ಚಿತ್ರದುರ್ಗ: ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರದ ಅನುದಾನ ಬಿಡುಗಡೆ ವಿಳಂಬಕ್ಕೆ ಆಕ್ರೋಶ
2024-11-11 05:42:28
ಚಿತ್ರದುರ್ಗ: ಬರದ ನಾಡು ಚಿತ್ರದುರ್ಗ ಜಿಲ್ಲೆ ಸೇರಿದಂತೆ ಮಧ್ಯಕರ್ನಾಟಕ ಭಾಗಕ್ಕೆ ನೀರುಣಿಸುವ ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರ ಸರ್ಕಾರ ಭರವಸೆ ನೀಡಿದ್ದಂತೆ 5300 ಕೋಟಿ ರೂಪಾಯಿ ಅನುದಾನ ಬಿಡುಗಡೆಗೆ ವಿಳಂಬ ನೀತಿ ಅನುಸರಿಸುತ್ತಿದೆ ಎಂದು ಭದ್ರಾ ಮೇಲ್ದಂಡೆ ಯೋಜನೆ ಅನುಷ್ಠಾನ ಸಮಿತಿ ಸದಸ್ಯ ಚಿಕ್ಕಪ್ಪನಹಳ್ಳಿ ಷಣ್ಮುಖ ಹೇಳಿದ್ದಾರೆ.
ಈ ಬಗ್ಗೆ ನಗರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಈಗಾಗಲೇ ರಾಜ್ಯಸರ್ಕಾರ ಭದ್ರಾ ಮೇಲ್ದಂಡೆ ಯೋಜನೆ ಬಗ್ಗೆ ಅಗತ್ಯವಾದ ಎಲ್ಲಾ ಮಾಹಿತಿ, ದಾಖಲೆಗಳನ್ನು ಸಲ್ಲಿಸಿ ವರದಿ ನೀಡಿದ್ದರೂ ಸಹ ಕೇಂದ್ರ ಸರ್ಕಾರ ರಾಷ್ಟ್ರೀಯ ಯೋಜನೆಯಾದ ಭದ್ರಾ ಮೇಲ್ದಂಡೆ ಯೋಜನೆಗೆ ಮಂಜೂರು ಮಾಡಬೇಕಿರುವ 5300 ಕೋಟಿ ರೂಪಾಯಿ ಅನುದಾನವನ್ನು ಬಿಡುಗಡೆ ಮಾಡದೆ ಕಾಲ ತಳ್ಳುತ್ತಿದೆ, ಏಕೆಂದರೆ 1800 ಕೋಟಿ ರೂಪಾಯಿ ಅನುದಾನವನ್ನು ಖೋತಾ ಮಾಡಲು ರಾಜಕೀಯ ಮಾಡಲಾಗುತ್ತಿದೆ ಎಂದು ಆರೋಪಿಸಿದರು.
ಈ ಬಗ್ಗೆ ರಾಜ್ಯಸರ್ಕಾರ ಎಲ್ಲಾ ಮಾಹಿತಿ ನೀಡಿದ್ದರೂ ಅನುದಾನ ನೀಡದೆ ಸತಾಯಿಸುತ್ತಿರುವ ಕೇಂದ್ರ ಸರ್ಕಾರದ ರೈತ ವಿರೋಧಿ ಧೋರಣೆ ವಿರುದ್ಧ ರಾಜ್ಯದ ಸಂಸದರೆಲ್ಲರೂ ಪಕ್ಷಾತೀತವಾಗಿ ಹೋರಾಡಿ 5300 ಕೋಟಿ ರೂಪಾಯಿ ಅನುದಾನ ಕೊಡಿಸಬೇಕೆಂದು ಒತ್ತಾಯಿಸಿದರು.
