ಹೊಳಲ್ಕೆರೆ: ಗ್ರಾಮಸ್ಥರು, ಜಾನುವಾರುಗಳಿಗೆ ಪ್ರಾಣ ಭೀತಿ ಸೃಷ್ಟಿಸಿರೊ ಚಿರತೆಗಳು!
2024-09-11 09:15:36
ಹೊಳಲ್ಕೆರೆ ತಾಲ್ಲೂಕಿನ ಮಲ್ಲಸಿಂಗನಹಳ್ಳಿಯಲ್ಲಿ ಚಿರತೆ ಪ್ರತ್ಯಕ್ಷವಾಗಿದ್ದು, ಗ್ರಾಮಸ್ಥರು ಭಯಪೀಡಿತರಾಗಿದ್ದಾರೆ.
ಚಿರತೆ ಬಂದು ಹೋಗುವ ದೃಶ್ಯ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಕಳೆದ 15 ದಿನಗಳಿಂದ ಚಿರತೆ ಈ ಗ್ರಾಮದ ಸುತ್ತ ಕಂಡುಬರುತ್ತಿದೆ. ಅಷ್ಟೇ ಅಲ್ಲ, ಹಲವಾರು ಬಾರಿ ಜಾನುವಾರುಗಳ ಮೇಲೆ ಈ ಚಿರತೆ ದಾಳಿ ನಡೆಸುತ್ತಿದೆ. ಇಂದೂ ಕೂಡಾ ದನಗಾಹಿ ಕೋಟೆಪ್ಪ ಎಂಬುವರ ಮೇಲೆ ಚಿರತೆ ದಾಳಿ ನಡೆಸಿದ್ದು, ಅವರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಹೀಗಾಗಿ ಗ್ರಾಮಸ್ಥರಿಗೆ ಬೆಚ್ಚಿಬೀಳಿಸಿ, ಜಾನುವಾರುಗಳ ಮೇಲೆ ಪದೇ ಪದೇ ದಾಳಿ ಮಾಡಿ, ದನಗಾಹಿಗಳನ್ನು ಮತ್ತು ರೈತರನ್ನು ಬೆಚ್ಚಿಬೀಳಿಸಿರುವ ಚಿರತೆಯನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆಗೆ ಮಲ್ಲಸಿಂಗನಹಳ್ಳಿ ಮತ್ತು ಸುತ್ತಮುತ್ತಲಿನ ಗ್ರಾಮಸ್ಥರು ಮನವಿ ಮಾಡಿಕೊಂಡಿದ್ದಾರೆ.
ಮತ್ತೊಂದೆಡೆ ಹೊಳಲ್ಕೆರೆ ತಾಲ್ಲೂಕಿನ ವಿಜಾಪುರ ಗೊಲ್ಲರಹಟ್ಟಿ ಗ್ರಾಮದಲ್ಲಿ ಕುರಿಗಳ ಮೇಲೆ ದಾಳಿ ನಡೆಸಿದ ಚಿರತೆಯೊಂದು ಒಂದು ಕುರಿಯನ್ನು ಗಾಯಗೊಳಿಸಿದೆ. ಆದರೆ ಸಣ್ಣ ಪುಟ್ಟ ಗಾಯಗಳಿಂದ ದಾಳಿಗೊಳಗಾದ ಕುರಿಯನ್ನು ರಕ್ಷಿಸಿ ಚಿಕಿತ್ಸೆ ನೀಡಲಾಗಿದೆ. ಆದರೆ ಪದೇ ಪದೇ ಕುರಿಗಳ ಹಿಂಡಿನ ಮೇಲೆ ದಾಳಿ ನಡೆಸುತ್ತಿರುವ ಚಿರತೆ ಕಂಡು ಗ್ರಾಮಸ್ಥರು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭಾರಿ ಆತಂಕ ಸೃಷ್ಟಿಯಾಗಿದೆ. ಕೆಲವು ದಿನಗಳ ಹಿಂದೆ ಜಮೀನಿನಿಂದ ವಾಪಸ್ಸಾಗುತ್ತಿದ್ದ ರೈತರಿಗೆ ಕಂಡಿದ್ದ ಚಿರತೆ ಆತಂಕ ಸೃಷ್ಟಿಸಿತ್ತು.
