ಬೆಂಗಳೂರು: ಮತ್ತೆ ಮೂವರು ‌ಪಾಕಿಸ್ತಾನದ ಪ್ರಜೆಗಳು ಅರೆಸ್ಟ್!

ಬೆಂಗಳೂರು: ಮತ್ತೆ ಮೂವರು ‌ಪಾಕಿಸ್ತಾನದ ಪ್ರಜೆಗಳು ಅರೆಸ್ಟ್!

2024-10-03 04:03:33

ಆನೇಕಲ್, ಅಕ್ಟೋಬರ್ 3: ಕರ್ನಾಟಕ ರಾಜಧಾನಿ ಬೆಂಗಳೂರಿನ ಪೀಣ್ಯದಲ್ಲಿ ಅಕ್ರಮವಾಗಿ ವಾಸವಿದ್ದ ಪಾಕಿಸ್ತಾನದ ಕುಟುಂಬವನ್ನು ಪೊಲೀಸರು ಪತ್ತೆಹಚ್ಚಿದ್ದು, ಮೂವರನ್ನು ಜಿಗಣಿಯಲ್ಲಿ ಬಂಧಿಸಿದ್ದಾರೆ. ಇದರೊಂದಿಗೆ, ಕಳೆದ ಮೂರ್ನಾಲ್ಕು ದಿನಗಳ ಅವಧಿಯಲ್ಲಿ ಐದಕ್ಕೂ ಹೆಚ್ಚು ಮಂದಿ ಪಾಕಿಸ್ತಾನ ಪ್ರಜೆಗಳನ್ನು ಬಂಧಿಸಿದಂತಾಗಿದೆ. ಹಿಂದೂ ಹೆಸರುಗಳನ್ನಿಟ್ಟುಕೊಂಡು ದಾವಣೆಗರೆಯಲ್ಲಿ ವಾಸವಿದ್ದ ಪಾಕಿಸ್ತಾನಿ ಪ್ರಜೆಗಳನ್ನು ಬುಧವಾರವಷ್ಟೇ ಪೊಲೀಸರು ಬೆಂಗಳೂರಿನಲ್ಲಿ ಬಂಧಿಸಿದ್ದರು.

ಕಳೆದ ಸೋಮವಾರ ಜಿಗಣಿ ಬಳಿ ನಾಲ್ವರು ಪಾಕ್ ಪ್ರಜೆಗಳನ್ನು ಬಂಧಿಸಲಾಗಿತ್ತು. ಪಾಕಿಸ್ತಾನದ ಪೇಶಾವರ ಮೂಲದ ರಷೀದ್ ಅಲಿ ಸಿದ್ದಿಕಿ ಕುಟುಂಬದ ನಾಲ್ವರು ಅರೆಸ್ಟ್ ಆಗಿದ್ದರು. ಅವರನ್ನು ತನಿಖೆಗೆ ಒಳಪಡಿಸಿದಾಗ ತಿಳಿದುಬಂದ ಮಾಹಿತಿ ಮೇರೆಗೆ ಇದೀಗ ಪೀಣ್ಯದಲ್ಲಿ ವಾಸವಿದ್ದ ಪತಿ, ಪತ್ನಿ ಹಾಗೂ ಪುತ್ರಿಯನ್ನು ಬಂಧಿಸಲಾಗಿದೆ.

ಭಾರತಕ್ಕೆ ನುಸುಳಿದ್ದಾರೆ 15ಕ್ಕೂ ಹೆಚ್ಚು ಮಂದಿ!
ಬಂಧಿತ ಪಾಕಿಸ್ತಾನ ಪ್ರಜೆಗಳ ವಿಚಾರಣೆ ವೇಳೆ ಮತ್ತಷ್ಟು ಸ್ಪೋಟಕ ಮಾಹಿತಿ ಬಹಿರಂಗವಾಗಿದೆ. ಪಾಕಿಸ್ತಾನದಿಂದ 15ಕ್ಕೂ ಹೆಚ್ಚು ಜನ ಭಾರತಕ್ಕೆ ಅಕ್ರಮವಾಗಿ ನುಸುಳಿ ಬಂದಿರುವುದು ಗೊತ್ತಾಗಿದೆ. ಹದಿನೈದಕ್ಕೂ ಅಧಿಕ ಮಂದಿ ಮೆಹದಿ ಫೌಂಡೇಷನ್ ಸೇರಿದ್ದರು. ಇವರೆಲ್ಲ ಯೂನಸ್ ಅಲ್ಗೋರ್ ಧರ್ಮ ಗುರುಗಳ ಪರ ಪ್ರಚಾರಕ್ಕಾಗಿ ಆಗಮಿಸಿದ್ದಾರೆ ಎನ್ನಲಾಗಿದೆ.

ಬೆಂಗಳೂರಿನಲ್ಲಿದ್ದರು 7 ಮಂದಿ
ರಷೀದ್ ಅಲಿ ಸಿದ್ದಿಕಿ‌ ಕುಟುಂಬದ ಜೊತೆ ಭಾರತಕ್ಕೆ ನುಸುಳಿದವರಲ್ಲಿ ಏಳು ಮಂದಿ ಬೆಂಗಳೂರಿಗೆ ಬಂದಿದ್ದರೆ ಉಳಿದವರು ಅಸ್ಸಾಂ, ಒರಿಸ್ಸಾ ಮತ್ತು ಹೈದರಾಬಾದ್ ಕಡೆ ತೆರಳಿದ್ದರು. ಜಿಗಣಿಯಲ್ಲಿ ರಷೀದ್ ಕುಟುಂಬ ಅರೆಸ್ಟ್ ಆಗುತ್ತಿದ್ದಂತೆಯೇ ಮತ್ತಷ್ಟು ಮಾಹಿತಿ ಹೊರಬರಲಾರಂಭವಾಗಿದೆ.

ಸದ್ಯ ಪೀಣ್ಯದಲ್ಲಿದ್ದ ಪಾಕ್ ಕುಟುಂಬವನ್ನ ಬಂಧಿಸಿದ ಪೊಲೀಸರು ಜಿಗಣಿ ಪೊಲೀಸ್ ಠಾಣೆಗೆ ಕರೆತಂದಿದ್ದಾರೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಪಾಕ್ ಪ್ರಜೆಗಳು ಬಂಧನವಾಗುವ ಸಾಧ್ಯತೆ ಇದೆ.

ಬಂಧಿತ ಮೂವರು ಪಾಕ್‌ ಪ್ರಜೆಗಳಿಗೆ ಸದ್ಯ ಜಿಗಣಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ‌ ವೈದ್ಯಕೀಯ ತಪಾಸಣೆ ನಡೆಸಲಾಗಿದೆ.

ಬೆಂಗಳೂರಿನ ಜಿಗಣಿಯಲ್ಲಿ ಪಾಕಿಸ್ತಾನ ಪ್ರಜೆಗಳು ಬಂಧನವಾಗಿರುವ ಸಂಬಂಧ ಹೆಚ್ಚಿನ ತನಿಖೆಗಾಗಿ ಪೊಲೀಸರ 4 ತಂಡಗಳ ರಚನೆ ಮಾಡಲಾಗಿತ್ತು. ತನಿಖೆ ಚುರುಕುಪಡೆದ ಬೆನ್ನಲ್ಲೇ ಒಂದೊಂದೇ ಸ್ಫೋಟಕ ಮಾಹಿತಿ ಹೊರಬರುತ್ತಿದೆ.

author single

L Ramprasad

Managing Director

comments

No Reviews