ಪ್ರಬಲ ಪಾಕಿಸ್ತಾನ ಮಣಿಸಿ ಏಷ್ಯನ್ ಚಾಂಪಿಯನ್ಸ್ ಹಾಕಿ ಟ್ರೋಫಿ ಫೈನಲ್ ಪ್ರವೇಶಿಸಿದ ಚೀನಾ
2024-09-16 05:41:22
ಬೀಜಿಂಗ್, ಸೆ.16: ಚೀನಾದ ಮೋಕಿಯಲ್ಲಿ ನಡೆದ ಏಷ್ಯನ್ ಹಾಕಿ ಚಾಂಪಿಯನ್ಸ್ ಟ್ರೋಫಿಯ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಪ್ರಬಲ ಪಾಕಿಸ್ತಾನ ತಂಡವನ್ನು ಪೆನಾಲ್ಟಿ ಶೂಟೌಟ್ ನಲ್ಲಿ 2-0 ಗೋಲುಗಳಿಂದ ಸೋಲಿಸಿದ ಆತಿಥೇಯ ಚೀನಾ ತಂಡ ಇದೇ ಮೊದಲ ಬಾರಿಗೆ ಫೈನಲ್ ಪ್ರವೇಶಿಸಿ ಅಚ್ಚರಿ ಮೂಡಿಸಿದೆ.
ಈ ಮೊದಲ ಸೆಮಿಫೈನಲ್ ಪಂದ್ಯದ 60 ನಿಮಿಷಗಳ ಕಾಲ ಉಭಯ ತಂಡಗಳು ತಲಾ ಒಂದೊಂದು ಗೋಲು ದಾಖಲಿಸಿದವು. ಆನಂತರ 1-1 ಸ್ಕೋರ್ ಹಾಗೇ ಮುಂದುವರಿದ ಕಾರಣ ಪೆನಾಲ್ಟಿ ಶೂಟ್-ಔಟ್ನಲ್ಲಿ ಫಲಿತಾಂಶವನ್ನು ನಿರ್ಧರಿಸಲು ಅಂಪೈರ್ ಗಳು ತೀರ್ಮಾನಿಸಿದರು. ಆದರೆ ಪೆನಾಲ್ಟಿ ಶೂಟೌಟ್ ನಲ್ಲಿ
ಪಾಕಿಸ್ತಾನದ ಕಳಪೆ ಪ್ರದರ್ಶನ
ತೋರಿ ಒಂದೇ ಒಂದು ಗೋಲು ಗಳಿಸಲು ಸಾಧ್ಯವಾಗಲಿಲ್ಲ. ಇತ್ತ ನಿರೀಕ್ಷೆಗೂ ಮೀರಿದ ಪ್ರದರ್ಶನ ನೀಡಿದ ಚೀನಾ ಮಾತ್ರ 2 ಗೋಲು ದಾಖಲಿಸುವಲ್ಲಿ ಯಶಸ್ವಿಯಾಯಿತು. ಪೆನಾಲ್ಟಿ ಶೂಟೌಟ್‌ನಲ್ಲಿ ಗೋಲುಗಳನ್ನು ವಿಫಲಗೊಳಿಸುವ ಸಲುವಾಗಿ ಪಾಕಿಸ್ತಾನ ತಂಡ ತನ್ನ ಗೋಲ್‌ಕೀಪರ್ ಬದಲಿಸಿ ಮುನೀಬ್ ಉರ್ ರೆಹಮಾನ್ ಅವರನ್ನು ಬದಲಿ ಗೋಲ್‌ಕೀಪರ್‌ನನ್ನಾಗಿ ಕಣಕ್ಕಿಳಿಸಿತು.
ಪೆನಾಲ್ಟಿ ಶೂಟೌಟ್‌ನಲ್ಲಿ ಏನಾಯಿತು?
ಪೆನಾಲ್ಟಿ ಶೂಟೌಟ್‌ನಲ್ಲಿ ಚೀನಾ ಮೊದಲ ಶಾಟ್‌ನಲ್ಲಿಯೇ ಗೋಲು ದಾಖಲಿಸುವಲ್ಲಿ ಯಶಸ್ವಿಯಾಯಿತು. ಇತ್ತ ಪಾಕಿಸ್ತಾನ ಮೊದಲ ಹೊಡೆತದಲ್ಲಿ ಗೋಲು ದಾಖಲಿಸುವಲ್ಲಿ ವಿಫಲವಾಯಿತು. ಇದಾದ ಬಳಿಕ 2ನೇ ಹೊಡೆತದಲ್ಲಿ ಚೀನಾ ಪರ ಲಿನ್ ಚಾಂಗ್ಲಿಯಾಂಗ್ 2ನೇ ಗೋಲು ದಾಖಲಿಸಿದರು. ಆದರೆ ಪಾಕಿಸ್ತಾನ ತನ್ನ 2ನೇ ಪ್ರಯತ್ನದಲ್ಲೂ ಗೋಲು ದಾಖಲಿಸುವಲ್ಲಿ ಎಡವಿತು. ಈ ಮೂಲಕ ಪಾಕ್ ತಂಡ ಫೈನಲ್ಗೇರುವ ಅವಕಾಶದಿಂದ ವಂಚಿತವಾಯಿತು. ಇನ್ನು ಇದೇ ಮೊದಲ ಬಾರಿಗೆ ಫೈನಲ್ಗೇರಿರುವ ಚೀನಾ ತಂಡ ಏಷ್ಯನ್ ಚಾಂಪಿಯನ್ಸ್ ಹಾಕಿ ಟ್ರೋಫಿಯಲ್ಲಿ ಹೊಸ ದಾಖಲೆ ನಿರ್ಮಿಸಿತು.
ಇಂದೇ ನಡೆಯುತ್ತಿರುವ ಭಾರತ ಮತ್ತು ದಕ್ಷಿಣ ಕೊರಿಯಾ ತಂಡಗಳ ನಡುವಿನ 2ನೇ ಸೆಮಿಫೈನಲ್ ಪಂದ್ಯದ ವಿಜೇತವಾದ ತಂಡವನ್ನು ಚೀನಾ ಫೈನಲ್ನಲ್ಲಿ ಎದುರಿಸಲಿದೆ.
ಪ್ರಸ್ತುತ ನಡೆಯುತ್ತಿರುವ 2ನೇ ಸೆಮಿಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ, ದಕ್ಷಿಣ ಕೊರಿಯಾ ತಂಡವನ್ನು ಎದುರಿಸುತ್ತಿದೆ.
comments
Log in to write reviews