ಮುಡಾ ಕೇಸ್: ಇಡಿ ತನಿಖೆಯಲ್ಲಿ ನಿರ್ಣಾಯಕ ಪಾತ್ರ ವಹಿಸಲಿರುವ 3 ಅಂಶಗಳು

ಮುಡಾ ಕೇಸ್: ಇಡಿ ತನಿಖೆಯಲ್ಲಿ ನಿರ್ಣಾಯಕ ಪಾತ್ರ ವಹಿಸಲಿರುವ 3 ಅಂಶಗಳು

2024-10-01 02:46:14

ಬೆಂಗಳೂರು, ಅಕ್ಟೋಬರ್ 1: ಮುಡಾ ಹಗರಣದಲ್ಲಿ ಮೈಸೂರು ಲೋಕಾಯಕ್ತ ಪೊಲೀಸರು ಸಿಎಂ ಸಿದ್ದರಾಮಯ್ಯ ವಿರುದ್ಧ ಎಫ್ಐಆರ್ ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಮತ್ತೊಂದೆಡೆ, ಜಾರಿ ನಿರ್ದೇಶನಾಲಯ ಕೂಡ ಪ್ರಕರಣ ದಾಖಲಿಸಿದೆ. ಈ ಎಲ್ಲ ಬೆಳವಣಿಗೆಗಳ ಬೆನ್ನಲ್ಲೇ ಮುಡಾ ನಿವೇಶನಗಳನ್ನು ವಾಪಸ್ ನೀಡುವುದಾಗಿ ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿ ಪತ್ರ ಬರೆದಿದ್ದಾರೆ. ಇದೀಗ ಇಡಿ ತನಿಖೆಯಲ್ಲಿ 3 ಅಂಶಗಳು ಮಹತ್ವದ ಪಾತ್ರ ವಹಿಸಲಿದೆ ಎನ್ನಲಾಗಿದೆ.

ಮೊದಲನೆಯ ಅಂಶವೆಂದರೆ, ಇಡಿ ತನಿಖೆ ಮಾಡಬೇಕಿದ್ದರೆ ಮೊದಲಿಗೆ ಯಾವುದಾದರೂ ಒಂದು ತನಿಖಾ ಸಂಸ್ಥೆಯಲ್ಲಿ ಪ್ರಕರಣ ದಾಖಲಾಗಿರಬೇಕು. ಈಗ ಮೈಸೂರಿನ ಲೋಕಾಯುಕ್ತ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದರ ಆಧಾರದಲ್ಲಿ ಇಡಿ ತನಿಖೆ ನಡೆಸಬಹುದಾಗಿದೆ. ಮೈಸೂರಿನಲ್ಲಿ ಬೇನಾಮಿ ಆಸ್ತಿ ಗಳಿಕೆ, ಭ್ರಷ್ಟಾಚಾರ ನಡೆದಿದೆ ಎಂಬ ಆರೋಪದ ಅಡಿಯಲ್ಲಿ ತನಿಖೆ ನಡೆಸುವ ಸಾಧ್ಯತೆ ಇದೆ.

ಹಣಕಾಸು ಅವ್ಯವಹಾರ ಆರೋಪ
2ನೇ ಅಂಶವೆಂದರೆ, ಮುಡಾದಲ್ಲಿದ್ದ 387 ಕೋಟಿ ರೂ. ಹಣ ಬೇರೆ ಕ್ಷೇತ್ರಗಳ ಅಭಿವೃದ್ಧಿಗೆ ಬಳಕೆ ಮಾಡಲಾಗಿದೆ ಎಂಬ ಆರೋಪವಿದೆ. ಈ ಸಂಬಂಧ ಸಿಎಂ ಸಿದ್ದರಾಮಯ್ಯ ವಿರುದ್ಧ ಕೇಸ್ ದಾಖಲಾಗಿದೆ. ಈಗಾಗಲೇ ಇಡಿ ಇಸಿಐಆರ್ ದಾಖಲಿಸಿದೆ. ವರುಣಾ, ಶ್ರೀರಂಗಪಟ್ಟಣ ಕ್ಷೇತ್ರದ ಅಭಿವೃದ್ಧಿಗೆ ಪ್ರಭಾವ ಬಳಸಿ ಬಳಕೆ ಮಾಡಿದ ಆರೋಪ ಇದೆ. ಕಾನೂನು ಬಾಹಿರವಾಗಿ ಮುಡಾ ಹಣ ಬಳಕೆ ಮಾಡಲಾಗಿದೆ ಎಂಬ ಆರೋಪ ಇದ್ದು, ಇದರ ಬಗ್ಗೆಯೂ ತನಿಖೆ ಮಾಡುವ ಸಾಧ್ಯತೆ ಇದೆ.

ಐಟಿ ದಾಳಿ ವೇಳೆ ಸಿಕ್ಕಿದ್ದು ಮುಡಾ ಹಣವೇ?
2023ರ ಅಕ್ಟೋಬರ್​​ನಲ್ಲಿ ಬೆಂಗಳೂರಿನಲ್ಲಿ ಐಟಿ ಅಧಿಕಾರಿಗಳು ದಾಳಿ ಮಾಡಿದ್ದರು. ಬೆಂಗಳೂರಿನ ಬಸವೇಶ್ವರ ನಗರದಲ್ಲಿ ಐಟಿ ದಾಳಿಯಾಗಿತ್ತು. ಆಗ ಉದ್ಯಮಿ ಹಾಗೂ ಗುತ್ತಿಗೆದಾರರ ಮನೆಗಳಲ್ಲಿ 40 ಕೋಟಿ ರೂ.ಗೂ ಅಧಿಕ ಹಣ ಸಿಕ್ಕಿತ್ತು. ಅದು ಸಚಿವರೊಬ್ಬರಿಗೆ ಸೇರಿದ್ದು ಎನ್ನಲಾಗಿತ್ತು. ಮುಡಾಗೆ ಸಂಬಂಧಿಸಿದ ಹಣ ಎಂಬ ಗುಮಾನಿಯೂ ಇತ್ತು. ಇದಕ್ಕೆ ಸಂಬಂಧಿಸಿದಂತೆ ಇಡಿ ಅಧಿಕಾರಿಗಳು ತನಿಖೆ ಮಾಡಬಹುದು ಎಂದು ನಿರೀಕ್ಷಿಸಲಾಗಿದೆ.

ಒಟ್ಟಿನಲ್ಲಿ ಈ ಎಲ್ಲ ಅಂಶಗಳು ಮುಡಾ ವಿಚಾರದಲ್ಲಿ ತನಿಖೆ ನಡೆಸಲಿರುವ ಇಡಿಗೆ ಮಹತ್ವದ್ದಾಗಲಿವೆ. ಸದ್ಯ ಲೋಕಾಯುಕ್ತ ತನಿಖೆ ಪ್ರಗತಿಯಲ್ಲಿದ್ದು, ಸದ್ಯದಲ್ಲೇ ಇಡಿ ಸಹ ತನಿಖೆ ಆರಂಭಿಸುವ ಸಾಧ್ಯತೆ ಇದೆ.
 

author single

L Ramprasad

Managing Director

comments

No Reviews