ಕೈ ಹೈಕಮಾಂಡ್ ಗೆ ಮುಡಾ ವರದಿ ಒಪ್ಪಿಸಿದ ಸಿಎಂ 

ಕೈ ಹೈಕಮಾಂಡ್ ಗೆ ಮುಡಾ ವರದಿ ಒಪ್ಪಿಸಿದ ಸಿಎಂ 

2024-07-30 08:50:31

ನವದೆಹಲಿ/ಬೆಂಗಳೂರು, ಜುಲೈ 30: ಕರ್ನಾಟಕ ಸರ್ಕಾರ ಸರಣಿ ಹಗರಣಗಳ ಸುಳಿಯಲ್ಲಿ ಸಿಲುಕಿದೆ. ಈ ಹಗರಣ ಇದೀಗ ದೆಹಲಿ ಅಂಗಳಕ್ಕೂ ತಲುಪಿದ್ದು, ಕಾಂಗ್ರೆಸ್ ಹೈಕಮಾಂಡ್ ಸಭೆಯಲ್ಲೂ ಚರ್ಚೆಯಾಗಿದೆ. ಇಂದು (ಜುಲೈ 30) ದೆಹಲಿಯಲ್ಲಿ ಕಾಂಗ್ರೆಸ್ ಹೈಕಮಾಂಡ್ ನಾಯಕರು ಸಭೆ ನಡೆಸಿದ್ದು, ಈ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ ಶಿವಕುಮಾರ್ ಹಾಜರಾಗಿದ್ದು, ರಾಜ್ಯದಲ್ಲಿ ಆಗುತ್ತಿರುವ ಬೆಳವಣಿಗೆಗಳ ಬಗ್ಗೆ ಹೈಕಮಾಂಡ್​ಗೆ ಪಿನ್​ ಟು ಪಿನ್ ವರದಿ ಒಪ್ಪಿಸಿದ್ದಾರೆ. ಇನ್ನು ಪ್ರಮುಖವಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜನ ಖರ್ಗೆ ಅವರು ಸಿಎಂ ಕಾರ್ಯದರ್ಶಿ ಎಲ್.ಕೆ.ಅತೀಕ್ ಅವರನ್ನೂ ಸಹ ಕರೆಯಿಸಿಕೊಂಡು ವಾಲ್ಮೀಕಿ ನಿಗಮದಿಂದ ಅಕ್ರಮವಾಗಿ ಹಣ ವರ್ಗಾವಣೆಯಾಗಿರುವ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ.

ಸಭೆಯಲ್ಲಿ ಆದ ಚರ್ಚೆಯೇನು?
ಹೈಕಮಾಂಡ್ ನಾಯಕರಿಗೆ ಮೊದಲಿಗೆ ವಾಲ್ಮೀಕಿ ಹಗರಣದ ಬಗ್ಗೆ ರಿಪೋರ್ಟ್​ ಕೊಟ್ಟ ಸಿಎಂ, ಡಿಸಿಎಂ, ವಾಲ್ಮೀಕಿ ನಿಗಮದ ಹಗರಣ ಅಧಿಕಾರಿಗಳಿಂದ ಆಗಿದೆ. ಸಚಿವರಾಗಿದ್ದ ಬಿ.ನಾಗೇಂದ್ರರ ತಪ್ಪಿಲ್ಲ, SIT ತನಿಖೆ ಪರಿಣಾಮಕಾರಿಯಾಗಿ ನಡೆಯುತ್ತಿದೆ. ತಪ್ಪಿತಸ್ಥ ಅಧಿಕಾರಿಗಳ ಆಸ್ತಿ ಮೇಲೆ ದಾಳಿಯಾಗಿದೆ. ಪ್ರಕರಣದಲ್ಲಿ ಹಲವರನ್ನ ಬಂಧಿಸಿ ವಿಚಾರಣೆ ನಡೆಯುತ್ತಿದೆ. ಇನ್ನು ವರ್ಗಾವಣೆಯಾಗಿದ್ದ ಹಣ ವಶಪಡಿಸಿಕೊಳ್ಳುತ್ತಿದ್ದೇವೆ. ಈ ಕೇಸ್​ನಲ್ಲಿ ಕೇಂದ್ರ ಸರ್ಕಾರ ಲಾಭ ಪಡೆದುಕೊಳ್ಳುತ್ತಿದೆ. ED ಅಧಿಕಾರಿಗಳ ಮೂಲಕ ಸರ್ಕಾರಕ್ಕೆ ಬೆದರಿಕೆ, ಇದರ ವಿರುದ್ಧವೂ ಕಾಂಗ್ರೆಸ್ ಹೋರಾಟ ನಡೆಸಿದೆ ಎಂದು ವಿವರಿಸಿದರು.