ಇತ್ತೀಚಿಗೆ ಹೊಳಲ್ಕೆರೆ ಪಟ್ಟಣದ ದೊಡ್ಡ ಕೆರೆ ಸಮೀಪದ ಚೀರನಹಳ್ಳಿಯ ಹಿಂದೂ ಮತ್ತು ವೀರಶೈವ ರುದ್ರಭೂಮಿ ಪ್ರದೇಶದಲ್ಲಿ ಮೇಕೆ ಮೇಲೆ ಚಿರತೆಗಳು ದಾಳಿ ಮಾಡಿ ಕೊಂದು ಅದರ ರಕ್ತ ಹೀರಿದ್ದವು.
ಇದೇ ಪ್ರದೇಶದಲ್ಲಿ ಮೇಯುತ್ತಿದ್ದ ಕುರಿಗಳ ಮೇಲೆ ದಾಳಿ ಮಾಡಿ ಚಿರತೆಯೊಂದು ರಕ್ತ ಹೀರಿತ್ತು.
ಒಟ್ಟಾರೆ ಹೊಳಲ್ಕೆರೆ ತಾಲ್ಲೂಕಿನ ಹಲವಾರು ಗ್ರಾಮಗಳಲ್ಲಿ ಮಳೆಗಾಲದಲ್ಲೇ ರೈತರು, ಜಾನುವಾರುಗಳು ಮತ್ತು ಕುರಿ, ಮೇಕೆಗಳ ಹಿಂಡಿನ ಮೇಲೆ ಹುಡುಕಿ ಹುಡುಕಿ ದಾಳಿ ನಡೆಸಿ ಭಾರಿ ಆತಂಕ ಸೃಷ್ಟಿಸಿರೊ ಚಿರತೆಗಳನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆ ಪ್ರಯತ್ನಿಸದೆ ಕಣ್ಮುಚ್ಚಿ ಕುಳಿತಿದೆ. ಇದು ಹೊಳಲ್ಕೆರೆ ತಾಲ್ಲೂಕಿನಲ್ಲಿ ರೈತರು, ದನಗಾಹಿಗಳು, ಕುರಿಗಾಯಿಗಳನ್ನು ಪ್ರಾಣ ಭೀತಿಗೆ ತಳ್ಳಿದೆ. ಇನ್ನೊಂದೆಡೆ ಬೆಳೆ ಕಟಾವು ಮಾಡುವ ಈ ವೇಳೆ ಚಿರತೆಗಳು ಹೊಳಲ್ಕೆರೆ ತಾಲ್ಲೂಕಿನ ರೈತರಿಗೆ ಆತಂಕ ತಂದಿವೆ. ಇನ್ನಾದರೂ ಚಿರತೆಗಳನ್ನು ಸೆರೆ ಹಿಡಿದು ತಾಲೂಕಿನ ಗ್ರಾಮಸ್ಥರು, ರೈತರನ್ನು ಹಾಗೂ ದನಗಾಯಿ, ಕುರಿಗಾಯಿ ಅವರನ್ನು ರಕ್ಷಿಸಬೇಕೆಂದು ಹೊಳಲ್ಕೆರೆ ಶಾಸಕ ಎಂ.ಚಂದ್ರಪ್ಪ ಮತ್ತು ತಾಲ್ಲೂಕಿನ ಎಲ್ಲಾ ಜನಪ್ರತಿನಿಧಿಗಳಿಗೆ ತಾಲೂಕಿನ ಎಲ್ಲೆಡೆ ಒತ್ತಾಯ ಕೇಳಿಬಂದಿದೆ
comments
Log in to write reviews