ಮಾಜಿ ಮುಖ್ಯಮಂತ್ರಿ ನಿಜಲಿಂಗಪ್ಪ ಅವರ ಮನೆ ಮಾರಾಟಕ್ಕೆ: ಖರೀದಿಸಲು ರಾಜ್ಯಸರ್ಕಾರ ಹಿಂದೇಟು!
2024-11-09 06:05:50
ಚಿತ್ರದುರ್ಗ, ನ.9: ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಸ್ ನಿಜಲಿಂಗಪ್ಪ ಮನೆ ಮಾರಾಟಕ್ಕಿದೆ!! ಇಂತಹ ಒಂದು ಜಾಹಿರಾತು ಎಸ್ ನಿಜಲಿಂಗಪ್ಪ ಅವರ ಪುತ್ರ ಎಸ್ಎನ್ ಕಿರಣಶಂಕರ್ ನೀಡಿದ್ದಾರೆ. ಸ್ಮಾರಕವಾಗಬೇಕಿದ್ದ ಎಸ್ ನಿಜಲಿಂಗಪ್ಪ ಅವರ ಮನೆ ಖಾಸಗಿ ವ್ಯಕ್ತಿಗಳ ಪಾಲಾಗುವ ಆತಂಕ ಎದುರಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವಿದ್ದರೂ ತಮ್ಮ ಪಕ್ಷದ ಹಿರಿಯ ನಾಯಕ, ಮಾಜಿ ಮುಖ್ಯಮಂತ್ರಿ ಎಸ್ ನಿಜಲಿಂಗಪ್ಪ ಅವರನ್ನು ಕಡೆಗಣಿಸಿದ್ದು ಮಾತ್ರ ಶೋಚನೀಯವಾಗಿದೆ.
ಚಿತ್ರದುರ್ಗ ನಗರದ ವಾರ್ಡ್ ನಂ 32 ವಿಪಿ ಬಡಾವಣೆಯ ಡಿಸಿ ಬಂಗಲೆಯ ಹತ್ತಿರ ಇರುವ 117 X 130 ಅಡಿ ವಿಸ್ತೀರ್ಣದ ಶ್ವೇತ ಭವನದಲ್ಲಿ ಮಾಜಿ ಮುಖ್ಯಮಂತ್ರಿಗಳು ವಾಸವಾಗಿದ್ದರು. ಈ ಮನೆಯನ್ನು ಹತ್ತು ಕೋಟಿ ರೂ.ಗೆ ಮಾರಾಟ ಮಾಡಲು ನಿಜಲಿಂಗಪ್ಪ ಅವರ ಪುತ್ರ ಎಸ್ಎನ್ ಕಿರಣಶಂಕರ್ ಮುಂದಾಗಿದ್ದಾರೆ.
“ಚಿತ್ರದುರ್ಗ ನಗರದ ವಾರ್ಡ್ ನಂ. 32 ವಿ.ಪಿ ಬಡಾವಣೆಯ ಡಿ.ಸಿ ಬಂಗಲೆಯ ಹತ್ತಿರ ಇರುವ 117 X 130 ಅಡಿ ಅಳತೆಯ 10 ಕೋಟಿ ರೂ.ಗೂ ಹೆಚ್ಚು ಬೆಲೆಬಾಳುವ ನಿವೇಶನ ಎಸ್. ನಿಜಲಿಂಗಪ್ಪನವರ ನಿವಾಸ ‘ವಿನಯ’ ಮನೆ ಮಾರಾಟಕ್ಕಿದೆ, ಆಸಕ್ತಿಯುಳ್ಳವರು, ಮಧ್ಯವರ್ತಿಗಳ ಹಸ್ತಕ್ಷೇಪವಿಲ್ಲದೆ ನೇರವಾಗಿ ಬೆಳಗ್ಗೆ 10.30 ರಿಂದ 11.30 ರ ಒಳಗೆ ಸಂಪರ್ಕಿಸಬಹುದು” ಎಂದು ಕಿರಣಶಂಕರ್ ಜಾಹೀರಾತು ನೀಡಿದ್ದಾರೆ. ಅದರೆ ರಾಜ್ಯಸರ್ಕಾರದ ನಿರ್ಲಕ್ಷದಿಂದ ನಿಜಲಿಂಗಪ್ಪನವರ ಮನೆ ಖಾಸಗಿ ವ್ಯಕ್ತಿಗಳ ಪಾಲಾಗುತ್ತಿದ್ದು ಮಾತ್ರ ಆತಂಕದ ವಿಷಯವಾಗಿದೆ.
ಈ ವಿಚಾರವಾಗಿ ಮಾತನಾಡಿದ ಮಾಜಿ ಸಿಎಂ ಎಸ್. ನಿಜಲಿಂಗಪ್ಪ ಅವರ ಪುತ್ರ ಕಿರಣಶಂಕರ್ ಮಾತನಾಡಿ, “ರಾಜ್ಯಸರ್ಕಾರ ತಮ್ಮನ್ನು ಕಡೆಗಣಿಸಿದೆ. ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯಕ್ಕೆ ನಾವು ಹೈರಾಣಾಗಿದ್ದೇವೆ” ಎಂದು ಆರೋಪ ಮಾಡಿದ್ದಾರೆ.
