ನಕಲಿ ಆಡಿಯೋಗಳನ್ನು ಸೃಷ್ಟಿಸ್ತಾರೆ: ಮುನಿರತ್ನ ಆಡಿಯೋ ಡೂಪ್ಲಿಕೇಟ್ ಎಂದ ಯತ್ನಾಳ್

ನಕಲಿ ಆಡಿಯೋಗಳನ್ನು ಸೃಷ್ಟಿಸ್ತಾರೆ: ಮುನಿರತ್ನ ಆಡಿಯೋ ಡೂಪ್ಲಿಕೇಟ್ ಎಂದ ಯತ್ನಾಳ್

2024-09-15 04:47:22

ವಿಜಯಪುರ, ಸೆ.15: ಬೆಂಗಳೂರಿನ ರಾಜರಾಜೇಶ್ವರಿನಗರ ಬಿಜೆಪಿ ಶಾಸಕ ಮುನಿರತ್ನ ಬಂಧನ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರದಲ್ಲಿ ಮಾತನಾಡಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಅದು ಏನಿದೆ ನನಗೆ ಗೊತ್ತಿಲ್ಲ, ನಕಲಿ ಆಡಿಯೋಗಳನ್ನ ಸೃಷ್ಟಿಸುತ್ತಾರೆ. ಹಾಸ್ಯ ಕಲಾವಿದ ಒಬ್ಬ ಇದ್ದಾನೆ, ಎಷ್ಟು ಚೆಂದ ಮಿಮಿಕ್ರಿ ಮಾಡುತ್ತಾರೆ. ಆ ಮೂಲಕ ಪರೋಕ್ಷವಾಗಿ ಮುನಿರತ್ನ ಆಡಿಯೋ ಡೂಪ್ಲಿಕೇಟ್ ಎಂದು ಹೇಳಿದ್ದು, ಆಡಿಯೋ ಕುರಿತು ತನಿಖೆ ನಡೆಸುವಂತೆ ಒತ್ತಾಯಿಸಿದ್ದಾರೆ.

ಕಾಂಗ್ರೆಸ್​ನವರಿಗೆ ಹಿಂದೂಗಳು ಬೇಕಾಗಿಲ್ಲ, ಮುಸ್ಲಿಮರು ಬೇಕಾಗಿದ್ದಾರೆ. ಮುಸ್ಲಿಮರ ಸಲುವಾಗಿಯೇ ಕಾಂಗ್ರೆಸ್ ಪಕ್ಷ ಇದೆ, ಹಿಂದೂಗಳಿಗೆ ಅಲ್ಲ. ಯಾದಗಿರಿಯಲ್ಲಿ ದಲಿತ ಸಮುದಾಯದ ಪಿಎಸ್​ಐ ಆತ್ಮಹತ್ಯೆ ಮಾಡಿಕೊಂಡರು. ದಲಿತ ಸಂಘಟನೆಗಳು ಎಲ್ಲಿದ್ದಾವೆ ಅಂತಾ ನಾನು ಕೇಳುತ್ತೇನೆ. ಕೆಲವು ಮುಖಂಡರು ಪೇಯ್ಡ್ ಸರ್ವೆಂಟ್ ಇದ್ದಾರೆ, ಪೇಟಿಎಂ ಇದ್ದಂಗೆ, ಹಣ ಹಾಕಿದ ಕೂಡಲೇ ಕೆಲ ಸಂಘಟನೆಗಳು ಮಾತಾಡುತ್ತವೆ. ಹಣ ಕಡಿಮೆ ಆಯ್ತು ಅಂದರೆ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ಅಂತಾರೆ.

ರಾತ್ರಿ ಪೇಮೆಂಟ್ ಆಯ್ತು ಅಂದರೆ ಹೋರಾಟ ಹಿಂಪಡೆಯಲಾಯ್ತು ಅಂತಾರೆ. ಇಂತಹ ಸಂಘಟನೆಗಳಿಂದ ದಲಿತ ಸಮುದಾಯ ಉದ್ಧಾರ ಆಗುವುದಿಲ್ಲ. ದಲಿತರು ಹೊಸ ನಾಯಕತ್ವದ ಚಿಂತನೆ ಮಾಡಬೇಕು. ಅಂಬೇಡ್ಕರ್​​ ಅವರ ನಿಜವಾದ ಅನುಯಾಯಿ ಆಗಿದ್ದರೆ ಕಾಂಗ್ರೆಸ್​ನಲ್ಲಿರಲ್ಲ. ಡಾ.ಅಂಬೇಡ್ಕರ್ ಬಗ್ಗೆ ದಲಿತ ಮುಖಂಡರು ಮೊದಲು ಓದಿಕೊಳ್ಳಲಿ. ಕಾಂಗ್ರೆಸ್​ಗೆ ಎಂದೂ ಸೇರಬೇಡಿ ಅಂತ ಅಂಬೇಡ್ಕರ್ ಕರೆ ಕೊಟ್ಟಿದ್ದರು. ಕಾಂಗ್ರೆಸ್​ನಲ್ಲಿರುವ ದಲಿತ ಮುಖಂಡರು ಅಂಬೇಡ್ಕರ್ ಅನುಯಾಯಿಗಳಲ್ಲ. ಅವರೆಲ್ಲ ಕಮರ್ಷಿಯಲ್ ಎಂದು ಯತ್ನಾಳ್ ವಾಗ್ದಾಳಿ ನಡೆಸಿದರು.

