾಯಿ ಅವರ ಆಯೋಗ ಮುಡಾ ಕಚೇರಿಗೆ ಭೇಟಿ ನೀಡಿ ದಾಖಲೆ ಪರಿಶೀಲಿಸಿದೆ. ಮುಡಾ ಕಚೇರಿ ಬಳಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಇದೇ ಹೊತ್ತಲ್ಲಿ 50:50 ಅನುಪಾತದಲ್ಲಿ ಸೈಟ್ ಪಡೆದವರ 2ನೇ ಪಟ್ಟಿ ಎನ್ನಲಾಗುತ್ತಿರುವ ಪಟ್ಟಿಯೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
ಸೈಟ್ ಪಡೆದವರ ಮತ್ತೊಂದು ಪಟ್ಟಿ ವೈರಲ್!
ಯಾವಾಗಲೋ ಭೂಸ್ವಾಧೀನ, ಮತ್ಯಾವಾಗಲೋ ಸೈಟು ಹಂಚಿಕೆ. ಭೂಮಿ ವಶಕ್ಕೆ ಪಡೆದಿರುವುದು ಒಂದೆಡೆ, ಸೈಟ್ ನೀಡಿರುವುದು ಮತ್ತೊಂದೆಡೆ. 50:50 ಅನುಪಾತ ಜಾರಿಯಾಗುವ ಮುನ್ನ ಭೂಸ್ವಾಧೀನವಾಗಿದ್ದ ಭೂಮಿಗೂ 50:50 ಅನುಪಾತದಲ್ಲಿ ಸೈಟ್. ಹೀಗೆ ಮುಡಾದಲ್ಲಿ ಬಗೆದಷ್ಟು ಅಕ್ರಮಗಳು ಬಯಲಾಗುತ್ತಿವೆ. ಇದೀಗ 50:50 ಅನುಪಾತದಲ್ಲಿ ಸೈಟ್ ಪಡೆದವರ ಮತ್ತೊಂದು ಪಟ್ಟಿ ರಿಲೀಸ್ ಆಗಿದೆ. ಈ ಪಟ್ಟಿಯಲ್ಲಿ ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿ ಮತ್ತು ಸಿಎಂ ಆಪ್ತ ಹಿನಕಲ್ ಪಾಪಣ್ಣ ಹೆಸರು ಕೂಡಾ ಇದೆ.
928 ಸೈಟ್ ಹಂಚಿಕೆ ಪಟ್ಟಿಯಲ್ಲಿ ಸಿಎಂ ಪತ್ನಿ ಹೆಸರು
ಸಿಎಂ ಪತ್ನಿ ಪಾರ್ವತಿಯವರು ಪಡೆದಿರುವ 14 ಸೈಟ್‌ಗಳ ವಿವರವೂ ಬಹಿರಂಗವಾಗಿದ್ದು, ಹೊಸ ಪಟ್ಟಿಯಲ್ಲಿ ಸಿಎಂ ಪತ್ನಿ ಹೆಸರಿದೆ. ಇದರ ಜೊತೆಗೆ ಸಿಎಂ ಆಪ್ತ ಹಿನಕಲ್ ಪಾಪಣ್ಣ ಸೇರಿ ಹಲವರ ಹೆಸರಿದೆ.
