ದೆಹಲಿಯಲ್ಲಿ ಪರ್ಯಾಯ ಸಿಎಂ ಆಯ್ಕೆ ಬಗ್ಗೆ ಗಹನ ಚರ್ಚೆ!
2024-09-03 08:50:04
ದೆಹಲಿಯಲ್ಲಿ ನಿನ್ನೆ ಮಧ್ಯಾಹ್ನ ರಾಜ್ಯದ ಸಚಿವ ಸತೀಶ್ ಜಾರಕಿಹೊಳಿ ಅವರು ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಮತ್ತು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರನ್ನು ಭೇಟಿಯಾಗಿ ಸುದೀರ್ಘ ಚರ್ಚೆ ನಡೆಸಿದರು.
ಕರ್ನಾಟಕದಲ್ಲಿ ಸಿಎಂ ಸಿದ್ದರಾಮಯ್ಯ ಅವರ ಕುರ್ಚಿಯನ್ನೇ ಅಲುಗಾಡಿಸುತ್ತಿರುವ ಮುಡಾ ಸೈಟ್ ಹಗರಣದಲ್ಲಿ ರಾಜ್ಯಪಾಲರ ಪ್ರಾಸಿಕ್ಯೂಶನ್ ವಿರುದ್ಧವಾಗಿ ಹೈಕೋರ್ಟ್ ನಲ್ಲಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ಸೋಮವಾರ ಮುಂದುವರೆಯಲಿದೆ. ಅದಕ್ಕೂ ಮುನ್ನವೇ ಕಾಂಗ್ರೆಸ್ ಹೈಕಮಾಂಡ್ ಸಿಎಂ ಸಿದ್ದರಾಮಯ್ಯ ಅವರ ಬದಲಿಗೆ ಪರ್ಯಾಯ ನಾಯಕರೊಬ್ಬರಿಗೆ ಸಿಎಂ ಪಟ್ಟ ಕಟ್ಟಲು ರಹಸ್ಯವಾಗಿ ಸತತ ಸಮಾಲೋಚನೆಯಲ್ಲಿ ನಿರತವಾಗಿದೆ.
ಈಗಾಗಲೇ ಕೆಪಿಸಿಸಿ ಅಧ್ಯಕ್ಷ ಮತ್ತು ರಾಜ್ಯದ ಡಿಸಿಎಂ ಡಿ.ಕೆ.ಶಿವಕುಮಾರ್ ಮತ್ತು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರನ್ನು ದೆಹಲಿಗೆ ಕರೆಸಿಕೊಂಡು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಸುಮಾರು 3 ಗಂಟೆಗಳ ಕಾಲ ಚರ್ಚೆ ನಡೆಸಿದ್ದಾರೆ. ಅಂದರೆ ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ನೀಡಿದರೆ ಆಗ ಪರ್ಯಾಯ ಸಿಎಂ ಆಗಲು ರೆಡಿಯಾಗಿರಿ ಎಂದು ಪರೋಕ್ಷವಾಗಿ ಖರ್ಗೆ ಅವರೇ ರಾಜ್ಯದ ದಲಿತ ನಾಯಕ ಪರಮೇಶ್ವರ್ ಅವರಿಗೆ ಸೂಚಿಸಿದ್ದರು. ಆಗ ಡಿ.ಕೆ.ಶಿವಕುಮಾರ್ ಅವರ ಅಭಿಪ್ರಾಯವನ್ನು ಮೊದಲು ಕೈ ಹೈಕಮಾಂಡ್ ಮೊದಲು ಕೇಳಿದೆ. ಇಷ್ಟಾದರೂ ಡಿ.ಕೆ.ಶಿವಕುಮಾರ್ ಅವರಿಗೆ ಸಿಎಂ ಆಗಲು ಸಾಧ್ಯವಿಲ್ಲ ಎಂದು ಕೈ ಹೈಕಮಾಂಡ್ ಹೇಳದೆ ಪರಿಶೀಲನೆ ಮಾಡುತ್ತೇವೆ ಎಂದು ಸಿಎಂ ಸ್ಥಾನ ಕೇಳಿದ ಕೆಪಿಸಿಸಿ ಅಧ್ಯಕ್ಷರಿಗೆ ಹೇಳಿದೆ.
