ಶಾಸಕ ಮುನಿರತ್ನ ಅರೆಸ್ಟ್!
2024-09-14 08:08:35
ಕೋಲಾರ, ಸೆ.14: ಬಿಬಿಎಂಪಿ ವಾರ್ಡಿನ ಕಸ ವಿಲೇವಾರಿ ಗುತ್ತಿಗೆ ನೀಡಲು ಲಂಚ ಕೇಳಿ, ಪ್ರಾಣ ಬೆದರಿಕೆ ಒಡ್ಡಿ, ಜಾತಿ ನಿಂದನೆ ಮಾಡಿದ ಆರೋಪದಡಿ ಬಿಜೆಪಿ ಶಾಸಕ ಮುನಿರತ್ನ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಕೋಲಾರದ ಜಿಲ್ಲೆಯ ಮುಳಬಾಗಿಲು ತಾಲೂಕಿನ ನಂಗಲಿ ಬಳಿ ಶನಿವಾರ ಸಂಜೆ ಶಾಸಕ, ಮಾಜಿ ಸಚಿವ ಎಂ.ಮುನಿರತ್ನಂ ನಾಯ್ಡು ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇಂದು ಶಾಸಕ ಮುನಿರತ್ನ ಅವರು ತಮಗೆ ಬಿಬಿಎಂಪಿ ವಾರ್ಡಿನ ಗಾರ್ಬೇಜ್ ಟೆಂಡರ್ ಕೊಡಿಸಲು 30 ಲಕ್ಷ ರೂಪಾಯಿ ಲಂಚ ಕೇಳಿದ್ದರು. ಇಷ್ಟು ಹಣ ಕೊಡದೆ ಹೋದರೆ ನಿನಗೆ ಟೆಂಡರ್ ಕೊಡಿಸಲ್ಲ, ಚಿತ್ರದುರ್ಗದ ರೇಣುಕಾಸ್ವಾಮಿಯನ್ನು ಶಾಸಕ ಮುನಿರತ್ನ ಅವರ ತಂಗಿ ಮಗ ಮರ್ಡರ್ ಮಾಡಿದ ರೀತಿ ನಿನ್ನ ಮರ್ಡರ್ ಮಾಡಿಸುತ್ತೇನೆ ಎಂದು ಮುನಿರತ್ನ ಅವರ ಆಪ್ತ ವಸಂತ್ ಕುಮಾರ್ ಎಂಬ ವ್ಯಕ್ತಿ ನನಗೆ ಜೀವ ಬೆದರಿಕೆ ಒಡ್ಡಿದ್ದಾರೆ ಎಂದು ಆರೋಪಿಸಿ ಗುತ್ತಿಗೆದಾರ ಚೆಲುವರಾಜ್ ಎಂಬುವರು ಬೆಂಗಳೂರಿನ ವೈಯಾಲಿಕಾವಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ನಂತರ ನಗರ ಪೊಲೀಸ್ ಆಯುಕ್ತರ ನಿರ್ದೇಶನದ ಮೇರೆಗೆ ವೈಯಾಲಿಕಾವಲ್ ಪೊಲೀಸ್ ಠಾಣೆಯಲ್ಲಿ ಶಾಸಕ ಮುನಿರತ್ನ ವಿರುದ್ಧ ಲಂಚ ಕೇಳಿ ಪ್ರಾಣ ಬೆದರಿಕೆ ಒಡ್ಡಿದ ಆರೋಪ ಮತ್ತು ಜಾತಿ ನಿಂದನೆ ಮಾಡಿದ ಆರೋಪದ ಎರಡು ಎಫ್ಐಆರ್ ದಾಖಲಿಸಿದ್ದರು. ಆದರೆ ತಮ್ಮ ವಿರುದ್ಧ 2 ಎಫ್ಐಆರ್ ದಾಖಲಿಸಿದ್ದಾರೆ ಎಂದು ತಿಳಿದ ಕೂಡಲೇ ಶಾಸಕ ಹಾಗೂ ಮಾಜಿ ಸಚಿವ ಮುನಿರತ್ನ ಅವರು ದಿಢೀರ್ ನಾಪತ್ತೆಯಾಗಿದ್ದರು. ಆದರೆ ಪೊಲೀಸರು ಶಾಸಕ ಮುನಿರತ್ನ ಅವರಿಗಾಗಿ ಹುಡುಕಾಟ ನಡೆಸಿದಾಗ ಕೊನೆಗೆ ಸಂಜೆ ಅವರು ಕೋಲಾರದಲ್ಲಿದ್ದಾರೆ ಎಂಬ ಮಾಹಿತಿ ಕಲೆ ಹಾಕಿದರು.
ಕೋಲಾರ ಮಾರ್ಗವಾಗಿ ಆಂಧ್ರಪ್ರದೇಶಕ್ಕೆ ಶಾಸಕ ಮುನಿರತ್ನ ಅವರು ತೆರಳುತ್ತಿದ್ದಾಗ ಬೆಂಗಳೂರು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಶಾಸಕರನ್ನು ವಶಕ್ಕೆ ಪಡೆದು ಪೊಲೀಸರು ಬೆಂಗಳೂರಿಗೆ ವಾಪಸ್ ಆಗುತ್ತಿದ್ದಾರೆ.
comments
Log in to write reviews