ರಾಷ್ಟ್ರಪತಿ ಅಂಗಳ ತಲುಪಿದ ಮುಡಾ ಕೇಸ್: ಮತ್ತೆ ಸಂಕಷ್ಟಕ್ಕೆ ಸಿಲುಕಿದ ಸಿಎಂ ಸಿದ್ದರಾಮಯ್ಯ!
2024-09-05 09:53:34
ದೆಹಲಿ/ಬೆಂಗಳೂರು, ಸೆ.5: ಸಿಎಂ ಸಿದ್ದರಾಮಯ್ಯ ಅವರ ಅಧಿಕಾರಕ್ಕೆ ಕಂಟಕವಾಗಿರುವ ಮೈಸೂರಿನ ಮುಡಾ ಸೈಟ್ ಹಗರಣ ರಾಜ್ಯ ರಾಜಕಾರಣದಲ್ಲಿ ಭಾರೀ ಸಂಚಲನ ಮೂಡಿಸಿದೆ. ಮುಡಾ ಹಗರಣ ಸಂಬಂಧಿಸಿದಂತೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ನೀಡಿರುವ ಪ್ರಾಸಿಕ್ಯೂಷನ್ ಕೇಸ್ ರಾಷ್ಟ್ರಪತಿ ಅಂಗಳ ತಲುಪಿದೆ.
ಮುಡಾ ಹಗರಣದ ವಿರುದ್ಧದ ಪ್ರತಿಭಟನೆಯಿಂದ ರಾಜ್ಯ ಸರ್ಕಾರ, ರಾಜಭವನದ ಮೇಲೆ ನಿರಂತರ ಒತ್ತಡ ಹಾಕಲಾಗುತ್ತಿದೆ ಎಂದು ರಾಜ್ಯಪಾಲ ಥಾವರ್ ಚೆಂದ ಗೆಹ್ಲೋಟ್ ಅವರು ರಾಜ್ಯ ವಿದ್ಯಮಾನಗಳ ಬಗ್ಗೆ ರಾಷ್ಟ್ರಪತಿಗೆ ಮಾಹಿತಿ ರವಾನಿಸಿದ್ದಾರೆ. ಅಲ್ಲದೆ, ಈ ಬಗ್ಗೆ ಕೇಂದ್ರ ಗೃಹ ಸಚಿವಾಲಯಕ್ಕೂ ರಾಜ್ಯಪಾಲರು ಮಾಹಿತಿ ನೀಡಿದ್ದಾರೆ.
ಮುಡಾ ಕೇಸ್ ಬಗ್ಗೆ ಸಿಎಂ ಸಿದ್ದರಾಮಯ್ಯ ಪ್ರಾಸಿಕ್ಯೂಶನ್ ಗೆ ಅನುಮತಿ ನೀಡಿದ ನಂತರ ನಡೆಯುತ್ತಿರುವ
ಪ್ರತಿಭಟನೆಯಿಂದಾಗಿ ನಾನು ಸಾರ್ವಜನಿಕ ಸಮಾರಂಭಗಳಿಗೆ ಹಾಜರಾಗದಂತಾಗಿ ದಿಗ್ಬಂಧನ ಸ್ಥಿತಿ ನಿರ್ಮಾಣವಾಗಿದೆ. ಗುಪ್ತಚರ ಇಲಾಖೆ ಸಲಹೆಯಂತೆ ಬುಲೆಟ್‌ಪ್ರೂಫ್ ಕಾರು ಬಳಕೆ ಮಾಡುತ್ತಿದ್ದೇನೆ. ಕೆಲ ಸಚಿವರು ಉದ್ದೇಶಪೂರ್ವಕವಾಗಿ ಕರ್ನಾಟಕ ವಿರೋಧಿ ರಾಜ್ಯಪಾಲರು, ಗೋಬ್ಯಾಕ್ ಗವರ್ನರ್ ಚಳವಳಿ ನಡೆಸಿದ್ದಾರೆ ಎಂಬ ಅಂಶಗಳನ್ನೊಳಗೊಂಡ ವರದಿಯನ್ನು ರಾಜ್ಯಪಾಲ ಥಾವರ್ ಚೆಂದ್ ಗೆಹ್ಲೋಟ್ ಅವರು ರಾಷ್ಟ್ರಪತಿ ಹಾಗೂ ಕೇಂದ್ರ ಗೃಹಸಚಿವಾಲಯಕ್ಕೆ ರವಾನಿಸಿದ್ದಾರೆ.
