ಮೃತ ಪಿಎಸ್ಐ ಪರಶುರಾಮ್ ಮನೆಯಲ್ಲಿ ಶಾಸಕ ಚೆನ್ನಾರೆಡ್ಡಿ ಲೆಟರ್ ಹೆಡ್ ಪತ್ತೆ!

ಮೃತ ಪಿಎಸ್ಐ ಪರಶುರಾಮ್ ಮನೆಯಲ್ಲಿ ಶಾಸಕ ಚೆನ್ನಾರೆಡ್ಡಿ ಲೆಟರ್ ಹೆಡ್ ಪತ್ತೆ!

2024-08-09 09:34:26

ಯಾದಗಿರಿ, ಆ.9: ಪಿಎಸ್ಐ ಪರಶುರಾಮ ಅನುಮಾನಾಸ್ಪದ ಸಾವು ಪ್ರಕರಣದ ತನಿಖೆಯನ್ನು ಸಿಐಡಿ ಅಧಿಕಾರಿಗಳು ಚುರುಕುಗೊಳಿಸಿದ್ದಾರೆ. 
ಸಿಐಡಿ ಅಧಿಕಾರಿಗಳು ನಿನ್ನೆ ಗುರುವಾರ (ಆಗಸ್ಟ್​ 8) ರಂದು ಪೊಲೀಸ್​ ವಸತಿ ಗೃಹದ ಪರಶುರಾಮ ಮನೆಗೆ ತೆರಳಿ ಸ್ಥಳ ಮಹಜರು ನಡೆಸಿದ್ದಾರೆ. ಮನೆಯಲ್ಲಿ ಕಾಂಗ್ರೆಸ್​ ಶಾಸಕ ಚೆನ್ನಾರೆಡ್ಡಿ ಪಾಟೀಲ್ ಹೆಸರಿನ ಲೆಟರ್​ ಹೆಡ್​ ಪತ್ತೆಯಾಗಿದೆ. ಕಾನೂನು ಸುವ್ಯವಸ್ಥೆ ಪೋಸ್ಟಿಂಗ್ ಬೇರೆಯವರಿಗೆ ಕೊಟ್ಟ ಹಿನ್ನೆಲೆಯಲ್ಲಿ ಅಪರಾಧ ವಿಭಾಗದ ಪೋಸ್ಟಿಂಗ್ ಕೊಡಿ ಎಂದು ಪರಶುರಾಮ ಕೇಳಿದ್ದರು. ಇದೇ ಕಾರಣಕ್ಕೆ ಕಾಂಗ್ರೆಸ್​ ಶಾಸಕ ಚೆನ್ನಾರೆಡ್ಡಿ ಪಾಟೀಲ್ ಯಾದಗಿರಿ ನಗರ ಠಾಣೆಯ ಅಪರಾಧ ವಿಭಾಗದ ಪಿಎಸ್​ಐ ಪೋಸ್ಟಿಂಗ್​ಗಾಗಿ ಲೆಟರ್ ಹೆಡ್ ನೀಡಿದ್ದರು. ಈ ಲೆಟರ್​ ಹೆಡ್​​ ಸಿಐಡಿ ಅಧಿಕಾರಿಗಳು ಮಹಜರು ವೇಳೆ ಪತ್ತೆಯಾಗಿದ್ದು, ಲೆಟರ್ ಹೆಡ್ ಅನ್ನು ಸಿಐಡಿ ಅಧಿಕಾರಿಗಳು ‌ ವಶಕ್ಕೆ ಪಡೆದಿದ್ದಾರೆ.

