ಮುಡಾ ಕಚೇರಿ ಮೇಲೆ ಇಡಿ ದಾಳಿ!
2024-10-18 04:13:20
ಮೈಸೂರು, ಅಕ್ಟೋಬರ್ 18: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಕಚೇರಿ ಮೇಲೆ ಜಾರಿ ನಿರ್ದೇಶನಾಲಯ ಅಧಿಕಾರಿಗಳು ದಾಳಿ ಮಾಡಿದ್ದಾರೆ. ನಿವೇಶನ ಹಂಚಿಕೆ ವಿಚಾರವಾಗಿ ಮುಡಾದಲ್ಲಿ ಹಗರಣ ನಡೆದಿದೆ ಎಂಬ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಈ ದಾಳಿ ನಡೆದಿದೆ. ಆರ್ಐಟಿಐ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ನೀಡಿದ ದೂರಿನ ಆಧಾರದ ಮೇಲೆ ಇಡಿ ಅಧಿಕಾರಿಗಳು ಮುಡಾ ಕಚೇರಿ ಮೇಲೆ ದಾಳಿ ಮಾಡಿದ್ದಾರೆ. ಇಡಿಯ 20ಕ್ಕೂ ಹೆಚ್ಚು ಅಧಿಕಾರಿಗಳು ದಾಖಲೆ ಪರಿಶೀಲಿಸುತ್ತಿದ್ದಾರೆ.
ಮುಡಾ ಹಗರಣ ಸಂಬಂಧ ಇಡಿ ಸ್ನೇಹಮಯಿ ಕೃಷ್ಣ ಅವರಿಗೆ ಸಮ್ಸನ್ ನೀಡಿ, ವಿಚಾರಣೆಗೆ ಹಾಜರಾಗುವಂತೆ ಹೇಳಿತ್ತು. ಅದರಂತೆ ಸ್ನೇಹಮಯಿ ಕೃಷ್ಣ ಶಾಂತಿನಗರದ ಇಡಿ ಕಚೇರಿಯಲ್ಲಿ ವಿಚಾರಣೆಗೆ ಹಾಜರಾಗಿದ್ದರು. ಅಲ್ಲದೇ ಹಗರಣ ಸಂಬಂಧ 500 ಪುಟಗಳ ದಾಖೆಯನ್ನು ಇಡಿಗೆ ನೀಡಿದ್ದರು.
ದಾಖಲೆಗಳ ಆಧಾರದ ಮೇಲೆ ಇಡಿ ಇಸಿಐಆರ್ ದಾಖಲಿಸಿ ತನಿಖೆ ನಡೆಸುತ್ತಿದೆ. ಇದೀಗ ಇಡಿ, ಮುಡಾ ಕಚೇರಿ ಮತ್ತು ಭೂ ಮಾಲೀಕ ದೇವರಾಜು ಮನೆ ಮೇಲೆ ದಾಳಿ ಮಾಡಿದೆ. ಹಗರಣದಲ್ಲಿ ದೇವರಾಜು ಎ4 ಆಗಿದ್ದಾರೆ. ಬೆಂಗಳೂರಿನ ಕೆಂಗೇರಿಯಲ್ಲಿರುವ ದೇವರಾಜು ನಿವಾಸದಲ್ಲಿ ಇಡಿ ಅಧಿಕಾರಿಗಳು ದಾಖಲೆ ಪರಿಶೀಲನೆ ನಡೆಸುತ್ತಿದ್ದಾರೆ.
ಸಿದ್ದರಾಮಯ್ಯಗೆ ಹೆಚ್ಚಿದ ಸಂಕಷ್ಟ
ಮುಡಾ ಕಚೇರಿ ಮೇಲೆ ದಾಳಿ ಮಾಡಿರುವ ಇಡಿ ಯಾವುದೇ ಸಮಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮನೆ ಮತ್ತು ಕಚೇರಿ ಮೇಲೆ ದಾಳಿ ಮಾಡುವ ಸಾಧ್ಯತೆ ಇದೆ. ಅಲ್ಲದೇ ಸಿಎಂ ಸಿದ್ದರಾಮಯ್ಯ ಅವರಿಗೆ ಸಮನ್ಸ್ ನೀಡಿ ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡುವ ಸಾಧ್ಯತೆಯೂ ಇದೆ. ಈ ಮೂಲಕ ಸಿಎಂ ಸಿದ್ದರಾಮಯ್ಯ ಅವರಿಗೆ ಸಂಕಷ್ಟ ಎದುರಾಗಿದೆ.
comments
Log in to write reviews