ಈ ಮಧ್ಯೆ ನಾನು ಸಿಎಂ ಸಿದ್ದರಾಮಯ್ಯ ಅವರಿಗಿಂತ 2 ವರ್ಷ ಹೆಚ್ಚಿನ ವಯಸ್ಸಿನವನು. ಕಾಂಗ್ರೆಸ್ ನಲ್ಲಿ ಬಹಳ ವರ್ಷ ಇದ್ದೇನೆ. ನನಗೆ ಸಿಎಂ ಸ್ಥಾನದ ಆಕಾಂಕ್ಷೆ ಇದೆ ಎಂದು ನೇರವಾಗಿ ಶಾಸಕ ಹಾಗೂ ಹಿಂದೆ ಕೆಪಿಸಿಸಿ ಅಧ್ಯಕ್ಷ-ಸಚಿವರಾಗಿದ್ದ ಆರ್.ವಿ.ದೇಶಪಾಂಡೆ ಅವರು ಹೇಳಿದ್ದಾರೆ.
ಈ ನಡುವೆ ಸಿಎಂ ಸ್ಥಾನಕ್ಕೆ ಸಚಿವ ಸತೀಶ್ ಜಾರಕಿಹೊಳಿ ಅವರ ಹೆಸರು ಬಲವಾಗಿ ಕೇಳಿಬಂದಿದೆ.
ನಿನ್ನೆ ಸೋಮವಾರ ಮಧ್ಯಾಹ್ನ ದೆಹಲಿಗೆ ತೆರಳಿ ಅಲ್ಲಿ ರಾಹುಲ್ ಗಾಂಧಿ ಮತ್ತು ಕೆ.ಸಿ.ವೇಣುಗೋಪಾಲ್ ಅವರನ್ನು ಭೇಟಿಯಾಗಿ ಮಹತ್ವದ ಚರ್ಚೆ ನಡೆಸಿದ ಸಚಿವ ಸತೀಶ್ ಜಾರಕಿಹೊಳಿ ಅವರು ಸಿದ್ದರಾಮಯ್ಯ ಬೆಂಬಲದಿಂದ ಸಿಎಂ ಆಗಲು ತಯಾರಿ ನಡೆಸಿದ್ದಾರೆ.
ಮತ್ತೊಂದೆಡೆ ಸಚಿವ ಕೆ.ಎನ್.ರಾಜಣ್ಣ ಅವರು ಬಹಿರಂಗವಾಗಿ ಹೇಳಿಕೆ ನೀಡಿ ಸಿಎಂ ಸ್ಥಾನಕ್ಕೆ ಸತೀಶ್ ಜಾರಕಿಹೊಳಿ ಅವರನ್ನು ನೇಮಿಸಲು ತಮ್ಮ ಸಂಪೂರ್ಣ ಬೆಂಬಲ ಇದೆ ಎಂದು ಘೋಷಿಸಿದ್ದಾರೆ.
ಈ ನಡುವೆ ಸಚಿವ ಜಮೀರ್ ಅಹ್ಮದ್ ಖಾನ್ ಅವರು ಹೇಳಿಕೆ ನೀಡಿ 'ನಾವು ಸಿಎಂ ಸಿದ್ದರಾಮಯ್ಯ ಅವರು ಮಾಜಿಯಾದರೂ ಅವರೇ ನಮ್ಮ ನಿಜವಾದ ನಾಯಕರು' ಎಂದು ಪರೋಕ್ಷವಾಗಿ ಸಿಎಂ ಸಿದ್ದರಾಮಯ್ಯ ಅವರ ಕುರ್ಚಿ ಅಭದ್ರ ಎಂಬ ಭಾವನೆ ತಂದಿದ್ದಾರೆ.
ಒಟ್ಟಾರೆ ಕಾಂಗ್ರೆಸ್ ಹೈಕಮಾಂಡ್ ಇದೀಗ ದೆಹಲಿಯಲ್ಲಿ ಪರ್ಯಾಯ ಸಿಎಂ ಸ್ಥಾನವನ್ನು ದಲಿತರ ಪರವಾಗಿ ಪರಮೇಶ್ವರ್ ಅವರಿಗೆ ನೀಡಿ ಕೆಪಿಸಿಸಿ ಅಧ್ಯಕ್ಷ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ಅವರನ್ನು ಮುಂದುವರೆಸುವ ಬಗ್ಗೆ ಆಲೋಚನೆ ನಡೆಸುತ್ತಿದೆ.
