ಚನ್ನಪಟ್ಟಣ ಅಸೆಂಬ್ಲಿ ಬೈಎಲೆಕ್ಷನ್: ಬಿಜೆಪಿ ಹೈಕಮಾಂಡ್ ಮೂಲಕ ಎಚ್.ಡಿ.ಕೆ ಮನವೊಲಿಸಲು ಸಿ.ಪಿ.ವೈ ಯತ್ನ
2024-08-15 03:43:16
ನವದೆಹಲಿ: ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದು ಕೇಂದ್ರ ಸಚಿವರಾದ ಕಾರಣ ಅವರು ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದರು.
ಬಳಿಕ ಚನ್ನಪಟ್ಟಣ ಉಪಚುನಾವಣೆ ಹಾವೇರಿ ಜಿಲ್ಲೆಯ ಶಿಗ್ಗಾಂವಿ ಮತ್ತು ಬಳ್ಳಾರಿ ಜಿಲ್ಲೆಯ ಸಂಡೂರು ಉಪಚುನಾವಣೆ ಒಟ್ಟಿಗೆ ನಡೆಯಲಿದೆ.
ಆದರೆ ಈ 3 ಅಸೆಂಬ್ಲಿ ಕ್ಷೇತ್ರಗಳ ಬೈಎಲೆಕ್ಷನ್ ಈ ವರ್ಷದ ಹಿಂಗಾರು ಮಳೆ ಬಳಿಕ ಅಂದರೆ ನವೆಂಬರ್ ಮೊದಲ ವಾರದಲ್ಲಿ ನಡೆಯಬಹುದು. ಆದರೆ ಅದಕ್ಕೂ ಒಂದು ತಿಂಗಳು ಮೊದಲೇ ಚುನಾವಣಾ ಆಯೋಗ ಅಕ್ಟೋಬರ್ ತಿಂಗಳಲ್ಲಿ 3 ಅಸೆಂಬ್ಲಿ ಕ್ಷೇತ್ರಗಳ ಬೈಎಲೆಕ್ಷನ್ ವೇಳಾಪಟ್ಟಿ ಘೋಷಿಸುವ ಸಾಧ್ಯತೆ ಇದೆ. ಅಂದರೆ ಸುಮಾರು ಒಂದು ತಿಂಗಳು 2 ವಾರಗಳಲ್ಲಿ 3 ಅಸೆಂಬ್ಲಿ ಕ್ಷೇತ್ರಗಳ ಬೈಎಲೆಕ್ಷನ್ ವೇಳಾಪಟ್ಟಿ ಘೋಷಿಸುವ ಮುನ್ನವೇ ಕಾಂಗ್ರೆಸ್ ಮತ್ತು ಎನ್.ಡಿ.ಎ (ಬಿಜೆಪಿ-ಜೆಡಿಎಸ್) ತಮ್ಮ ಅಭ್ಯರ್ಥಿಗಳನ್ನು ಘೋಷಿಸಬೇಕಿದೆ.
ಚನ್ನಪಟ್ಟಣ ಬೈಎಲೆಕ್ಷನ್ ಎನ್.ಡಿ.ಎ ಟಿಕೆಟ್ ಯಾರಿಗೆ?
ಹೌದು, ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಹಾಲಿ ಪಕ್ಷೇತರ ಸಂಸದೆಯಾಗಿದ್ದ ಸುಮಲತಾ ಅಂಬರೀಶ್ ಅವರ ಬದಲಿಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಜೆಡಿಎಸ್ ನಿಂದ ಸ್ಪರ್ಧಿಸಿ ಗೆದ್ದು ಚನ್ನಪಟ್ಟಣ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಇದೀಗ ಚನ್ನಪಟ್ಟಣ ಬೈಎಲೆಕ್ಷನ್ ಹತ್ತಿರದಲ್ಲಿರುವ ವೇಳೆ ಬಿಜೆಪಿಯಿಂದ ಟಿಕೆಟ್ ಪಡೆಯಲು ಮಾಜಿ ಸಚಿವ ಹಾಗೂ ಹಾಲಿ ಬಿಜೆಪಿ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ತೀವ್ರ ಲಾಬಿ ನಡೆಸಿದ್ದಾರೆ.