ಅಷ್ಟಕ್ಕೂ ಆಗಿದ್ದೇನು?
ಎಸ್.ನಿಜಲಿಂಗಪ್ಪ ಅವರು ವಾಸವಾಗಿದ್ದ “ವಿನಯ” ಮನೆಯನ್ನು ರಾಜ್ಯಸರ್ಕಾರವೇ ಕೊಂಡುಕೊಳ್ಳಲು ಮುಂದಾಗಿತ್ತು. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳೊಂದಿಗೆ 4 ಸಭೆಗಳನ್ನು ಮಾಡಲಾಗಿತ್ತು. ಈ ಸಭೆಗಳಲ್ಲಿ ನಿಜಲಿಂಗಪ್ಪ ಅವರ ಮನೆ ಖರೀದಿಸಲು ನಿರ್ಧರಿಸಲಾಗಿದ್ದು, ಸ್ಮಾರಕ ಮಾಡಲು ತೀರ್ಮಾನಿಸಲಾಗಿತ್ತು.
ಮನೆ ಕೊಂಡುಕೊಳ್ಳಲು ಸಭೆಗಳಲ್ಲಿ ಸಮ್ಮತಿ ಸೂಚಿಸಿದ್ದ ರಾಜ್ಯಸರ್ಕಾರ ಮುಂದಿನ ದಿನಗಳಲ್ಲಿ ಈ ಬಗ್ಗೆ ಹೆಚ್ಚು ಆಸಕ್ತಿ ತೋರಲಿಲ್ಲ. ಕಿರಣಶಂಕರ್ ಅವರು ರಾಜ್ಯಸರ್ಕಾರಕ್ಕೆ ಮನೆ ಮಾರಾಟ ಮಾಡಲು ಮುಂದಾಗಿದ್ದರು. ಆದರೆ ರಾಜ್ಯಸರ್ಕಾರ ಮಾತ್ರ ತಾಂತ್ರಿಕ ಕಾರಣ, ಕಾನೂನು ತೊಡಕು ನೆಪ ಹೇಳಿ ನಿಜಲಿಂಗಪ್ಪನವರ ಮನೆ ಕೊಂಡುಕೊಳ್ಳಲು ಹಿಂದೇಟು ಹಾಕಿದೆ.
ಈ ಮನೆಯನ್ನು ನಿಜಲಿಂಗಪ್ಪ ಅವರು ತಮ್ಮ ಮೊಮ್ಮಗ ವಿನಯ್ ಅವರ ಹೆಸರಿಗೆ ವಿಲ್ ಬರೆದಿದ್ದಾರೆ. ಹೀಗಾಗಿ, ಈ ಮನೆಯನ್ನು ಸಬ್ರಿಜಿಸ್ಟಾರ್ ಮೂಲಕ ನೋಂದಣಿ ಮಾಡಲು ಸಾಧ್ಯವಾಗುತ್ತಿಲ್ಲ. ಕಾರಣ ನಿಜಲಿಂಗಪ್ಪ ಪುತ್ರ ಈ ಮನೆ ಅನುಭವಿಸಿದ ಬಳಿಕ ವಿನಯ್ಗೆ ಮನೆ ಸೇರಬೇಕು ಎಂದು ವಿಲ್ನಲ್ಲಿದೆ. ವಿನಯ್ ಅವರ ಹೆಸರಿಗೆ ರಿಜಿಸ್ಟ್ರೇಶನ್ ಆಗದೇ ಸರ್ಕಾರಕ್ಕೆ ಮನೆ ಖರೀದಿಸಲು ಸಾಧ್ಯವಿಲ್ಲ. ಆದರೆ, ರಾಜ್ಯಸರ್ಕಾರ ವಿನಯ್ ಅವರ ಹೆಸರಿಗೆ ರಿಜಿಸ್ಟ್ರೇಶನ್ ಮಾಡಲು ಮುಂದಾಗುತ್ತಿಲ್ಲ. ಇನ್ನು, ವಿನಯ್ ವಿದೇಶದಲ್ಲಿದ್ದಾರೆ. ಆದರೆ, ರಾಜ್ಯಸರ್ಕಾರ ಮನಸ್ಸು ಮಾಡಿ ಕಾನೂನು ತೊಡಕು ಸರಿಸಿ ಮನೆ ಖರೀದಿಸಿ, ಸ್ಮಾರಕ ಮಾಡಬೇಕು ಎಂದು ಜನರ ಆಗ್ರಹವಾಗಿದೆ.
ರಾಜ್ಯಸರ್ಕಾರದ ಈ ಎಲ್ಲ ನಡೆಯಿಂದ ಬೇಸರಗೊಂಡಿರುವ ಎಸ್.
ಎನ್ ಕಿರಣ್ಶಂಕರ್, “ಈ ವಿಚಾರದಲ್ಲಿ ರಾಜ್ಯಸರ್ಕಾರ ನಮ್ಮನ್ನು ನಡೆಸಿಕೊಂಡ ರೀತಿ ನಮಗೆ ಅಸಮಾಧಾನ ತಂದಿದೆ” ಎಂದು ಹೇಳಿದ್ದಾರೆ.
comments
Log in to write reviews