ಮುಡಾ 50:50 ಸೈಟ್ ಪಡೆದವರು (ವೈರಲ್ ಆದ ಪಟ್ಟಿಯಲ್ಲಿರುವ ಹೆಸರುಗಳು)
ಇಂದು ವೈರಲ್ ಆಗಿರುವ 2ನೇ ಪಟ್ಟಿಯಲ್ಲಿ ಪಾರ್ವತಿ ಸಿದ್ದರಾಮಯ್ಯಗೆ 14 ಸೈಟ್ ನೀಡಿರುವ ಮಾಹಿತಿ ಇದೆ. ಹಾಗೆಯೇ ಸಿಎಂ ಆಪ್ತ ಪಾಪಣ್ಣಗೆ 32 ಸೈಟ್ ನೀಡಿರುವ ಬಗ್ಗೆ ಉಲ್ಲೇಖವಿದೆ. ಹಾಗೆಯೇ ಮಹದೇವ್ ಎಂಬುವವರಿಗೆ 34, ದೀಪು ರಾಜೇಂದ್ರ ಎಂಬುವವರಿಗೆ 14, ಮಹೇಂದ್ರ ಎಂಬುವರಿಗೆ 19 ಸೈಟ್ ನೀಡಲಾಗಿದೆ. ಇನ್ನು ಅಬ್ದುಲ್ ವಾಹಿದ್ ಎಂಬುವರಿಗೆ 14, ಎಂ.ರವಿಕುಮಾರ್ ಎಂಬುವರಿಗೆ 23 ಸೈಟ್, ಸುನೀತಾ ಬಾಯಿ ಎಂಬುವರಿಗೆ 12 ನಿವೇಶನ ನೀಡಲಾಗಿದೆ. ಕ್ಯಾಥೆಡ್ರಲ್ ಪ್ಯಾರಿಸ್ ಸೊಸೈಟಿಗೆ ಬರೋಬ್ಬರಿ 48 ಸೈಟ್ ನೀಡಿರುವ ಬಗ್ಗೆಯೂ 2ನೇ ಪಟ್ಟಿಯಲ್ಲಿ ಉಲ್ಲೇಖವಾಗಿದೆ.
ಹೀಗೆ ಮುಡಾ ಅಕ್ರಮದಲ್ಲಿ ದಿನಕ್ಕೊಂದು ವಿಚಾರ ಬಯಲಾಗುತ್ತಿದ್ದು, ಬಿಜೆಪಿಗೆ ಅಸ್ತ್ರವಾಗಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಪರಿಷತ್ ವಿ.ಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಮುಡಾ ಸೈಟ್ ಹಗರಣದಲ್ಲಿ ಭಾಗಿಯಾದ ಸಿಎಂ ಸಿದ್ದರಾಮಯ್ಯ ಅವರ ರಾಜೀನಾಮೆಗೆ ಆಗ್ರಹಿಸಿದ್ದಾರೆ.
ಸ್ನೇಹಮಯಿ ಕೃಷ್ಣ ವಿರುದ್ಧ ಕಾಂಗ್ರೆಸ್ ದೂರು!
ಪ್ರಕರಣದಲ್ಲಿ ಸುಳ್ಳು ಸಾಕ್ಷ್ಯ ಸೃಷ್ಟಿಸುತ್ತಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ನಿಯೋಗ, ದೂರುದಾರ ಸ್ನೇಹಮಯಿ ಕೃಷ್ಣ ವಿರುದ್ಧವೇ ದೂರು ನೀಡಿದೆ. ಮೈಸೂರಿನ ದೇವರಾಜ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ. ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿಯವರ ನಿವೇಶನ ನೋಂದಣಿಗೆ ತಹಶೀಲ್ದಾರ್ ಅವರೇ ಮುದ್ರಾಂಕ ಶುಲ್ಕ ನೀಡಿದ್ದಾರೆಂದು ದೂರುದಾರ ಸ್ನೇಹಮಯಿ ಕೃಷ್ಣ ಆರೋಪಿಸಿದ್ದರು. ಇದು ಅಪಪ್ರಚಾರವಾಗಿದ್ದು, ಜನರನ್ನ ದಿಕ್ಕು ತಪ್ಪಿಸಲು, ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಖಳನಾಯಕರನ್ನಾಗಿ ಬಿಂಬಿಸುವ ದುರುದ್ದೇಶವಾಗಿದೆ ಎಂದು ಕಾಂಗ್ರೆಸ್ ದೂರಿನಲ್ಲಿ ಆರೋಪಿಸಿದೆ.
comments
Log in to write reviews