ಈಗಾಗಲೇ ದೆಹಲಿಗೆ ತೆರಳಿ ಅಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಸೇರಿ ಬಿಜೆಪಿ ವರಿಷ್ಠರನ್ನು ಭೇಟಿಯಾಗಿ ತಮಗೆ ಚನ್ನಪಟ್ಟಣ ಬೈಎಲೆಕ್ಷನ್ ಟಿಕೆಟ್ ಕೊಡಿಸುವಂತೆ ಕೇಳಿಕೊಂಡಿದ್ದಾರೆ. ಜೊತೆಗೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರನ್ನು ಮನವೊಲಿಸಲು ಈ ಎಲ್ಲಾ ಬಿಜೆಪಿ ವರಿಷ್ಠರನ್ನು ಯೋಗೇಶ್ವರ್ ಕೇಳಿಕೊಂಡಿದ್ದಾರೆ. ಇದಕ್ಕೆ ಸಮ್ಮತಿಸಿರುವ ಈ ಎಲ್ಲಾ ಬಿಜೆಪಿ ವರಿಷ್ಠರು ಇದೇ ಆಗಸ್ಟ್ 18 ಅಥವಾ ನಂತರ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರ ಜೊತೆ ಚರ್ಚಿಸಿ ಚನ್ನಪಟ್ಟಣ ಬೈಎಲೆಕ್ಷನ್ ಟಿಕೆಟ್ ನಿಮಗೆ ಕೊಡಿಸಲು ಮನವೊಲಿಸ್ತೇವೆ ಎಂದು ಯೋಗೇಶ್ವರ್ ಗೆ ಹೇಳಿದ್ದಾರೆ.
ಈ ಬಾರಿ ಚನ್ನಪಟ್ಟಣ ಬೈಎಲೆಕ್ಷನ್ ನಲ್ಲಿ ನಾನು ಯಾವುದೇ ಕಾರಣಕ್ಕೂ ಜೆಡಿಎಸ್ ಅಥವಾ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಲ್ಲ, ಸ್ಪರ್ಧಿಸಿದರೆ ಅದು ಬಿಜೆಪಿಯಿಂದ ಮಾತ್ರ. ಒಂದು ವೇಳೆ ನನಗೆ ಬಿಜೆಪಿ ಟಿಕೆಟ್ ಸಿಗದಿದ್ದರೆ ನಾನು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತೇನೆ ಎಂದು ಯೋಗೇಶ್ವರ್ ಘೋಷಿಸಿದ್ದಾರೆ.
ಆದಾಗ್ಯೂ ಇಂದು ಆಗಸ್ಟ್ 15 ರ 78ನೇ ಸ್ವಾತಂತ್ರ್ಯ ದಿನಾಚರಣೆಗಾಗಿ ಚನ್ನಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ನಡೆದ ಸ್ವಾತಂತ್ರ್ಯೋತ್ಸವದ ದಿನಾಚರಣೆಗೆ ಬಂದಿದ್ದ ಡಿಸಿಎಂ ಡಿ.ಕೆ.ಶಿವಕುಮಾರ್ ವೇದಿಕೆ ಮೇಲೆ ಉಪಸ್ಥಿತರಿದ್ದ ಸಿ.ಪಿ.ಯೋಗೇಶ್ವರ್ ಅವರನ್ನು ಆತ್ಮೀಯವಾಗಿ ಮಾತನಾಡಿಸಿದ್ದಾರೆ. ಚನ್ನಪಟ್ಟಣ ಬೈಎಲೆಕ್ಷನ್ ಗೆ ನಿಮಗೆ ಬಿಜೆಪಿ ಟಿಕೆಟ್ ಸಿಗದಿದ್ದರೆ ಮತ್ತೆ ಮಾತೃ ಪಕ್ಷ ಕಾಂಗ್ರೆಸ್ ಸೇರಿ ನಾವು ನಿಮಗೆ ಟಿಕೆಟ್ ಕೊಡಿಸಿ ಗೆಲ್ಲಿಸುತ್ತೇವೆ, ಸಾಧ್ಯವಾದರೆ ಮಂತ್ರಿ ಮಾಡಲೂ ಪ್ರಯತ್ನಿಸ್ತೇನೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಸಿ.ಪಿ.ವೈ.ಗೆ ಬಿಗ್ ಆಫರ್ ನೀಡಿದ್ದಾರೆ.
