3 ಕ್ಷೇತ್ರಗಳ ಉಪಚುನಾವಣೆ ಬಹಿರಂಗ ಪ್ರಚಾರಕ್ಕೆ ತೆರೆ
2024-11-11 08:12:35
ಬೆಂಗಳೂರು, ನ.11: ಕಳೆದ 15 ದಿನಗಳಿಂದ ರಾಜ್ಯದ 3 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ನಡೆಯುತ್ತಿದ್ದ ಅಭ್ಯರ್ಥಿಗಳ ಬಹಿರಂಗ ಪ್ರಚಾರ ಇದೀಗ ಬಂದ್ ಆಗಿವೆ.
ರಾಜ್ಯದ ಹಾವೇರಿ ಜಿಲ್ಲೆಯ ಶಿಗ್ಗಾಂವಿ, ಬಳ್ಳಾರಿ ಜಿಲ್ಲೆಯ ಸಂಡೂರು ಹಾಗೂ ರಾಮನಗರ ಜಿಲ್ಲೆಯ ಚನ್ನಪಟ್ಟಣ ಕ್ಷೇತ್ರಗಳಲ್ಲಿ ಸತತವಾಗಿ ತಿರುಗಾಡ್ತಿದ್ದ ರಾಜ್ಯ ನಾಯಕರೆಲ್ಲರೂ ಕೂಡಲೇ ಈ ಕ್ಷೇತ್ರಗಳನ್ನು ಬಿಟ್ಟು ಹೊರಹೋಗಬೇಕಿದೆ. ಏಕೆಂದರೆ ಉಪಚುನಾವಣೆ ನಡೆಯುತ್ತಿರುವ ಈ 3 ಕ್ಷೇತ್ರಗಳಲ್ಲೂ ಇಂದು ಸೋಮವಾರ ಸಂಜೆ 6 ಗಂಟೆಗೆ ಬಹಿರಂಗ ಪ್ರಚಾರಕ್ಕೆ ತೆರೆ ಬಿದ್ದಿದೆ. ಜೊತೆಗೆ ಈ ಕ್ಷೇತ್ರಗಳ ವ್ಯಾಪ್ತಿಯಲ್ಲಿ 2 ದಿನ ಮದ್ಯ ಮಾರಾಟ ಬಂದ್ ಮಾಡಲಾಗಿದೆ.
ಶಿಗ್ಗಾಂವಿ, ಚನ್ನಪಟ್ಟಣ, ಸಂಡೂರು ಉಪಚುನಾವಣೆ ರಾಜ್ಯದ ಮೂರೂ ಪ್ರಮುಖ ಪಕ್ಷಗಳಿಗೆ ಪ್ರತಿಷ್ಠೆ ಕಣವಾಗಿ ಪರಿಣಮಿಸಿದೆ. ಕೆಲ ದಿನಗಳಿಂದ ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಅಭ್ಯರ್ಥಿಗಳು ತಮ್ಮ ತಮ್ಮ ಕ್ಷೇತ್ರದಲ್ಲಿ ಮತಯಾಚನೆ ಮಾಡುವ ಮೂಲಕ ಅಬ್ಬರಿಸಿದ್ದರು. ಆದರೆ ಇಂದು ಅದಕ್ಕೆಲ್ಲಾ ತೆರೆಬಿದ್ದಿದೆ. ಅಂದರೆ 3 ವಿಧಾನಸಭಾ ಕ್ಷೇತ್ರಗಳಲ್ಲಿ ಸಂಜೆ 6 ಗಂಟೆಗೆ ಬಹಿರಂಗ ಪ್ರಚಾರ ಅಂತ್ಯವಾಗಿದೆ.
ಕ್ಷೇತ್ರದ ಮತದಾರರಲ್ಲದವರು ಕೂಡಲೇ ಈ ಕ್ಷೇತ್ರಗಳನ್ನು ಬಿಟ್ಟು ಹೊರಹೋಗಬೇಕು. ನಾಳೆಯಿಂದ 2 ದಿನ ಅಭ್ಯರ್ಥಿಗಳು ಮನೆ ಮನೆ ಪ್ರಚಾರ ಮಾಡಲು ಮಾತ್ರ ಅವಕಾಶವಿರುತ್ತದೆ. ಇನ್ನು ನೀತಿ ಸಂಹಿತೆ ಉಲ್ಲಂಘಿಸಿದವರ ವಿರುದ್ಧ ಅಧಿಕಾರಿಗಳು ಕ್ರಮಕೈಗೊಳ್ಳಲಿದ್ದಾರೆ.
2 ದಿನ ಮದ್ಯ ಮಾರಾಟ ನಿಷೇಧ...
ಬುಧವಾರ ನವೆಂಬರ್ 13 ರಂದು ಮತದಾನ ನಡೆಯುವ ಕಾರಣ ಶಿಗ್ಗಾಂವಿ, ಚನ್ನಪಟ್ಟಣ ಮತ್ತು ಸಂಡೂರು ಕ್ಷೇತ್ರಗಳ ವ್ಯಾಪ್ತಿಯಲ್ಲಿ 2 ದಿನ ಮದ್ಯ ಮಾರಾಟ ಬಂದ್ ಮಾಡಲಾಗಿದೆ. ಇಂದು ಸಂಜೆ 6 ಗಂಟೆಯಿಂದ ನವೆಂಬರ್ 14 ರ ಬೆಳಗ್ಗೆ 6 ಗಂಟೆವರೆಗೂ ಮದ್ಯ ಮಾರಾಟ ಮಾಡುವಂತಿಲ್ಲ. ಹೀಗಾಗಿ ಇಂದು ಈ ಮೂರೂ ಕ್ಷೇತ್ರಗಳ ವ್ಯಾಪ್ತಿಯ ಬಾರ್ ಗಳು ಬಾಗಿಲು ಕ್ಲೋಸ್ ಆಗುತ್ತದೆ ಅನ್ನೋದು ಗೊತ್ತಾಗ್ತಿದ್ದಂತೆ ಖರೀದಿಗೆ ಮದ್ಯ ಪ್ರಿಯರು ಮುಗಿಬಿದ್ದಿದ್ದರು.
ಬಹಿರಂಗ ಪ್ರಚಾರಕ್ಕೆ ತೆರೆಗೂ ಮುಂಚೆ ಕೊನೆ ಕ್ಷಣದ ಕಸರತ್ತು ನಡೆಸಿದ್ದ ನಾಯಕರು ಅಖಾಡದಲ್ಲಿ ಆರ್ಭಟಿಸಿದ್ದಾರೆ. ಅದರಲ್ಲೂ ಚನ್ನಪಟ್ಟಣ ಅಖಾಡದಲ್ಲಿ ಸಿಎಂ ಸಿದ್ದರಾಮಯ್ಯ ಮತ್ತು ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ನಡುವೆ ಮಾತಿನ ಯುದ್ಧವೇ ನಡೆಯಿತು.
comments
Log in to write reviews