ಮುಡಾ ಬಗ್ಗೆ ವಿವರಣೆ ನೀಡಿದ ಸಿಎಂ
ಇನ್ನು ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ, ಹೈಕಮಾಂಡ್ ನಾಯಕರಿಗೆ ಸ್ಪಷ್ಟನೆ ಕೊಟ್ಟಿದ್ದಾರೆ. ಸೈಟು ಹಂಚಿಕೆ ವಿಚಾರವಾಗಿ ಯಾವುದೇ ಅಕ್ರಮ ನಡೆದಿಲ್ಲ, ಈಗಾಗಲೇ ಹಲವು ಈ ಬಾರಿ ನಾನು ಸ್ಪಷ್ಟನೆ ನೀಡಿದ್ದೇನೆ, 50:50 ಹಂಚಿಕೆ ನನ್ನ ಕುಟುಂಬಕ್ಕೆ ವಿಶೇಷವಾಗಿ ಮಾಡಿಲ್ಲ, ಮೇಲಾಗಿ ನಾನು ಅಧಿಕಾರದಲ್ಲಿದ್ದಾಗ ಸೈಟು ಹಂಚಿಕೆ ಆಗಿಲ್ಲ, ಬಿಜೆಪಿಯವರು ಅಧಿಕಾರದಲ್ಲಿದ್ದಾಗ ಸೈಟ್ ಕೊಟ್ಟಿರುವುದು, ರಾಜಕೀಯ ಕಾರಣಕ್ಕೆ ನನ್ನ ಮೇಲೆ ಆರೋಪ ಮಾಡುತ್ತಿದ್ದಾರೆ ಎಂದು ವರಿಷ್ಠರ ನಾಯಕರ ಮುಂದೆ ಸಿದ್ದರಾಮಯ್ಯ ಸಮರ್ಥನೆ ಮಾಡಿಕೊಂಡಿದ್ದಾರೆ.

ಸಿಎಂ ಕಾರ್ಯದರ್ಶಿಯಿಂದಲೂ ಮಾಹಿತಿ ಪಡೆದ ಖರ್ಗೆ
ಇನ್ನು ಎರಡು ಹಗರಣಗಳ ಬಗ್ಗೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ ಶಿವಕುಮಾರ್ ಅವರಿಂದ ವರದಿ ಪಡೆದುಕೊಂಡ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಿಎಂ ಕಾರ್ಯದರ್ಶಿ ಎಲ್.ಕೆ.ಅತೀಕ್ ಅವರನ್ನು ಸಭೆಗೆ ಕರೆಸಿಕೊಂಡು ವಿವರಣೆ ಪಡೆದುಕೊಂಡಿದ್ದಾರೆ. ವಾಲ್ಮೀಕಿ ನಿಗಮದ ಅಕ್ರಮವಾಗಿ ಹೇಗೆ ಹಣ ವರ್ಗಾವಣೆ ಆಯ್ತು? ಇದಕ್ಕೆ ಕಾರಣ ಯಾರು? ಇದರ ಹಿಂದೆ ಯಾರೆಲ್ಲಾ ಇದ್ದಾರೆ ಎನ್ನುವ ಮಾಹಿತಿಯನ್ನು ಪಡೆದುಕೊಂಡಿದ್ದಾರೆ.

ಲೋಕಸಭಾ ಚುನಾವಣೆ ಸೋಲಿನ ಬಗ್ಗೆಯೂ ಚರ್ಚೆ
ಲೋಕಸಭಾ ಚುನಾವಣೆಯಲ್ಲಿ ನಿರೀಕ್ಷಿಸಿದಷ್ಟು ಸ್ಥಾನ ಸಿಗದ ಹಿನ್ನೆಲೆಯಲ್ಲಿ ಹೈಕಮಾಂಡ್ ನಾಯಕರ ಜೊತೆ ಸಿಎಂ,ಡಿಸಿಎಂ ಪರಾಮರ್ಶೆ ನಡೆಸಿದರು. ಸೋಲಿಗೆ ಕಾರಣ ಹುಡುಕಲು ಹೈಕಮಾಂಡ್, ಮಧುಸೂದನ್ ಮಿಸ್ತ್ರಿ ನೇತೃತ್ವದಲ್ಲಿ ಸತ್ಯಶೋಧನ ಸಮಿತಿ ರಚಿಸಿತ್ತು. ಇಂದಿನ ಸಭೆಯಲ್ಲಿ ಮಧುಸೂದನ್ ಮಿಸ್ತ್ರಿ ವರದಿ ಮುಂದಿಟ್ಟುಕೊಂಡು ಚರ್ಚೆ ಮಾಡಿದ್ದಾರೆ.

ಕೆಲವು ಸಚಿವರು ಲೋಕಸಭೆ ಚುನಾವಣೆಯಲ್ಲಿ ಕೆಲಸ ಮಾಡಿಲ್ಲ. ಮತ್ತೆ ಕೆಲವು ಶಾಸಕರು ಅಭ್ಯರ್ಥಿಗಳಿಗೆ ಸಾಥ್ ನೀಡಿಲ್ಲ. ಪಕ್ಷದ ಅಭ್ಯರ್ಥಿ ವಿರುದ್ಧವೇ ಕೆಲಸ ಮಾಡಿದ್ದಾರೆ. ಹೀಗಾಗಿ ಕೆಲವು ಸಚಿವರಿಗೆ ಕೊಕ್ ನೀಡಬೇಕು . ಹೊಸಬರಿಗೆ ಆದ್ಯತೆ ನೀಡಬೇಕು ಎಂಬ ಕೂಗು ಹೆಚ್ಚಾಗಿದೆ ಎಂದು ಮಧುಸೂಧನ್ ಮಿಸ್ತ್ರಿ ವರದಿಯಲ್ಲಿನ ಕೆಲವು ಅಂಶಗಳನ್ನು ಉಲ್ಲೇಖ ಮಾಡಲಾಗಿದ್ದು, ಇದನ್ನೆ ಮುಂದಿಟ್ಟುಕೊಂಡು ಸಂಪುಟಕ್ಕೆ ಸರ್ಜರಿ ಮಾಡುವ ಬಗ್ಗೆ ಚರ್ಚೆಯಾಗಿದೆ ಎಂದು ತಿಳಿದುಬಂದಿದೆ.
 

author single

L Ramprasad

Managing Director

comments

No Reviews