ನಾಳೆ ಮುಡಾ ಪ್ರಾಸಿಕ್ಯೂಶನ್ ವಿರುದ್ಧದ ಅರ್ಜಿಯ ತೀರ್ಪು ಸಂಭವ?!
2024-09-11 11:46:33
ಬೆಂಗಳೂರು, ಸೆ.11: ಮುಡಾ ಹಗರಣ ಸಂಬಂಧ ಸಿಎಂ ಸಿದ್ದರಾಮಯ್ಯ ವಿರುದ್ಧದ ಪ್ರಾಸಿಕ್ಯೂಷನ್ ಭವಿಷ್ಯ ಕರ್ನಾಟಕ ಹೈಕೋರ್ಟ್‌ನಲ್ಲಿದೆ.
ನಾಳೆ ಗುರುವಾರ ವಿಚಾರಣೆ ಮುಂದುವರಿಯಲಿದ್ದು, ಹೈಕೋರ್ಟಿನ ಏಕಸದಸ್ಯ ಪೀಠದಿಂದ ಆದೇಶ ಹೊರಬೀಳುವ ಸಾಧ್ಯತೆಯಿದೆ. ರಾಜ್ಯಪಾಲರ ನಿರ್ಧಾರವನ್ನು ಹೈಕೋರ್ಟ್ ಎತ್ತಿಹಿಡಿಯುತ್ತದೆಯಾ? ಅಥವಾ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ನೀಡಿರುವ ಅನುಮತಿ ರದ್ದುಮಾಡುತ್ತದೆಯಾ? ಎಂಬುದು ತೀವ್ರ ಕುತೂಹಲ ಕೆರಳಿಸಿದೆ. ಸೆಪ್ಟೆಂಬರ್ 12ರಂದೇ ವಿಚಾರಣೆಯನ್ನು ಮುಗಿಸೋಣ ಎಂದು ಈಗಾಗಲೇ ನ್ಯಾಯಮೂರ್ತಿಗಳು ಹೇಳಿದ್ದಾರೆ.
ಗುರುವಾರ ಸಿಎಂ ಪರವಾಗಿ ಸುಪ್ರೀಂಕೋರ್ಟ್ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ವಾದ ಮಂಡಿಸಲಿದ್ದು, ರಾಜ್ಯಪಾಲರ ಪರ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ವಾದ ಮಂಡಿಸಲಿದ್ದಾರೆ. ಹೀಗಾಗಿ ನಾಳೆ ಹೈಕೋರ್ಟ್‌ನಲ್ಲಿ ಹೈವೋಲ್ಟೇಜ್ ವಾದ-ಪ್ರತಿವಾದ ನಡೆಯುವ ಸಾಧ್ಯತೆಯಿದೆ.
ಕಾಂಗ್ರೆಸ್‌ನಲ್ಲಿ ಸಿಎಂ ಕುರ್ಚಿ ರೇಸ್; ಬಿಜೆಪಿ ಲೇವಡಿ...
ಮತ್ತೊಂದೆಡೆ, ಕಾಂಗ್ರೆಸ್‌ನಲ್ಲಿನ ಸಿಎಂ ಕುರ್ಚಿ ರೇಸ್ ಬಗ್ಗೆ ಬಿಜೆಪಿ ನಾಯಕರು ಲೇವಡಿ ಮಾಡಿದ್ದಾರೆ. ಸಿದ್ದರಾಮ್ಯಯರ ಸಿಎಂ ಕುರ್ಚಿ ಉಳಿಯಲ್ಲ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಹೇಳಿದರೆ, ಯಾವುದೇ ಕ್ಷಣದಲ್ಲಿ ಸಿಎಂ ರಾಜೀನಾಮೆ ನಿಶ್ಚಿತ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಹೇಳಿದ್ದಾರೆ. ಇನ್ನು ಮಾಜಿ ಸಚಿವ ಹಾಲಿ ಚಿಕ್ಕಬಳ್ಳಾಪುರ ಬಿಜೆಪಿ ಸಂಸದ ಡಾ. ಕೆ.ಸುಧಾಕರ್, ಸಿಎಂ ಸಿದ್ದರಾಮಯ್ಯಗೆ ಕಾಂಗ್ರೆಸ್‌ನವರೇ ಖೆಡ್ಡಾ ತೋಡಿದ್ದಾರೆ ಎಂದು ಕುಟುಕಿದ್ದಾರೆ.
