ಸಿಎಂ ಸಿದ್ದರಾಮಯ್ಯ ರಾಜೀನಾಮೆ ನಾನು ಕೇಳಲ್ಲ, ಕಾನೂನು ನಿರ್ಧರಿಸುತ್ತೆ-ಎಚ್.ಡಿ.ಕೆ

ಸಿಎಂ ಸಿದ್ದರಾಮಯ್ಯ ರಾಜೀನಾಮೆ ನಾನು ಕೇಳಲ್ಲ, ಕಾನೂನು ನಿರ್ಧರಿಸುತ್ತೆ-ಎಚ್.ಡಿ.ಕೆ

2024-08-18 10:18:43

ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ರಾಜೀನಾಮೆ ಕೊಡಲಿ ಎಂದು ನಾನು ಕೇಳಲ್ಲ. ಅವರು ರಾಜೀನಾಮೆ ಕೊಡುವುದೂ ಇಲ್ಲ. ಅದು ನನಗೆ ಗೊತ್ತಿದೆ. ಆದರೂ ಕಾನೂನು ಅಂತ ಒಂದಿದೆ. ಯಾವ ಹಂತದಲ್ಲಿ ಯಾವ ತೀರ್ಮಾನವಾಗಬೇಕೋ ಅದು ಆಗುತ್ತೆ ಎಂದು ಮಾಜಿ ಸಿಎಂ, ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಮಾರ್ಮಿಕವಾಗಿ ಹೇಳಿದ್ದಾರೆ.

ಬೆಂಗಳೂರಿನ ಜೆಡಿಎಸ್ ಕಚೇರಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿನ್ನೆಯಿಂದ ಸಿದ್ದರಾಮಯ್ಯ ಸೇರಿದಂತೆ ಎಲ್ಲರೂ ಕುಮಾರಸ್ವಾಮಿ ಮೇಲೆ ಯಾಕೆ ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಟ್ಟಿಲ್ಲ ಎಂದು ನನ್ನನ್ನು ಎದುರಿಸುವ ಪ್ರಯತ್ನ ಮಾಡುತ್ತಿದ್ದಾರೆ. ಇದಕ್ಕೆಲ್ಲ ನಾನು ಹೆದರಲ್ಲ. ನಾನು ಈ ಹಿಂದೆಯೇ ಏಕಾಂಗಿಯಾಗಿ ಹೋರಾಟ ಮಾಡುತ್ತೇನೆ ಎಂದಿದ್ದೆ ಎಂದರು.

ರಾಜ್ಯಪಾಲರ ತೀರ್ಮಾನದ ವಿರುದ್ಧ ಸಿದ್ದರಾಮಯ್ಯರವರು ಸುಪ್ರೀಂಕೋರ್ಟ್‌ಗೆ ಹೋಗಬಹುದು ಬೇಡ ಎಂದು ಹೇಳಿರುವವರು ಯಾರು? ನನ್ನನ್ನು ಹೆದರಿಸುವ ಡ್ರಾಮಾಗಳು ಏಕೆ ರಾಜ್ಯಪಾಲರ ವಿರುದ್ಧ ರಾಷ್ಟ್ರದಲ್ಲಿ ಇದೇ ಮೊದಲ ಬಾರಿಗೆ ಈ ರೀತಿಯ ಪ್ರತಿಭಟನೆಗಳು ಆಗುತ್ತಿವೆ? ಎಂದು ಪ್ರಶ್ನಿಸಿದರು.

ರಾಜ್ಯಪಾಲರ ತೀರ್ಮಾನಕ್ಕೂ ಬಿಜೆಪಿ-ಜೆಡಿಎಸ್ ಪಾದಯಾತ್ರೆಗೂ ಸಂಬಂಧವಿಲ್ಲ. ಪಾದಯಾತ್ರೆಯಿಂದಲೇ ಇದೆಲ್ಲ ಆಗಿದೆ ಎಂದು ನಾನು ಹೇಳಲ್ಲ. ಜನತೆಗೆ ರಾಜಕೀಯ ಸಂದೇಶ ನೀಡಬೇಕು ಅದನ್ನು ಕೊಟ್ಟಿದ್ದೇವೆ ಎಂದರು.

ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರು ಕಾಡುಗೊಲ್ಲರ ಬಗ್ಗೆ ಚರ್ಚೆ ನಡೆಸಲು ಅಮಿತ್ ಶಾ ಬಳಿ ಹೋಗಿದ್ದಕ್ಕೆ ಕಾಂಗ್ರೆಸ್ ನಾಯಕರು ನನ್ನ ಮೇಲೆ ಕೆಂಡ ಕಾರುತ್ತಿದ್ದಾರೆ. ನನ್ನನ್ನು ಜೈಲಿಗೆ ಕಳುಹಿಸಬೇಕು ಎಂದು ಪ್ರಯತ್ನ ನಡೆಸಿದ್ದಾರೆ ಎಂದು ದೂರಿದರು.

ಈ ಹಿಂದೆ ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತ ತನಿಖೆ ಎಂದು ಬಂದಾಗ ಲೋಕಾಯುಕ್ತವನ್ನು ಮುಚ್ಚಿ ಎಸಿಬಿ ಮಾಡಿ ಅದರಿಂದ ರಕ್ಷಣೆ ಪಡೆದುಕೊಂಡಿರಿ. ಹೀಗೆ ನಿಮ್ಮ ಬಗ್ಗೆ ಹೇಳಲು ಹಲವು ವಿಚಾರವಿದೆ ಎಂದು ಸಿಎಂ ಸಿದ್ದರಾಮಯ್ಯ ವಿರುದ್ಧ ಎಚ್.ಡಿ.ಕೆ ವಾಗ್ದಾಳಿ ನಡೆಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬಂಡೆಯಿಂದಲೇ ಅಪಾಯವಿದೆ ಎಂದು ಪರೋಕ್ಷವಾಗಿ ಡಿಸಿಎಂ ಡಿ.ಕೆ ಶಿವಕುಮಾರ್ ಹೆಸರು ಉಲ್ಲೇಖಿಸದೆ ಟೀಕಿಸಿದ ಅವರು, ಮೊನ್ನೆ ಭೂಕುಸಿತ ಆಯಿತಲ್ಲ ಅದು ಬಂಡೆಗಳಿಂದಲೇ ಡೇಂಜರ್ ಆಗಿದ್ದು ಎಂದು ಎಚ್.ಡಿ.ಕೆ ಹೇಳಿದರು.

author single

L Ramprasad

Managing Director

comments

No Reviews