ವಿ.ಪಕ್ಷ ಬಿಜೆಪಿಗೆ ಕೈ ಸರ್ಕಾರದ ಆದೇಶದಿಂದ ಸಿಕ್ತು ಮತ್ತೊಂದು ಅಸ್ತ್ರ!

ವಿ.ಪಕ್ಷ ಬಿಜೆಪಿಗೆ ಕೈ ಸರ್ಕಾರದ ಆದೇಶದಿಂದ ಸಿಕ್ತು ಮತ್ತೊಂದು ಅಸ್ತ್ರ!

2024-08-22 04:52:55

ಧಾರವಾಡ, ಆ.22: ಧಾರವಾಡ ನಗರದಲ್ಲಿ ಇಂದು ವಿಧಾನಸಭೆಯ ವಿರೋಧ ಪಕ್ಷದ ಉಪನಾಯಕ ಅರವಿಂದ ಬೆಲ್ಲದ್ ಅವರ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಸರ್ಕಾರದ ವಿವಾದಾತ್ಮಕ ಆದೇಶದ ವಿರುದ್ಧ ತೀವ್ರವಾಗಿ ಪ್ರತಿಭಟಿಸಿದರು.

ವಿಪಕ್ಷ ಬಿಜೆಪಿಗೆ ಅಸ್ತ್ರವಾದ ಸರ್ಕಾರದ ಈ ಆದೇಶ!

ರಾಜ್ಯಸರ್ಕಾರದ ಪ್ರವಾಸೋದ್ಯಮ ಇಲಾಖೆಯಿಂದ ಹೊರಡಿಸಲಾದ ಸುತ್ತೋಲೆಯೊಂದು ಬಿಜೆಪಿಗೆ ಹೊಸ ಅಸ್ತ್ರವಾಗಿ ಪರಿಣಮಿಸಿದೆ. ಧಾರವಾಡದಲ್ಲಿಂದು ನಡೆದ ಬಿಜೆಪಿ ಪ್ರತಿಭಟನೆ ವೇಳೆ ಈ ಹೊಸ ಅಸ್ತ್ರದ ಬಗ್ಗೆ ಪ್ರಸ್ತಾಪಿಸಿದ ವಿರೋಧ ಪಕ್ಷದ ಉಪನಾಯಕ ಅರವಿಂದ ಬೆಲ್ಲದ್, ‘ಭ್ರಷ್ಟ ಕಾಂಗ್ರೆಸ್ ಸರಕಾರ ಮುಸ್ಲಿಮರನ್ನು ಓಲೈಸುತ್ತಿದೆ. ಸಿದ್ದರಾಮಯ್ಯ ಸರಕಾರ ಇದೀಗ ಹಿಂದೂಗಳಿಗೆ ಘಾಸಿಯಾಗುವಂಥ ನಿರ್ಧಾರ ತೆಗೆದುಕೊಂಡಿದೆ' ಎಂದು ಆರೋಪಿಸಿದರು. 
ನಮ್ಮ ದೇಶದಲ್ಲಿ ಯಾತ್ರೆಗೆ ವಿಶೇಷ ಮಹತ್ವ ಇದೆ. ಧಾರ್ಮಿಕ ಸ್ಥಳಗಳಿಗೆ ಯಾತ್ರೆಗೆ ಅನ್ಯೋನ್ಯ ಸಂಬಂಧವಿದೆ. ನಮ್ಮಲ್ಲಿ ಪ್ರವಾಸವೆಂದರೆ ಧಾರ್ಮಿಕ ಕ್ಷೇತ್ರಗಳಿಗೆ ಹೋಗುವುದು.

ಹಿಂದೂ ದೇವಾಲಯಗಳನ್ನು ಅಭಿವೃದ್ಧಿ ಮಾಡದಂತೆ ಆದೇಶ!

ಶೇ. 95 ರಷ್ಟು ಜನರು ಧಾರ್ಮಿಕ ಪ್ರವಾಸಕ್ಕೆ ಹೋಗುತ್ತಾರೆ. ಧಾರ್ಮಿಕ ಪ್ರವಾಸಿ ತಾಣಗಳನ್ನು ಅಭಿವೃದ್ಧಿಪಡಿಸಬೇಕು. ಇದು ಬ್ರಿಟಿಷರ ಕಾಲದಿಂದಲೂ ಇದೆ. ಆದರೆ, ಇದೀಗ ರಾಜ್ಯಸರಕಾರದ ಹೊಸ ಆದೇಶ ನೀಡಿದೆ. ಪ್ರವಾಸಿ ತಾಣಗಳಾಗಿರೋ ಹಿಂದೂ ದೇವಾಲಯಗಳನ್ನು ಅಭಿವೃದ್ಧಿ ಮಾಡದಂತೆ ಆದೇಶ ನೀಡಿದೆ. ಸುತ್ತೋಲೆ ಮೂಲಕ ರಾಜ್ಯಸರ್ಕಾರ ಪ್ರವಾಸೋದ್ಯಮ ಇಲಾಖೆಗೆ ಆದೇಶಿಸಿದೆ. ಆ ಮೂಲಕ ಹಿಂದೂಗಳಿಗೆ ಮರ್ಮಾಘಾತ ಎಸಗಿದೆ. ಇದನ್ನು ಸಿಎಂ ಸಿದ್ದರಾಮಯ್ಯ, ಪ್ರವಾಸೋದ್ಯಮ ಸಚಿವ ಎಚ್. ಕೆ. ಪಾಟೀಲ್ ಸೇರಿ ಈ ಕೆಲಸ ಮಾಡಿದ್ದಾರೆ. ಈ ಆದೇಶವನ್ನು ಕೂಡಲೇ ಹಿಂಪಡೆಯಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ಮಾಡುತ್ತೇವೆ. ಹಿಂದೂಗಳೆಲ್ಲ ರಸ್ತೆಗಿಳಿಯಬೇಕಾಗುತ್ತದೆ ಎಂದು ಎಚ್ಚರಿಸಿದರು.

ಮುಡಾ ಹಗರಣ ಬೆಳಕಿಗೆ ಬಂದ ನಂತರ ಮತ್ತೆ ಅನೇಕ ಇಂಥ ವಿವಾದಗಳನ್ನು ಹುಟ್ಟುಹಾಕುವ ಮೂಲಕ ಸಿದ್ದರಾಮಯ್ಯ ಸರಕಾರ ತಾನೇ ಸಂಕಷ್ಟಗಳನ್ನು ಮೇಲೆ ಎಳೆದುಕೊಳ್ಳುತ್ತಿದೆ. ಈ ಹೊಸ ವಿವಾದದ ಸುತ್ತೋಲೆಯ ಅಸ್ತ್ರವನ್ನು ರಾಜ್ಯದ ವಿ.ಪಕ್ಷ ಬಿಜೆಪಿ ಹೇಗೆ ಬಳಸಿಕೊಳ್ಳಲಿದೆ? ಎಂಬುದು ಮುಂದಿನ ದಿನಗಳಲ್ಲಿ ಬಹಿರಂಗವಾಗಲಿದೆ.

author single

L Ramprasad

Managing Director

comments

No Reviews