ದರ್ಶನ್ ಮನೆ ಊಟದ ಅರ್ಜಿ:  ಹೈಕೋರ್ಟ್ ನಲ್ಲಿ ಇಂದು ವಿಚಾರಣೆ

ದರ್ಶನ್ ಮನೆ ಊಟದ ಅರ್ಜಿ: ಹೈಕೋರ್ಟ್ ನಲ್ಲಿ ಇಂದು ವಿಚಾರಣೆ

2024-08-20 11:12:56

ಬೆಂಗಳೂರು: ಚಿತ್ರದುರ್ಗದ 
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್​ಗೆ ಮನೆ ಊಟ ಬೇಕೆಂದು ಸಲ್ಲಿಸಿದ್ದ ರಿಟ್ ಅರ್ಜಿಯ ವಿಚಾರಣೆ ಇಂದು (ಆಗಸ್ಟ್ 20) ನಡೆಯಲಿದೆ.

ಮನೆ ಊಟ, ಮಲಗಲು ಹಾಸಿಗೆ ಹಾಗೂ ಕೆಲವು ಪುಸ್ತಕಗಳು ಬೇಕೆಂದು ನಟ ದರ್ಶನ್ ಹೈಕೋರ್ಟ್​ಗೆ ರಿಟ್ ಅರ್ಜಿ ಸಲ್ಲಿಸಿದ್ದರು. ರಿಟ್ ಅರ್ಜಿಯಲ್ಲಿ ಆರೋಗ್ಯದ ಕಾರಣ ನೀಡಿದ್ದರು. ರಿಟ್ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್​ನ ಏಕಸದಸ್ಯ ಪೀಠ ನಡೆಸಲಿದೆ.

ಕಳೆದ ಬಾರಿ ರಿಟ್ ಅರ್ಜಿಯ ವಿಚಾರಣೆ ನಡೆಸಿದ್ದ ನ್ಯಾಯಾಲಯವು ಪರಪ್ಪನ ಅಗ್ರಹಾರ ಜೈಲು ಅಧಿಕಾರಿಗಳು ಈ ಬಗ್ಗೆ ನಿರ್ಣಯ ಕೈಗೊಂಡು ವರದಿ ಸಲ್ಲಿಸುವಂತೆ ಸೂಚಿಸಿದ್ದರು. ಈಗಾಗಲೇ ವರದಿ ಸಲ್ಲಿಕೆ ಆಗಲಿದ್ದು, ಇಂದು ಹೈಕೋರ್ಟ್ ಏಕ ಸದಸ್ಯ ಪೀಠ ತನ್ನ ನಿರ್ಣಯ ಪ್ರಕಟಿಸುವ ಸಾಧ್ಯತೆ ಇದೆ. ಜೈಲು ಅಧಿಕಾರಿಗಳು, ಮನೆ ಊಟದ ಅವಶ್ಯಕತೆ ಇಲ್ಲವೆಂದೇ ವರದಿ ನೀಡಿದ್ದಾರೆ ಎನ್ನಲಾಗಿದೆ. ಜೈಲಿನ ವೈದ್ಯಾಧಿಕಾರಿಗಳು ಸಹ ದರ್ಶನ್​ಗೆ ಮನೆ ಊಟದ ಅವಶ್ಯಕತೆ ಇಲ್ಲವೆಂದೇ ವರದಿ ನೀಡಿದ್ದಾರೆ ಎನ್ನಲಾಗುತ್ತಿದೆ.

ಎಫ್​ಎಸ್​ಎಲ್ ವರದಿ
ರೇಣುಕಾ ಸ್ವಾಮಿ ಕೊಲೆ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು ಈಗಾಗಲೇ ಸುಮಾರು 200 ಕ್ಕೂ ಹೆಚ್ಚು ಸಾಕ್ಷಿಗಳನ್ನು ಕಲೆ ಹಾಕಿದ್ದು ಅವುಗಳಲ್ಲಿ ಸಾಂದರ್ಭಿಕ ಸಾಕ್ಷಿಗಳು, ಡಿಜಿಟಲ್ ಸಾಕ್ಷಿಗಳು, ಸಿಸಿಟಿವಿ ಫುಟೇಜ್​ಗಳು ಇನ್ನೂ ಕೆಲವು ಹಲವು ಸಾಕ್ಷ್ಯಗಳನ್ನು ಕಲೆ ಹಾಕಲಾಗಿದೆ. ಇವುಗಳ ಸತ್ಯಾಸತ್ಯತೆ ತಿಳಿಯಲು ಇವುಗಳನ್ನು ಹೈದರಾಬಾದ್ ಮತ್ತು ಬೆಂಗಳೂರಿನ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳಿಸಲಾಗಿದೆ. ಅವುಗಳಲ್ಲಿ ಸುಮಾರು 70% ಸಾಕ್ಷ್ಯಗಳ ಎಫ್​ಎಸ್​ಎಲ್ ವರದಿಗಳು ಪೊಲೀಸರ ಕೈ ಸೇರಿವೆ. ಇನ್ನುಳಿದ ಸಾಕ್ಷ್ಯಗಳ ಎಫ್​ಎಸ್​ಎಲ್ ವರದಿಗಾಗಿ ಪೊಲೀಸರು ಕಾಯುತ್ತಿದ್ದಾರೆ.

