ಭದ್ರಾ ಮೇಲ್ದಂಡೆ ಯೋಜನೆ ಅಪೂರ್ಣ: ಹೊಳಲ್ಕೆರೆ ತಾಲ್ಲೂಕಿನ ರೈತರಿಂದ ಭಾರಿ ಪ್ರತಿಭಟನೆ
2024-10-24 09:21:39
ಅಜ್ಜಂಪುರ: ರಾಷ್ಟ್ರೀಯ ನೀರಾವರಿ ಯೋಜನೆಯಾಗಿದ್ದರೂ ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿಗೆ ಕೇಂದ್ರ ಸರ್ಕಾರ 5300 ಕೋಟಿ ರೂಪಾಯಿ ಅನುದಾನ ನೀಡುತ್ತಿಲ್ಲ. ರಾಜ್ಯಸರ್ಕಾರ ಇದೇ ಕುಂಟು ನೆಪ ಹೇಳಿ ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ಬಳಿಯ ಅಬ್ಬಿನಹೊಳೆ ಬಳಿ ಸಾಗಿರುವ ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ಕೆಲಸವನ್ನು ಆಮೆವೇಗದಲ್ಲಿ ನಡೆಸುತ್ತಿದೆ. ಈ ಹಿನ್ನೆಲೆಯಲ್ಲಿ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕಿನ ರೈತರು ಅಬ್ಬಿನಹೊಳೆ ಬಳಿ ನಡೆಯುತ್ತಿರುವ ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ಬಳಿ ಧಾವಿಸಿ ತೀವ್ರ ಪ್ರತಿಭಟನೆ ನಡೆಸಿದರು.
ಸತತ 17 ವರ್ಷಗಳಿಂದ ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿಯನ್ನು ಮುಗಿಸುತ್ತೇವೆ ಎಂದು ರಾಜ್ಯಸರ್ಕಾರ ಹೇಳುತ್ತಲೇ ಬಂದಿದೆ. ಆದರೆ ಇನ್ನೂ ಯೋಜನೆಯಿಂದ ಮಧ್ಯಕರ್ನಾಟಕದ ಕೆರೆಗಳಿಗೆ ನೀರು ಹರಿಸಿಲ್ಲ. ಮುಖ್ಯವಾಗಿ ಈಗ ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ಅಜ್ಜಂಪುರ ಹೋಬಳಿಯ ಅಬ್ಬಿನಹೊಳೆ ಬಳಿ ನಿಂತಿದೆ. ಇಲ್ಲಿಂದ ಹೊಳಲ್ಕೆರೆ ತಾಲ್ಲೂಕಿನ ಕೆರೆಗಳನ್ನು ತುಂಬಿಸಲು ಆಮೆವೇಗದಲ್ಲಿ ಕಾಮಗಾರಿ ಕೆಲಸ ನಡೆಸಲಾಗುತ್ತಿದೆ. ಇದರಿಂದ ಹೊಳಲ್ಕೆರೆ ತಾಲ್ಲೂಕಿನ ರೈತಸಂಘದ ಸದಸ್ಯರು ಮತ್ತು ರೈತರು ಒಟ್ಟಾಗಿ ಅಬ್ಬಿನಹೊಳೆ ಬಳಿ ಧಾವಿಸಿ ಕಾಮಗಾರಿ ನಡೆಸುವ ಸ್ಥಳದಲ್ಲಿ ಭಾರಿ ಪ್ರತಿಭಟನೆ ನಡೆಸಿದರು.
ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿಗೆ ನೀಡಬೇಕಿರುವ 5300 ಕೋಟಿ ರೂಪಾಯಿ ಅನುದಾನವನ್ನು ಕೇಂದ್ರ ಸರ್ಕಾರದಿಂದ ಕೊಡಿಸಲು ಚಿತ್ರದುರ್ಗ ಬಿಜೆಪಿ ಸಂಸದ ಗೋವಿಂದ ಕಾರಜೋಳ ಅವಯ ಮುಂದಾಗುತ್ತಿಲ್ಲ. ಜೊತೆಗೆ ರಾಜ್ಯಸರ್ಕಾರದ ಜಲಸಂಪನ್ಮೂಲ ಸಚಿವ ಡಿ.ಕೆ ಶಿವಕುಮಾರ್ ಅವರು ಅಬ್ಬಿನಹೊಳೆ ಬಳಿ ಯೋಜನೆಯ ಕಾಮಗಾರಿಯನ್ನು ಚುರುಕುಗೊಳಿಸಿ ಬೇಗನೆ ಹೊಳಲ್ಕೆರೆ ತಾಲ್ಲೂಕಿನ ಕಡೆ ಭದ್ರಾ ನೀರು ಹರಿಸಲು ಕ್ರಮ ಕೈಗೊಂಡಿಲ್ಲ. ಇದರಿಂದ ಹೊಳಲ್ಕೆರೆ ತಾಲ್ಲೂಕಿನ ಕೆರೆಗಳಿಗೆ ನೀರು ಬರುತ್ತಿಲ್ಲ ಎಂದು ಆರೋಪಿಸಿ ಹೊಳಲ್ಕೆರೆ ತಾಲ್ಲೂಕಿನ ರೈತಸಂಘದ ಸದಸ್ಯರು ಅಬ್ಬಿನಹೊಳೆ ಬಳಿ ಪ್ರತಿಭಟನೆ ನಡೆಸಿದರು.
comments
Log in to write reviews