ಮತ್ತೊಂದು ಆಯ್ಕೆಯ ಪ್ರಕಾರ ಸಿಎಂ ಸ್ಥಾನವನ್ನು ಡಿ.ಕೆ.ಶಿವಕುಮಾರ್ ಅವರಿಗೆ ನೀಡಿ, ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನು ದಲಿತ ಸಮುದಾಯಕ್ಕೆ ನೀಡಲು ಸಮಾಲೋಚನೆ ನಡೆಸಿದೆ.
ಆದರೆ ನಿನ್ನೆ ಮುಡಾ ಕೇಸ್ ಪ್ರಾಸಿಕ್ಯೂಶನ್ ಬಗ್ಗೆ ಹೈಕೋರ್ಟ್ ನಲ್ಲಿ ವಿಚಾರಣೆ ನಡೆಯುವ ಮುನ್ನವೇ ಸಚಿವ ಸತೀಶ್ ಜಾರಕಿಹೊಳಿ ಅವರು ಸಿಎಂ ಸಿದ್ದರಾಮಯ್ಯ ಅವರ ಸೂಚನೆ ಮೇರೆಗೆ ದೆಹಲಿಗೆ ತೆರಳಿ ಹೈಕಮಾಂಡ್ ಜೊತೆಗೆ ಚರ್ಚೆ ನಡೆಸಿದ್ದಾರಾ? ಅಥವಾ ತಾವೇ ಸಿಎಂ ಆಗಲು ದೆಹಲಿಯಲ್ಲಿ ಲಾಬಿ ನಡೆಸಿದ್ದಾರಾ? ಅಥವಾ ಕೈ ಹೈಕಮಾಂಡ್ ಖುದ್ದು ಸತೀಶ್ ಜಾರಕಿಹೊಳಿ ಅವರನ್ನು ದೆಹಲಿಗೆ ಕರೆಸಿಕೊಂಡು ಪರ್ಯಾಯ ಸಿಎಂ ಆಗಲು ಸಿದ್ಧವಾಗಿರಿ ಎಂದು ಹೇಳಿತೇ? ಎಂಬ ಬಗ್ಗೆ ಗೊಂದಲ ಮುಂದಿರುವರೆದಿದೆ.
ಈ ನಡುವೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಕರ್ನಾಟಕದ ಮುಂದಿನ ಸಿಎಂ ಆಗಲು ಸೋನಿಯಾ ಗಾಂಧಿ ಅವರು ರಾಹುಲ್ ಗಾಂಧಿ ಅವರ ಮೂಲಕ ಸಂದೇಶ ರವಾನಿಸಿದ್ದಾರೆ. ಆದರೆ ಈ ಆಫರ್ ಅನ್ನು ಖರ್ಗೆ ಅವರು ಇನ್ನೂ ಒಪ್ಪಿಕೊಂಡಿಲ್ಲ.
ಒಟ್ಟಿನಲ್ಲಿ ಮುಂದಿನ ಸೋಮವಾರ ಸೆಪ್ಟೆಂಬರ್ 9 ರಂದು ಮುಡಾ ಕೇಸ್ ಸಿಎಂ ಪ್ರಾಸಿಕ್ಯೂಶನ್ ವಿಚಾರಣೆ ಇನ್ನೂ ಹೈಕೋರ್ಟ್ ನಲ್ಲಿ ಆರಂಭವಾಗುವ ಮೊದಲೇ ಸದ್ದಿಲ್ಲದೆ ಅನೇಕ ಕಾಂಗ್ರೆಸ್ ಹಿರಿಯ ನಾಯಕರು ಇದೀಗ ಸಿಎಂ ಸ್ಥಾನಕ್ಕೆ ಟವಲ್ ಹಾಕಿ ದೆಹಲಿಯಲ್ಲಿ ಇದಕ್ಕಾಗಿ ಲಾಬಿ ನಡೆಸಿರುವುದು ಬಟಾ ಬಯಲಾಗಿದೆ.
comments
Log in to write reviews