ರಾಹುಲ್ ಗಾಂಧಿ ಬಗ್ಗೆ ಮಾತನಾಡಿದರೆ ಕೇಸ್ ದಾಖಲಿಸುವ ವಿಚಾರವಾಗಿ ಮಾತನಾಡಿದ್ದು, ಕೇಸ್ ಮಾಡಲಿ ಬಿಡಿ, ನಾನು ಯಾರಿಗೂ ಅಂಜಲ್ಲ. ನಮ್ಮ ಪಕ್ಷದ ಮಹಾನಾಯಕರಿಗೆ ಅಂಜಿಲ್ಲ, ಇವರ್ಯಾರು ಎಂದು ಗುಡುಗಿದ್ದಾರೆ. ಯಾವ ಮಹಾ ನಾಯಕರಿಗೂ ನಾನು ಅಂಜುವುದಿಲ್ಲ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ಮತ್ತೆ ಕಿಡಿಕಾರಿದ್ದಾರೆ.

ಸಚಿವ ಎಂ.ಬಿ ಪಾಟೀಲ ವಿರುದ್ಧ ವಾಗ್ದಾಳಿ
ಎಂ.ಬಿ ಪಾಟೀಲರ ಹಿಂದೆ ಸೂಫಿ ಸಂತ ಓರ್ವ ಮಹಾನ್ ದಾರ್ಶನಿಕನಿದ್ದಾನೆ. ಲಿಂಗಾಯತರು, ಮುಸ್ಲಿಮರು ಒಂದು. ಅವರು ನಮ್ಮ‌ ಅನುಚರಣೆಗಳು ಒಂದು ಅಂತಾನೆ. ಅಂದರೆ ದನದ ಮಾಂಸ ತಿಂತಾರಾ ಲಿಂಗಾಯತರು? ಮುಸ್ಲಿಮರನ್ನು ಲಿಂಗಾಯತರಿಗೆ ಹೋಲಿಸುತ್ತಾರೆ ಇವರು. ಅಲ್ಲೋರ್ವ ದಾರ್ಶನಿಕನೋರ್ವನಿದ್ದಾನೆ. ಹಿಂದೂ ಸಂಪ್ರದಾಯದಿಂದ ಲಿಂಗಾಯತರನ್ನ ಪ್ರತ್ಯೇಕ ಮಾಡುವುದು ಇದು ಎಂದಿದ್ದಾರೆ.

ಸನಾತನ ಹಿಂದೂ ಧರ್ಮದ ಖಾವಿ ಬಟ್ಟೆಯನ್ನ ನಮ್ಮ ಸ್ವಾಮೀಜಿಗಳು ಹಾಕಿಕೊಳ್ಳುತ್ತಾರೆ. ಅವರೇನಾದರೂ ಹಸಿರು ಬಟ್ಟೆ, ಉದ್ದಗೆ ದಾಡಿ ಬಿಟ್ಟುಕೊಂಡು ಓಡಾಡುತ್ತಾರಾ? ಲಿಂಗಾಯತರು ಮತ್ತು ಮುಸ್ಲಿಮರು ಹೇಗೆ ಒಂದಾಗಲು ಸಾಧ್ಯ? ಲಿಂಗಾಯತರು ಇರಲಿ, ವೀರಶೈವರಿರಲಿ ಎಲ್ಲರೂ ಸನಾತನ ಹಿಂದೂ ಧರ್ಮದ ಭಾಗನೇ ಎಂದು ಶಾಸಕ ಯತ್ನಾಳ್ ಸ್ಪಷ್ಟಪಡಿಸಿದರು.

author single

L Ramprasad

Managing Director

comments

No Reviews