ಹೈದರಾಬಾದ್​ಗೆ ಕಳಿಸಲಾಗಿರುವ ಎಲೆಕ್ಟ್ರಾನಿಕ್ ಮತ್ತು ಡಿಜಿಟಲ್ ಉಪಕರಣಗಳು, ಸಿಸಿ ಕ್ಯಾಮೆರಾ, ಆಡಿಯೋ ಸ್ಯಾಂಪಲ್ಸ್, ಮೊಬೈಲ್ ಡೇಟಾ ರಿಪೋರ್ಟ್ ಎಫ್​ಎಸ್​ಎಲ್ ವರದಿಗಳು ಮಾತ್ರವೇ ಬರಬೇಕಿದೆ. ಇನ್ನು 30% ವರದಿಗಳು ಮಾತ್ರವೇ ಬರಬೇಕಿದ್ದು, ಈ ವರದಿಗಳು ಇದೇ ವಾರದಲ್ಲಿ ಪೊಲೀಸರ ಕೈ ಸೇರಲಿವೆ ಎನ್ನಲಾಗುತ್ತಿದೆ. ಡಿಜಿಟಲ್ ಡಾಟಾ ರಿಟ್ರೀವ್ ಮಾಡುವ ಡಿವೈಸ್​ಗಳಲ್ಲಿ ಐಫೋನ್​ಗಳು ಸಹ ಇದ್ದು, ಇವುಗಳ ಡಾಟಾ ರಿಟ್ರೀವ್​ಗೆ ಹೆಚ್ಚಿನ ಸಮಯ ಹಿಡಿಯುತ್ತಿದೆ ಎನ್ನಲಾಗುತ್ತಿದೆ.

ಈಗಾಗಲೇ ಚಾರ್ಜ್​ ಶೀಟ್ ತಯಾರಿ ಪ್ರಕ್ರಿಯೆ ಪ್ರಾರಂಭ ಆಗಿದ್ದು, ಎಫ್​ಎಸ್​ಎಲ್ ವರದಿ ಬಂದ ಬಳಿಕ ಚಾರ್ಜ್​ಶೀಟ್ ತಯಾರಿ ಪ್ರಕ್ರಿಯೆಗೆ ವೇಗ ಸಿಗಲಿದೆ. ಇನ್ನು 20 ದಿನಗಳಲ್ಲಿ ಪೊಲೀಸರು ನ್ಯಾಯಾಲಯಕ್ಕೆ ಅಂತಿಮ ತನಿಖಾ ವರದಿ ಸಲ್ಲಿಸುವ ಸಾಧ್ಯತೆ ದಟ್ಟವಾಗಿದೆ. ಚಾರ್ಜ್ ಶೀಟ್ ಸಲ್ಲಿಕೆ ಬಳಿಕ ದರ್ಶನ್​ ಹಾಗೂ ಸಂಗಡಿಗರು ಜಾಮೀನಿಗೆ ಅರ್ಜಿ ಸಲ್ಲಿಸುವ ಸಾಧ್ಯತೆ ಇದೆ. ಈಗಾಗಲೇ ಪ್ರಕರಣದ ಮೊದಲ ಆರೋಪಿ ಪವಿತ್ರಾಗೌಡ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾರೆ. ಅಲ್ಲದೆ ಕ್ಯಾಬ್ ಡ್ರೈವರ್ ಅನು ಕುಮಾರ್ ಸಹ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾರೆ.

author single

L Ramprasad

Managing Director

comments

No Reviews