ರೇಣುಕಾಸ್ವಾಮಿ ಕೊಲೆ ಕೇಸ್: ಪವಿತ್ರಾಗೌಡ ಸೇರಿ ಎಲ್ಲಾ ಆರೋಪಿಗಳಿಗೆ ಜಾಮೀನು ನಿರಾಕರಣೆ!

ರೇಣುಕಾಸ್ವಾಮಿ ಕೊಲೆ ಕೇಸ್: ಪವಿತ್ರಾಗೌಡ ಸೇರಿ ಎಲ್ಲಾ ಆರೋಪಿಗಳಿಗೆ ಜಾಮೀನು ನಿರಾಕರಣೆ!

2024-09-01 10:47:27

ಬೆಂಗಳೂರು, ಆ.31: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಎ1 ಆರೋಪಿ ಪವಿತ್ರಾಗೌಡ ಸೇರಿದಂತೆ ಎಲ್ಲಾ ಆರೋಪಿಗಳ(ಎ2 ದರ್ಶನ್ ತೂಗುದೀಪ್ ಹೊರತುಪಡಿಸಿ) ಜಾಮೀನು ಅರ್ಜಿಗಳು ವಜಾಗೊಂಡಿವೆ.

ಪ್ರಕರಣದ ಎ1 ಆರೋಪಿ ಪವಿತ್ರಾಗೌಡ ಅವರು ಜಾಮೀನು ಅರ್ಜಿ ಸಲ್ಲಿಸಿದ್ದಂತೆ ಪ್ರಕರಣದ ಎ10 ಆರೋಪಿಯಾಗಿದ್ದ ಸ್ಟೋನಿ ಬ್ರೂಕ್ ಮಾಲೀಕ ವಿನಯ್, ಕಾರು ಚಾಲಕ ಅನುಕುಮಾರ್, ಕೇಶವಮೂರ್ತಿ ಅವರುಗಳು ಸಹ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದರು.
ಜೊತೆಗೆ ಇನ್ನೂ ಕೆಲವು ಆರೋಪಿಗಳು ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಕೆಲ ದಿನದ ಹಿಂದೆ ಆರೋಪಿಗಳ ಪರ ವಕೀಲರುಗಳು ನ್ಯಾಯಾಲಯದಲ್ಲಿ ವಾದ ಮಂಡಿಸಿದ್ದರು. ಅದರೆ ಇದಕ್ಕೆ ಆಕ್ಷೇಪಿಸಿ ಸರ್ಕಾರಿ ವಕೀಲರು ಜಾಮೀನು ನೀಡಬಾರದೆಂದು ವಾದ ಮಂಡಿಸಿದ್ದರು. ಎರಡೂ ಪಕ್ಷಗಳ ಪರ ವಾದ ಆಲಿಸಿದ್ದ ನ್ಯಾಯಾಧೀಶರು ಆದೇಶವನ್ನು ಆಗಸ್ಟ್ 31ಕ್ಕೆ ಕಾಯ್ದಿರಿಸಿದ್ದರು. ಅದರಂತೆ ಇಂದು ಆದೇಶ ಹೊರಬಿದ್ದಿದ್ದು, ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಎಲ್ಲಾ ಆರೋಪಿಗಳಿಗೆ ಜಾಮೀನು ನಿರಾಕರಿಸಲಾಗಿದೆ.

ಪ್ರಕರಣದ ಎ1 ಆರೋಪಿ ಪವಿತ್ರಾ ಗೌಡ, ಎ10 ಆರೋಪಿ ಸ್ಟೋನಿ ಬ್ರೂಕ್ ಮಾಲೀಕ ವಿನಯ್, ಕಾರು ಚಾಲಕ ಅನುಕುಮಾರ್, ಕೇಶವಮೂರ್ತಿ ಅವರುಗಳು ಸಹ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದರು. 3 ದಿನದ ಹಿಂದೆ ಆರೋಪಿಗಳ ವಾದ ಮಂಡಿಸಿದ್ದ ವಕೀಲರು ಪವಿತ್ರಾ ಗೌಡ ಅವರದ್ದು ಕೊಲೆಯಲ್ಲಿ ಯಾವುದೇ ಪಾತ್ರವಿಲ್ಲ. ರೇಣುಕಾಸ್ವಾಮಿ ಕಳಿಸಿದ್ದ ಸಂದೇಶವನ್ನು ಎ3 ಆಗಿರುವ ಪವನ್, ದರ್ಶನ್​ಗೆ ಹೇಳಿದ, ರೇಣುಕಾಸ್ವಾಮಿ ಅಪಹರಣ ಆದ ದಿನವೂ ಸಹ ದರ್ಶನ್ ತನ್ನ ಮನೆಗೆ ವಿನಯ್ ಜೊತೆ ಬಂದು ನನ್ನನ್ನು ಆ ಸ್ಥಳಕ್ಕೆ ಕರೆದುಕೊಂಡು ಹೋದ. ರೇಣುಕಾ ಸ್ವಾಮಿ, ಶ್ವಾಸಕೋಶದ ಮೂಳೆ ಮುರಿದು ಸಾವನ್ನಪ್ಪಿದ್ದಾನೆ ಎನ್ನಲಾಗಿದೆ. ಆದರೆ ರೇಣುಕಾ ಸ್ವಾಮಿಯ ಮೂಳೆ ಮುರಿತಕ್ಕೂ ಪವಿತ್ರಾ ಗೌಡಗೂ ಸಂಬಂಧವಿಲ್ಲ, ಆಕೆ ಮಹಿಳೆಯಾಗಿದ್ದು, ಆಕೆಗೆ ಅಪ್ರಾಪ್ತ ಮಗಳಿದ್ದಾಳೆ ಹಾಗಾಗಿ ನ್ಯಾಯಾಲಯ ಜಾಮೀನು ನೀಡಬೇಕು ಎಂದು ಪವಿತ್ರಾ ಪರ ವಕೀಲರು ವಾದ ಮಂಡಿಸಿದ್ದರು.

ಆದರೆ ಸರ್ಕಾರಿ ವಕೀಲರು ಮಹಿಳೆ ಎಂಬ ಕಾರಣಕ್ಕೆ ಜಾಮೀನು ನೀಡುವಂತಿಲ್ಲ ಎಂದಿದ್ದಲ್ಲದೆ ಸುಪ್ರೀಂಕೋರ್ಟ್​ನ ಕೆಲವು ಆದೇಶಗಳನ್ನು ಸಹ ಉಲ್ಲೇಖಿಸಿದರು. ಅಲ್ಲದೆ, ಪ್ರಕರಣದ ಎಲ್ಲ ಆರೋಪಿಗಳೂ ಸಹ ಕೊಲೆಯಲ್ಲಿ ಭಾಗಿಯಾಗಿದ್ದಾರೆ. ಎಲ್ಲರಿಗೂ ಸಹ ಕೆಟ್ಟ ಉದ್ದೇಶಗಳು ಇದ್ದವು ಎಂದು ವಾದ ಮಂಡಿಸಿದ್ದರು. ಹಾಗಾಗಿ ಜಾಮೀನು ನೀಡಬಾರದು ಎಂದಿದ್ದರು. ಇಂದು ಆದೇಶ ಪ್ರಕಟಿಸಿರುವ 57ನೇ ಸಿಸಿಎಚ್ ನ್ಯಾಯಾಲಯ ಎಲ್ಲ ಆರೋಪಿಗಳ ಜಾಮೀನು ಅರ್ಜಿ ವಜಾ ಮಾಡಿದೆ.

author single

L Ramprasad

Managing Director

comments

No Reviews