ಈಗಾಗಲೇ ಚಿತ್ರದುರ್ಗಕ್ಕೆ ಭೇಟಿ ನೀಡಿದ್ದಾಗ ಸಂಸದ ಗೋವಿಂದ ಕಾರಜೋಳ ಮತ್ತು ಹೊಳಲ್ಕೆರೆ ಶಾಸಕ ಎಂ.ಚಂದ್ರಪ್ಪ ಮುಂದೆ ಕೇಂದ್ರ ಜಲಶಕ್ತಿ ಸಹಾಯಕ ಸಚಿವ ವಿ. ಸೋಮಣ್ಣ ಅವರು ಭದ್ರಾ ಮೇಲ್ದಂಡೆ ಯೋಜನೆಗೆ ಅತ್ಯಗತ್ಯವಾಗಿ ಬೇಕಿರುವ 5300 ಕೋಟಿ ರೂಪಾಯಿ ಅನುದಾನವನ್ನು ಇನ್ನು ಎರಡ್ಮೂರು ತಿಂಗಳೊಳಗೆ ಮಂಜೂರು ಮಾಡಿಸುತ್ತೇನೆಂದು ಭರವಸೆ ನೀಡಿದ್ದರು. ಆದರೆ ಇದಾಗಿ ಒಂದು ತಿಂಗಳು ಕಳೆದರೂ ಕೂಡ ಭದ್ರಾ ಮೇಲ್ದಂಡೆ ಯೋಜನೆಗೆ 5300 ಕೋಟಿ ರೂಪಾಯಿ ಅನುದಾನ ಮಂಜೂರು ಮಾಡುವ ಬಗ್ಗೆ ಕೇಂದ್ರ ಸರ್ಕಾರ ಯಾವುದೇ ಪ್ರತಿಕ್ರಿಯೆ ನೀಡದೆ ರೈತರ ಸತತ ಹೋರಾಟಕ್ಕೆ ಬೆಲೆ ಕೊಡದೆ ದಿವ್ಯ ಮೌನ ವಹಿಸಿರುವುದು ನೀರಾವರಿ
ಹೋರಾಟಗಾರರನ್ನು, ರೈತ ಸಂಘಟನೆಗಳು ಹಾಗೂ ಚಿತ್ರದುರ್ಗ ಜಿಲ್ಲೆಯ ರೈತರನ್ನು ರೊಚ್ಚಿಗೆಬ್ಬಿಸಿದೆ. ಇದರಿಂದ 3 ದಶಕಗಳು ಕಳೆದರೂ ಕೂಡ ಭದ್ರಾ ಮೇಲ್ದಂಡೆ ಯೋಜನೆ ಅನುಷ್ಠಾನಗೊಂಡು ಮಧ್ಯ ಕರ್ನಾಟಕ ಭಾಗಕ್ಕೆ ನೀರು ಹರಿಯಲು ಸದಾ ರಾಜಕೀಯ ಜಟಾಪಟಿ ತಡೆ ಹಾಕಿದೆ. ಕರ್ನಾಟಕದಿಂದ ಸತತ 2 ಬಾರಿ ರಾಜ್ಯಸಭಾ ಸದಸ್ಯರಾಗಿ ಕೇಂದ್ರ ಹಣಕಾಸು ಸಚಿವೆಯಾಗಿರುವ ತಮಿಳುನಾಡಿನ ನಿರ್ಮಲಾ ಸೀತಾರಾಂ ಮತ್ತು ಕೇಂದ್ರ ಜಲಶಕ್ತಿ ಸಹಾಯಕ ಸಚಿವ ವಿ.ಸೋಮಣ್ಣ ಅವರು ಭದ್ರಾ ಮೇಲ್ದಂಡೆ ಯೋಜನೆಗೆ ಅತ್ಯಗತ್ಯವಾಗಿ ಮಂಜೂರು ಮಾಡಬೇಕಿರುವ 5300 ಕೋಟಿ ರೂಪಾಯಿ ಅನುದಾನವನ್ನು ಬಿಡುಗಡೆ ಮಾಡದೆ ವಿಳಂಬ ಧೋರಣೆ ಅನುಸರಿಸಿದ ಪರಿಣಾಮ ಚಿತ್ರದುರ್ಗ ಜಿಲ್ಲೆಯ ರೈತ ಸಮೂಹ ಮತ್ತು ರೈತ ಸಂಘಟನೆಗಳು, ನೀರಾವರಿ ಹೋರಾಟಗಾರರು ಆಕ್ರೋಶಗೊಂಡಿದ್ದಾರೆ.
comments
Log in to write reviews