ಮುಡಾ ವಿಚಾರವಾಗಿ ರಾಜ್ಯದಲ್ಲಿ ಪ್ರತಿಭಟನೆ ಮೂಲಕ ರಾಜ್ಯಸರ್ಕಾರ, ರಾಜಭವನದ ಮೇಲೆ ನಿರಂತರ ಒತ್ತಡ ಹೇರುತ್ತಿದೆ. ರಾಜ್ಯಾದ್ಯಂತ ವ್ಯಾಪಕ ಪ್ರತಿಭಟನೆ, ಹಲವೆಡೆ ತಮ್ಮ ಪ್ರತಿಕೃತಿ ದಹನ ಮಾಡಲಾಗಿದೆ. ಸಾಲದಕ್ಕೆ ಕಾಂಗ್ರೆಸ್ ನಾಯಕರಿಂದ ರಾಜಭವನಕ್ಕೆ ನುಗ್ಗುವ ಬೆದರಿಕೆ ಇದೆ ಎಂದು ವರದಿಯಲ್ಲಿ ರಾಜ್ಯಪಾಲರು ಉಲ್ಲೇಖಿಸಿದ್ದಾರೆ.
ರಾಜ್ಯಾದ್ಯಂತ ಪ್ರತಿಭಟನೆಗೆ ಕರೆ ನೀಡಿದ್ದ ಕಾಂಗ್ರೆಸ್...
ಇನ್ನು ಮುಡಾ ಹಗರಣ ಸಂಬಂಧ ಪ್ರಾಸಿಕ್ಯೂಷನ್ಗೆ ಅನುಮತಿ ನೀಡಿರುವ ವಿರುದ್ಧವಾಗಿ ಪ್ರತಿಭಟನೆ ನಡೆಸುವಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಕರೆ ನೀಡಿದ್ದರು. ಅದರಂತೆ ಸಚಿವರು ಆದಿಯಾಗಿ ಶಾಸಕರು, ಮುಖಂಡರು, ಕಾರ್ಯಕರ್ತರು ಜಿಲ್ಲಾ ಕೇಂದ್ರದಲ್ಲಿ ಪ್ರತಿಭಟನೆ ಮಾಡಿದ್ದರು. ಅಲ್ಲದೆ ಸಿಎಂ ಸಿದ್ದರಾಮಯ್ಯನವರನ್ನು ಬೆಂಬಲಿಸಿ ಅಹಿಂದ ವರ್ಗ ಸಹ ರಾಜ್ಯಪಾಲರ ವಿರುದ್ಧ ಪ್ರತಿಭಟನೆ ನಡೆಸಿತ್ತು. ಪ್ರತಿಭಟನೆ ವೇಳೆ ಗೋಬ್ಯಾಕ್ ಗವರ್ನರ್ ಅಂತೆಲ್ಲಾ ಘೋಷಣೆಗಳನ್ನು ಕೂಗಿ ಥಾವರ್ ಚಂದ್ ಗೆಹ್ಲೋಟ್ ಅವರ ಭಾವಚಿತ್ರಕ್ಕೆ ಬೆಂಕಿ ಹಚ್ಚಿ ಪ್ರತಿಭಟನಾಕಾರರು ಆಕ್ರೋಶ ಹೊರಹಾಕಿದ್ದರು.
ಇದರ ಬೆನ್ನಲ್ಲೇ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ಗೆ ಬುಲೆಟ್ ಪ್ರೂಫ್ ಕಾರು ನೀಡಲಾಗಿತ್ತು. ಇದೀಗ ಈ ಎಲ್ಲಾ ಬೆಳವಣಿಗೆಗಳ ಬಗ್ಗೆ ರಾಜ್ಯಪಾಲರು, ಕೇಂದ್ರ ಗೃಹ ಸಚಿವಾಲಯ ಮತ್ತು ರಾಷ್ಟ್ರಪತಿಗೆ ವರದಿ ನೀಡಿದ್ದಾರೆ.
ಈ ವರದಿ ಬೆನ್ನಲ್ಲೇ ರಾಜ್ಯಸರ್ಕಾರ ಮತ್ತು ರಾಜ್ಯಪಾಲರ ನಡುವೆ ಸಂಘರ್ಷ ಮತ್ತೊಂದು ಹಂತಕ್ಕೆ ಹೋದಂತಿದೆ.
ಇನ್ನು ಈ ಸಂಬಂಧ ಸಿಎಂ ಸಿದ್ದರಾಮಯ್ಯಗೆ ಮತ್ತಷ್ಟು ಸಂಕಷ್ಟ ಎದುರಾಗುತ್ತಾ? ಇನ್ನು ರಾಜ್ಯಪಾಲರ ದೂರಿನ ವರದಿ ಬಗ್ಗೆ ರಾಷ್ಟ್ರಪತಿ ಮತ್ತು ಕೇಂದ್ರ ಗೃಹ ಸಚಿವಾಲಯ ಯಾವ ಕ್ರಮಕೈಗೊಳ್ಳುತ್ತೆ? ಎಂಬುದು ಕುತೂಹಲ ಕೆರಳಿಸಿದೆ.
comments
Log in to write reviews