ಯಾದಗಿರಿ ನಗರ ಠಾಣೆಯ ಅಪರಾಧ ವಿಭಾಗದ ಪಿಎಸ್​ಐ ಪೋಸ್ಟಿಂಗ್​ಗಾಗಿ ಶಾಸಕ ಚೆನ್ನಾರೆಡ್ಡಿ 15 ಲಕ್ಷ ರೂ. ಕೇಳಿದ್ದರು ಎನ್ನಲಾಗಿದೆ. ಹೀಗಾಗಿ ಪಿಎಸ್​ಐ ಪರಶುರಾಮ ಹಣ ಹೊಂದಿಸುತ್ತಿದ್ದರು. ವಸತಿ ಗೃಹದಲ್ಲಿ ಪೋಸ್ಟಿಂಗ್​ಗಾಗಿ ಕೂಡಿಟ್ಟ 7.33 ಲಕ್ಷ ನಗದು ಸಿಕ್ಕಿದ್ದು, ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಪರಶುರಾಮ ಅವರಿಗೆ ಸೇರಿದ 4 ಬ್ಯಾಂಕ್ ಖಾತೆಗಳಲ್ಲಿನ ಹಣದ ಮಾಹಿತಿಯನ್ನೂ ಸಹ ಸಿಐಡಿ ಅಧಿಕಾರಿಗಳು ಪಡೆದುಕೊಂಡಿದ್ದಾರೆ. ಜೊತೆಗೆ ಇಲಾಖಾ ರಿವಾಲ್ವರ್​ (ಬಂದೂಕು), ಸಿಮ್​ಕಾರ್ಡ್​​, ಮೊಬೈಲ್ ಮತ್ತು ವಾಕಿಟಾಕಿ ಜಪ್ತಿ ಮಾಡಿದ್ದಾರೆ. ಪರಶುರಾಮ ಮೃತಪಟ್ಟ ಜಾಗದಲ್ಲಿ ಮೂಗಿನಿಂದ ಬಾಯಿಂದ ಬಂದ ರಕ್ತದ ಮಾದರಿ ಸಹ ಸಂಗ್ರಹಿಸಲಾಗಿದೆ.

ಮೊಬೈಲ್​ನಲ್ಲಿವೆ ಮಹತ್ವದ ಆಡಿಯೋಗಳು!
ಮೃತ ಪಿಎಸ್​ಐ ಪರಶುರಾಮ ಪ್ರತಿಯೊಂದು ಕರೆಗಳನ್ನು ರೆಕಾರ್ಡ್ ಮಾಡಿಕೊಳ್ಳುತ್ತಿದ್ದರು. ಪೋಸ್ಟಿಂಗ್ ಆಗದೆ ಇರುವ ಬಗ್ಗೆ, ಸ್ನೇಹಿತರು ಮತ್ತು ಕುಟುಂಬಸ್ಥರ ಮುಂದೆ ಪೋಸ್ಟಿಂಗ್ ಹಣ ಕೇಳಿರುವ ದೂರವಾಣಿ ಮೂಲಕ ಸಂಭಾಷಣೆ ಮಾಡಿದ್ದಾರೆ. ಈ ಎಲ್ಲಾ ಸಂಭಾಷಣೆಗಳ ಆಡಿಯೋ ಮೃತ ಪಿಎಸ್ಐ ಪರಶುರಾಮ ಅವರ ಆಂಡ್ರಾಯ್ಡ್ ಮೊಬೈಲ್​​ನಲ್ಲಿವೆ.

ಯಾದಗಿರಿ ಸೈಬರ್ ಕ್ರೈಂ ಠಾಣೆಯ ಪಿಎಸ್​​ಐ ಆಗಿದ್ದ ಪರಶುರಾಮ ಮನೆಯಲ್ಲಿ ಅನುಮಾನಾಸ್ಪದವಾಗಿ ಮೃತಪಟ್ಟಿದ್ದರು. ಪಿಎಸ್​ಐ ಪರಶುರಾಮ ಸಾವಿಗೆ ಕಾಂಗ್ರೆಸ್​ ಶಾಸಕ ಚೆನ್ನಾರೆಡ್ಡಿ ಮತ್ತು ಅವರ ಪುತ್ರ ಪಂಪಾಗೌಡ ಕಾರಣವೆಂದು ಕುಟುಂಬಸ್ಥರು ಆರೋಪ ಮಾಡಿದ್ದಾರೆ. ಈಗಾಗಲೇ ಕಾಂಗ್ರೆಸ್ ಶಾಸಕ ಚೆನ್ನಾರೆಡ್ಡಿ ವಿರುದ್ಧ ಜಾತಿ ನಿಂದನೆ ಆರೋಪದಡಿ ದೂರು ದಾಖಲಾಗಿದೆ. ಪಿಎಸ್​ಐ ಪರಶುರಾಮ ಶಂಕಾಸ್ಪದ ಸಾವು ರಾಜ್ಯದ ಕಾಂಗ್ರೆಸ್ ಸರ್ಕಾರಕ್ಕೆ ತಲೆನೋವಾಗಿದೆ. ಕಾಕತಾಳೀಯ ಎಂಬಂತೆ ಪಿಎಸ್ಐ ಪರಶುರಾಮ ಸಾವಿನ ಬಳಿಕ ಶಾಸಕ ಚೆನ್ನಾರೆಡ್ಡಿ ನಾಪತ್ತೆಯಾಗಿದ್ದಾರೆ.
 

author single

L Ramprasad

Managing Director

comments

No Reviews