ಇದರಿಂದ ಆಗಸ್ಟ್ ಅಂತ್ಯದಲ್ಲಿ ಸಿ.ಪಿ.ಯೋಗೇಶ್ವರ್ ಅವರಿಗೆ ಬಿಜೆಪಿ ಟಿಕೆಟ್ ಸಿಗದಿದ್ದರೆ ಮತ್ತೆ ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ಆಫರ್ ಬರುವ ಸಾಧ್ಯತೆಯೇ ಹೆಚ್ಚಾಗಿದೆ.
ಇನ್ನೊಂದೆಡೆ ಕೇಂದ್ರ ಸಚಿವ ಕುಮಾರಸ್ವಾಮಿ ಅವರು ಮಾತ್ರ ಚನ್ನಪಟ್ಟಣ ಕ್ಷೇತ್ರದಲ್ಲಿ ಜೆಡಿಎಸ್ ಗೆಲ್ಲುತ್ತೆ, ಇದರಿಂದ ನನ್ನ ಮಗ ನಿಖಿಲ್ ಇಲ್ಲವೇ ಪತ್ನಿ ಅನಿತಾ ನಿಲ್ಲಿಸಿ ಗೆಲ್ಲಿಸ್ತೀನಿ ಎಂದು ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗಿದೆ.
ಆದರೆ ಜೆಡಿಎಸ್ ವರಿಷ್ಠರು ಸಾಧ್ಯವಾದರೆ ಬೆಂಗಳೂರು ಗ್ರಾಮಾಂತರ ಬಿಜೆಪಿ ಸಂಸದರಾನೀಡಲು ಸಿ.ಎನ್.ಮಂಜುನಾಥ್ ಅವರ ಪತ್ನಿ ಹಾಗೂ ದೇವೇಗೌಡರ ಪುತ್ರಿ ಅನಸೂಯಾ ಅವರನ್ನು ಚನ್ನಪಟ್ಟಣ ಬೈಎಲೆಕ್ಷನ್ ನಲ್ಲಿ ನಿಲ್ಲಿಸಲು ಮುಂದಾಗಿದ್ದಾರೆ.
ಒಂದು ವೇಳೆ ಯೋಗೇಶ್ವರ್ ಗೆ ಬಿಜೆಪಿ ಟಿಕೆಟ್ ನೀಡಲು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಒಪ್ಪದಿದ್ದರೆ ಅನಸೂಯಾ ಅವರನ್ನೇ ಬಿಜೆಪಿ ಅಭ್ಯರ್ಥಿಯಾಗಿಸಲು ಬಿಜೆಪಿ ವರಿಷ್ಠರು ಯೋಗೇಶ್ವರ್ ಮತ್ತು ಎಚ್.ಡಿ.ಕೆ ಇಬ್ಬರನ್ನೂ ಮನವೊಲಿಸಬಹುದು.
ಹೀಗಾಗಿ ಚನ್ನಪಟ್ಟಣ ಬೈಎಲೆಕ್ಷನ್ ಎನ್.ಡಿ.ಎ ಟಿಕೆಟ್ ಹಂಚಿಕೆ ಮುಂದಿನ ದಿನಗಳಲ್ಲಿ ಭಾರೀ ಕುತೂಹಲ ಕೆರಳಿಸಿದೆ.
comments
Log in to write reviews