ಈ ಮಧ್ಯೆ, ರಾಜ್ಯ ಕಾಂಗ್ರೆಸ್‌ನಲ್ಲಿ ಸಿಎಂ ರೇಸ್ ಬಗ್ಗೆ ಹೇಳಿಕೆ ನೀಡದಂತೆ ಹಿರಿಯ ಸಚಿವರಿಗೆ ಕಡಿವಾಣ ಹಾಕಬೇಕು ಎಂದು ರಾಹುಲ್ ಗಾಂಧಿಗೆ 15ಕ್ಕೂ ಹೆಚ್ಚು ಕಾಂಗ್ರೆಸ್ ನಾಯಕರು ಪತ್ರ ಬರೆದಿದ್ದಾರೆ. ನಾವು ಹೋರಾಡಬೇಕಾಗಿರುವುದು ಬಿಜೆಪಿ-ಜೆಡಿಎಸ್ ವಿರುದ್ಧ. ಅದರ ಬದಲು ಸಿಎಂ ಸ್ಥಾನದ ಕುರಿತು ಹೇಳಿಕೆ ನೀಡುತ್ತಿರುವುದಕ್ಕೆ, ಸಚಿವರ ಗೊಂದಲಕಾರಿ ಹೇಳಿಕೆಗೆ ಕಡಿವಾಣ ಹಾಕಿ ಎಂದು ಬಿ.ಎಲ್.ಶಂಕರ್, ವಿ.ಎಸ್.ಉಗ್ರಪ್ಪ, ಬಿ.ಎನ್.ಚಂದ್ರಪ್ಪ, ಎಲ್.ಹನುಮಂತಯ್ಯ, ರಾಣಿ ಸತೀಶ್, ವಿ.ಆರ್.ಸುದರ್ಶನ್, ಎಚ್.ಎಂ ರೇವಣ್ಣ, ಹೆಚ್.ಡಿ ಅಮರನಾಥ್, ಸಿ.ಎಸ್.ದ್ವಾರಕನಾಥ್, ಪಿ.ಆರ್.ರಮೇಶ್ ಸೇರಿ 15ಕ್ಕೂ ಹೆಚ್ಚು ನಾಯಕರು ರಾಹುಲ್ ಗಾಂಧಿಗೆ ಪತ್ರ ಬರೆದಿದ್ದಾರೆ.
ಅಮೆರಿಕದಲ್ಲಿ ರಾಹುಲ್ ಗಾಂಧಿ-ಡಿಕೆಶಿ ಚರ್ಚೆ!
ಒಂದೆಡೆ ಸಿಎಂ ಸಿದ್ದರಾಮಯ್ಯಗೆ ಪ್ರಾಸಿಕ್ಯೂಷನ್ ಟೆನ್ಷನ್, ಮತ್ತೊಂದೆಡೆ ಹಲವು ಸಚಿವರು ಸಿಎಂ ಕುರ್ಚಿಗೆ ಟವೆಲ್ ಹಾಕುತ್ತಿದ್ದಾರೆ. ಈ ನಡುವೆ ಅಮೆರಿಕ ಪ್ರವಾಸದಲ್ಲಿರುವ ಡಿಸಿಎಂ ಡಿ.ಕೆ ಶಿವಕುಮಾರ್ ಮಂಗಳವಾರ ಅಮೆರಿಕಾದ ವಾಷಿಂಗ್ಟನ್‌ನಲ್ಲಿ ರಾಹುಲ್ ಗಾಂಧಿ ಅವರನ್ನು ಅನೌಪಚಾರಿಕವಾಗಿ ಭೇಟಿ ಮಾಡಿದ್ದು ಕುತೂಹಲಕ್ಕೆ ಕಾರಣವಾಗಿದೆ.
ಅಮೆರಿಕಾ ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿಯಾಗಿರುವ ಕಮಲಾ ಹ್ಯಾರಿಸ್ ಅವರೇ ಡಿಸಿಎಂ ಡಿ.ಕೆ ಶಿವಕುಮಾರ್ ಅವರನ್ನು ಅಮೆರಿಕಾಕ್ಕೆ ತಮ್ಮ ಪರ ಪ್ರಚಾರ ನಡೆಸಲು ಆಹ್ವಾನ ನೀಡಿದ್ದರು. ಈ ಅಮೆರಿಕಾ ಪ್ರವಾಸದ ಪರಿಣಾಮ ಡಿಸಿಎಂ ಡಿ.ಕೆ ಶಿವಕುಮಾರ್ ಅವರೂ ಕೂಡ ಸಿಎಂ ರೇಸ್ ನಲ್ಲಿ ಇದ್ದಾರೆ.
comments
Log in to write reviews