ಹೊಳಲ್ಕೆರೆ: ಭಾರಿ ಮಳೆಯಿಂದ ಬೆಳೆ ನಷ್ಟ, ಮನೆ ಕುಸಿದು ಓರ್ವ ಸಾವು!
2024-08-15 06:19:23
ಹೊಳಲ್ಕೆರೆ ತಾಲ್ಲೂಕಿನಲ್ಲಿ ಕಳೆದ 2 ದಿನಗಳಲ್ಲಿ ಭಾರಿ ಮಳೆ ಸುರಿದಿದೆ.
ಅದರಲ್ಲೂ ಬಿ.ದುರ್ಗ ಹೋಬಳಿಯಲ್ಲೇ ಅತಿ ಹೆಚ್ಚು ಅಂದರೆ 40.1 ಮಿ.ಮೀ ಮಳೆಯಾಗಿದೆ. ಪರಿಣಾಮ ಬಿ.ದುರ್ಗ ಹೋಬಳಿಯ ಅನೇಕ ಕಡೆ ರೈತರು ಬೆಳೆಯುತ್ತಿದ್ದ ರಾಗಿ, ಮೆಕ್ಕೆಜೋಳ ಸೇರಿದಂತೆ ಅನೇಕ ಬೆಳೆಗಳ ಹೊಲಗಳಲ್ಲಿ 4 ಅಡಿ ನೀರು ನಿಂತಿದೆ. ಇದರಿಂದ ನಷ್ಟಕ್ಕೊಳಗಾದ ರೈತರು ತಮ್ಮ ಬೆಳೆ ನಷ್ಟಕ್ಕೆ ಸೂಕ್ತ ಪರಿಹಾರ ನೀಡಬೇಕೆಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಇನ್ನು ಹೊಳಲ್ಕೆರೆ ಪಟ್ಟಣದಲ್ಲಿ 33.5 ಮಿ.ಮೀ ಮಳೆ ಸುರಿದಿದೆ. ಇದರಿಂದ ಹೊಳಲ್ಕೆರೆ ಆಸುಪಾಸಿನಲ್ಲಿರುವ ಹಳ್ಳ, ಕೊಳ್ಳಗಳು, ಚೆಕ್ ಡ್ಯಾಂಗಳು ತುಂಬಿವೆ. ಕೊನೆಗೂ ತಮ್ಮ ಬೆಳೆಯುತ್ತಿದ್ದ ಬೆಳೆಗಳಿಗೆ ಮಳೆ ಜೋರಾಗಿ ಬಂತಲ್ಲಾ ಎಂದು ಹೊಳಲ್ಕೆರೆ ಆಸುಪಾಸಿನ ರೈತರು ಖುಷಿ ಪಟ್ಟಿದ್ದಾರೆ.
ಬೋರ್ ವೆಲ್ ಗಳಿಗೆ ಕೊನೆಗೂ ಒಂದಿಷ್ಟು ಅಂತರ್ಜಲ ಸಿಗ್ತಲ್ಲ ಎಂದು ಅಡಿಕೆ ಬೆಳೆಗಾರರು ಖುಷಿಪಟ್ಟಿದ್ದಾರೆ.
ಇಷ್ಟಾದರೂ ಹೊಳಲ್ಕೆರೆ ಪಟ್ಟಣದಲ್ಲಿ ಕಳೆದ ಮಂಗಳವಾರ ಮಧ್ಯ ರಾತ್ರಿ 2:30 ರಿಂದ ಸುರಿದ ಭಾರಿ ಮಳೆ ಪರಿಣಾಮ 7 ಮನೆಗಳಿಗೆ ನೀರು ನುಗ್ಗಿದೆ. ಇದರಿಂದ ಮನೆಗಳಲ್ಲಿದ್ದ ಧವಸ-ಧಾನ್ಯಗಳೆಲ್ಲಾ ನೀರು ಪಾಲಾಗಿದೆ.
ಇದೇ ರೀತಿ ರಾಮಗಿರಿ ಹೋಬಳಿಯ ಬಿದರೆಕೆರೆ ಲಂಬಾಣಿಹಟ್ಟಿ ಗ್ರಾಮದಲ್ಲಿ ರಾತ್ರಿ ಸುರಿದ ಸತತ ಮಳೆಯಿಂದ ಮನೆ ಕುಸಿದಿದೆ. ಮನೆ ಕುಸಿತದ ಪರಿಣಾಮ ಮನೆಯೊಳಗೆ ಮಲಗಿದ್ದ ಜಮಾನಾಯ್ಕ ಎಂಬುವರು ಸಾವನ್ನಪ್ಪಿದ್ದಾರೆ. ಈ ಬಗ್ಗೆ ಹೊಳಲ್ಕೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆದಾಗ್ಯೂ ಹೊಳಲ್ಕೆರೆಯ ದಾವಣಗೆರೆ ರಸ್ತೆಯಲ್ಲಿರುವ ದೊಡ್ಡ ಕೆರೆಗೆ ಇನ್ನೂ ಮಳೆ ಸಾಲದಾಗಿದೆ. ಕೇವಲ ಕಾಲು ಭಾಗಕ್ಕಿಂತ ಕಡಿಮೆ ಪ್ರಮಾಣದ ನೀರು ದೊಡ್ಡ ಕೆರೆಯಲ್ಲಿದೆ.
comments
Log in to write reviews