ಹಿರಿಯೂರು: ಕಾಟಪ್ಪನಹಟ್ಟಿ ಗ್ರಾಮಕ್ಕೆ ಸೌಲಭ್ಯ ಕಲ್ಪಿಸಿ

ಹಿರಿಯೂರು: ಕಾಟಪ್ಪನಹಟ್ಟಿ ಗ್ರಾಮಕ್ಕೆ ಸೌಲಭ್ಯ ಕಲ್ಪಿಸಿ

2024-10-23 10:15:16

ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ ಯರಬಳ್ಳಿ ಗ್ರಾ.ಪಂ ವ್ಯಾಪ್ತಿಯ ಕಾಟಪ್ಪನಹಟ್ಟಿ ಸೌಲಭ್ಯ ಕಲ್ಪಿಸಿಕೊಡುವಂತೆ ಒತ್ತಾಯಿಸಿ ಗ್ರಾಮಸ್ಥರು ಸೋಮವಾರ ತಾಲೂಕು ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು.
 
ಈ ಬಗ್ಗೆ ಇಲ್ಲಿದೆ ಒಂದು ವರದಿ:
ಹಿರಿಯೂರು ತಾಲ್ಲೂಕಿನ ಕಾಟಪ್ಪನಹಟ್ಟಿ ಗ್ರಾಮ ಅತ್ಯಂತ ಹಿಂದುಳಿದ ಕುಗ್ರಾಮ. ಇಲ್ಲಿ ಬಹುತೇಕ ಕಾಡುಗೊಲ್ಲ ಸಮುದಾಯವೇ ವಾಸಿಸುತ್ತಿದ್ದಾರೆ. ಆದರೆ ಈ ಗ್ರಾಮಕ್ಕೆ ಯಾವುದೇ ರಸ್ತೆ, ಚರಂಡಿ, ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ ಸಮರ್ಪಕವಾಗಿಲ್ಲ. ಗ್ರಾ.ಪಂ, ತಾ.ಪಂ, ಜಿ.ಪಂ ಅನುದಾನ ಹಾಗೂ ಸರಕಾರದ ಯಾವುದೇ ಸೌಲಭ್ಯಗಳನ್ನು ಈ ಗ್ರಾಮದ ಅಭಿವೃದ್ಧಿಗೆ ನೀಡುತ್ತಿಲ್ಲ. ಈ ಬಗ್ಗೆ ಪಿಡಿಒ, ತಾ.ಪಂ ಇಓಗೆ ಆನೇಕ ಬಾರಿ ಮನವಿ ನೀಡಿದರೂ ಯಾವುದೇ
ಪ್ರಯೋಜನವಾಗಿಲ್ಲ. ಈ ಬಗ್ಗೆ ಯಾವ ಅಧಿಕಾರಿಯೂ ಗ್ರಾಮಕ್ಕೆ ಭೇಟಿ ನೀಡಿಲ್ಲ. ಇದರಿಂದ ಈ ಗ್ರಾಮದ ನಾಗರೀಕರು ನಿತ್ಯವೂ ಸಾಕಷ್ಟು ತೊಂದರೆ ಅನುಭವಿಸುವಂತಾಗಿದೆ.

ಈ ಗ್ರಾಮಕ್ಕೆ ಮೂಲಭೂತ ಸೌಕರ್ಯಗಳಾದ ರಸ್ತೆ, ಚರಂಡಿ, ಶೌಚಾಲಯ ಹಾಗೂ ಮನೆ-ಮನೆಗೆ ಕುಡಿಯುವ ನೀರಿನ ಗಂಗಾ ಯೋಜನೆ ಸೌಲಭ್ಯ ಕಲ್ಪಿಸುವ ಮೂಲಕ ಕಾಡುಗೊಲ್ಲರ ಹಟ್ಟಿಗಳ ಅಭಿವೃದ್ಧಿಗೆ ಸಹಕರಿಸಬೇಕು. ಇಲ್ಲವಾದಲ್ಲಿ ಹೋರಾಟ ನಡೆಸುವುದಾಗಿ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.

ಈ ಸಂದರ್ಭದಲ್ಲಿ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಹಾಗೂ ಕಾಡುಗೊಲ್ಲ ಸಮುದಾಯದ ಮುಖಂಡ ಎ.ಚಿತ್ತಪ್ಪ ಯಾದವ್, ರಾಘವೇಂದ್ರ, ಮಹಾಲಕ್ಷ್ಮಿ, ನಾಗವೇಣಿ, ನಾಗಲಕ್ಷ್ಮಿ, ಕುಸುಮ, ಸರೋಜಮ್ಮ, ಕವಿತಾ, ಶಶಿಕಲಾ, ಹಾಲೇಶ್ ಯಾದವ್, ಸಿದ್ದರಾಜ್, ಗಂಗಾಧರ್, ರಮೇಶ್, ತಮ್ಮಣ್ಣ, ಪುನೀತ್ ಯಾದವ್‌ ಹಾಜರಿದ್ದರು.

author single

L Ramprasad

Managing Director

comments

No Reviews